More

    ಕೋವಿಡ್ ಚಿಕಿತ್ಸೆಗೆ ತಾಲೂಕಾಸ್ಪತ್ರೆ ಸಜ್ಜುಗೊಳಿಸಿ

    ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ತ್ವರಿತವಾಗಿ ತಾಲೂಕು ಕೋವಿಡ್ ಕೇರ್ ಸೆಂಟರ್​ಗಳನ್ನು ಸುಸಜ್ಜಿತಗೊಳಿಸಿ ಕಾರ್ಯಾರಂಭಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾತ್ರಿ ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಆಸ್ಪತ್ರೆಯಲ್ಲಿ ಕನಿಷ್ಠ 50 ಬೆಡ್​ಗಳ ವ್ಯವಸ್ಥೆ ಇರಬೇಕು. ಈಗಾಗಲೇ ಕೆಲ ತಾಲೂಕುಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನು ಕಾರ್ಯಾರಂಭಗೊಳಿಸಿದ್ದು, ಉಳಿದ ತಾಲೂಕುಗಳಲ್ಲೂ ತ್ವರಿತವಾಗಿ ಸಿದ್ಧಗೊಳಿಸಬೇಕು ಎಂದರು.

    ಜಿಲ್ಲೆಯಲ್ಲಿರುವ ಫಿಜಿಷಿಯನ್​ಗಳು ತಾಲೂಕುವಾರು ಉಸ್ತುವಾರಿ ವಹಿಸಬೇಕು. ಹೆಚ್ಚುವರಿ ಫಿಜಿಷಿಯನ್ ತಜ್ಞರ ಅಗತ್ಯವಿದ್ದರೆ ಖಾಸಗಿ ವೈದರ ಸೇವೆ ಪಡೆಯಬೇಕು. ಎಲ್ಲ ತಾಲೂಕು ಕೋವಿಡ್ ಆಸ್ಪತ್ರೆಗಳಿಗೆ ವೆಂಟಿಲೇಟರ್​ಗಳನ್ನು ಒದಗಿಸಬೇಕು. ಹೆಚ್ಚುವರಿಯಾಗಿ ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ಯಾನರ್ ಖರೀದಿಸಿ ಪೂರೈಸಬೇಕು ಎಂದರು.

    ಹೆಚ್ಚುವರಿ ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು. ಯಾವುದೇ ರೋಗ ಲಕ್ಷಣವಿಲ್ಲದವರನ್ನು ಹೋಂ ಕ್ವಾರಂಟೈನ್​ನಲ್ಲಿ ಉಳಿಸಬೇಕು. ಇವರ ಆರೋಗ್ಯ ತಪಾಸಣೆ ಹಾಗೂ ನಿಗಾಕ್ಕೆ ಆಯುಷ್ ತರಬೇತಿ ಪಡೆಯುತ್ತಿರುವ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಜಿಲ್ಲಾಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು. ಸಾಧ್ಯವಾದರೆ ಇವರಿಗೆ ಕೋವಿಡ್ ತಪಾಸಣೆ ಕುರಿತು ಅಲ್ಪಾವಧಿ ತರಬೇತಿ ನೀಡಿ ಸಜ್ಜುಗೊಳಿಸಬೇಕು ಎಂದರು.

    ಕೋವಿಡ್ ಸೋಂಕಿದ್ದರೂ ರೋಗ ಲಕ್ಷಣ ರಹಿತರು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಸರ್ಕಾರ ನಿಯಮ ರೂಪಿಸಿದೆ. ಮನೆಯಲ್ಲಿ ಪ್ರತ್ಯೇಕ ರೂಂ, ಶೌಚಗೃಹ ವ್ಯವಸ್ಥೆಗಳಿದ್ದರೆ ರೋಗಿಗಳು ಬಯಸಿದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಇವರಿಗೆ ಜಿಲ್ಲಾ ವೈದ್ಯಕೀಯ ತಂಡ ಟೆಲಿಕನ್ಸಲ್​ಟೇಷನ್ ಮೂಲಕ ಚಿಕಿತ್ಸೆ ನೀಡಬಹುದು. ವೈದ್ಯರು ರೌಂಡ್ಸ್​ನಿಂದ ಚಿಕಿತ್ಸೆ ನೀಡಬಹುದು. ಇಂತಹ ಸಾಧ್ಯತೆಗಳನ್ನು ಪರಿಶೀಲಿಸಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಡಾ. ಪ್ರಭಾಕರ ಕುಂದೂರ ಸೇರಿ ವಿವಿಧ ವೈದ್ಯರು ಉಪಸ್ಥಿತರಿದ್ದರು.

    ರಟ್ಟಿಹಳ್ಳಿ ಆಸ್ಪತ್ರೆಗೆ ಸಿಇಒ ಭೇಟಿ

    ರಟ್ಟಿಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಸ್ಥಳೀಯ ವೈದ್ಯಾಧಿಕಾರಿಗಳೊಂದಿಗೆ ಜಿಪಂ ಸಿಇಒ ರಮೇಶ ದೇಸಾಯಿ ರ್ಚಚಿಸಿದರು.

    ರಟ್ಟಿಹಳ್ಳಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೋವಿಡ್ ತುರ್ತು ಸಂದರ್ಭದಲ್ಲಿ ಸ್ಥಳೀಯವಾಗಿಯೇ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೋವಿಡ್ ಕೇರ್ ಸೆಂಟರ್, ಐಸೊಲೇಷನ್ ವಾರ್ಡ್, ಪ್ರೖೆಸರೈಸ್ ಆಕ್ಸಿಜನ್ ಪೂರೈಕೆಯ ಚಿಕಿತ್ಸಾ ಸೌಲಭ್ಯವಿರುವ ಬೆಡ್ ವ್ಯವಸ್ಥೆ ಸೇರಿ ಕನಿಷ್ಠ 50 ಹಾಸಿಗೆಗಳ ಚಿಕಿತ್ಸಾ ಕೇಂದ್ರವಾಗಿ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ತ್ವರಿತವಾಗಿ ಕೋವಿಡ್ ಸೇವೆಗೆ ಸಜ್ಜುಗೊಳಿಸುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

    ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸೇವೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಒಳ ಆವರಣ ಹಾಗೂ ಹೊರ ಆವರಣದ ಸ್ವಚ್ಛತೆ, ಅಗತ್ಯ ಸೌಕರ್ಯಕ್ಕೆ ವಿವರ ಸಲ್ಲಿಸುವಂತೆ ಸೂಚಿಸಿದರು. ಡಾ. ಎಂ. ನಿಲೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts