More

    ಕೋವಿಡ್ ಕೇರ್ ಸೆಂಟರ್​ಗೆ ಸಿದ್ಧತೆ

    ಹಾವೇರಿ: ಗ್ರಾಮೀಣ ಭಾಗದ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆಯಾಗುತ್ತಿದೆ. ಕರೊನಾ ಪರೀಕ್ಷಾ ವರದಿ ತಂದರೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ ಎಂದು ಖಾಸಗಿ ಆಸ್ಪತ್ರೆಗಳಲ್ಲಿ ಹೇಳಿ ಕಳುಹಿಸುತ್ತಿರುವ ಪ್ರಕರಣಗಳು ತಾಲೂಕಿನಲ್ಲಿ ಬೆಳಕಿಗೆ ಬಂದಿವೆ. ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯ ಸತೀಶ ಸಂದಿಮನಿ ಒತ್ತಾಯಿಸಿದರು.

    ನಗರದ ತಾಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಮಳೆಗಾಲ ಆರಂಭವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಜನತೆ ಶೀತ, ಕೆಮ್ಮು, ಜ್ವರ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಆದರೆ, ಅಲ್ಲಿ ಕರೊನಾ ಪರೀಕ್ಷಾ ವರದಿ ತನ್ನಿ ಎಂದರೆ ಹೇಗೆ?. ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಜನ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಟಿಎಚ್​ಒ ಡಾ. ಪ್ರಭಾಕರ ಕುಂದೂರ ಪ್ರತಿಕ್ರಿಯಿಸಿ, ‘ತಾಲೂಕಿನ ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆ ಎದುರಾಗಿಲ್ಲ. ಪ್ರತಿ ತಿಂಗಳು ಇಂಡೆಂಟ್ ಪ್ರಕಾರ ಔಷಧ ಪೂರೈಕೆಯಾಗುತ್ತಿದೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳು ಕರೊನಾ ವರದಿ ತಂದರೆ ಮಾತ್ರ ಚಿಕಿತ್ಸೆ ನೀಡುತ್ತೇವೆ ಎನ್ನುವುದು ತಪ್ಪು. ತಾಲೂಕಿನಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೆ ಸಂಬಂಧಪಟ್ಟವರು ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

    ಅಲ್ಲದೆ, ತಾಲೂಕಿನಲ್ಲಿ ಕರೊನಾ ಪ್ರಕರಣಗಳು ಹೆಚ್ಚಾದರೆ ಚಿಕಿತ್ಸೆಗಾಗಿ ಮುಂಜಾಗ್ರತೆ ಕ್ರಮವಾಗಿ 50 ಬೆಡ್​ಗಳ ಕೋವಿಡ್ ಕೇರ್ ಸೆಂಟರ್​ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ತಾಲೂಕಿನ ವಿವಿಧ ವಸತಿ ನಿಲಯಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಶುದ್ಧ ಘಟಕ ಗುತ್ತಿಗೆ ಏಜೆನ್ಸಿ ರದ್ದುಗೊಳಿಸಿ: ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಕೆಲ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡಿವೆ. ಘಟಕಗಳ ಮೇಲೆ ನಿರ್ವಹಣೆಯ ಗುತ್ತಿಗೆ ಪಡೆದ ಏಜೆನ್ಸಿಯ ಹೆಸರು, ದೂರವಾಣಿ ಸಂಖ್ಯೆ ನಮೂದಿಸಿಲ್ಲ. ಇದರಿಂದಾಗಿ ಘಕಟಗಳು ಬಂದ್ ಆಗಿದ್ದರೂ ಗುತ್ತಿಗೆ ಪಡೆದ ಏಜೆನ್ಸಿಯವರನ್ನು ಸಂರ್ಪಸಲು ಸಾಧ್ಯವಾಗುತ್ತಿಲ್ಲ. ಕಳೆದ 4 ವರ್ಷಗಳಿಂದ ಇದೇ ಸಮಸ್ಯೆಯಾಗುತ್ತಿದ್ದು, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಘಟಕಗಳ ನಿರ್ವಹಣೆ ಗುತ್ತಿಗೆ ಪಡೆದ ಏಜೆನ್ಸಿಗೆ ಹಣ ಪಾವತಿಸದೇ ಅವರ ಗುತ್ತಿಗೆ ರದ್ದುಗೊಳಿಸಬೇಕು ಎಂದು ಎಂದು ಸದಸ್ಯರಾದ ಸತೀಶ ಸಂದಿಮನಿ, ಮಾಲತೇಶ ಬನ್ನಿಮಟ್ಟಿ ಒತ್ತಾಯಿಸಿದರು.

    ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿ ಉಮೇಶ ಮಾತನಾಡಿ, ತಾಲೂಕಿನಲ್ಲಿ 77 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಏಜೆನ್ಸಿಗಳಿಗೆ ಗುತ್ತಿಗೆ ನೀಡಿದ್ದು ಅದರಲ್ಲಿ 8 ಮಾತ್ರ ಬಂದ್ ಆಗಿವೆ. ಶೀಘ್ರವೇ ಅವುಗಳನ್ನು ಸರಿಪಡಿಸಿ ಜನರಿಗೆ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲಾಗುತ್ತದೆ ಎಂದರು.

    ಇಒ ಡಾ. ಬಸವರಾಜ ಡಿ.ಸಿ. ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಘಟಕಗಳ ನಿರ್ವಹಣೆಯ ಗುತ್ತಿಗೆ ಪಡೆದ ಏಜೆನ್ಸಿಯವರಿಗೆ ಹಣ ಪಾವತಿಸಬೇಡಿ. ಇಲಾಖೆ ವತಿಯಿಂದಲೇ ಸರಿಪಡಿಸಿ ಎಷ್ಟು ವೆಚ್ಚಾಗಿರುತ್ತದೆಯೋ ಅದನ್ನು ಗುತ್ತಿಗೆ ಪಡೆದ ಏಜೆನ್ಸಿಯ ಲೆಕ್ಕಕ್ಕೆ ಸೇರಿಸಿ ಬಿಲ್ ನೀಡುವಾಗ ಅದನ್ನು ವಜಾ ಮಾಡಿ ಹಣ ಪಾವತಿಸಿ ಎಂದರು.

    ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಪಶುಪಾಲನೆ ಇಲಾಖೆ ಸೇರಿ ವಿವಿಧ ಇಲಾಖೆಗಳ ಪಗ್ರತಿ ಪರಿಶೀಲನೆ ಮಾಡಲಾಯಿತು.

    ಪ್ರವೇಶ ಶುಲ್ಕಕ್ಕೆ ಒತ್ತಾಯಿಸುವಂತಿಲ್ಲ: ಶಾಲೆಗಳ ಆರಂಭಕ್ಕೆ ಸರ್ಕಾರ ಇನ್ನು ಸೂಚನೆ ನೀಡದೇ ಇದ್ದರೂ ಕೆಲ ಖಾಸಗಿ ಶಾಲೆಗಳು ಪಾಲಕರಿಗೆ ಪ್ರವೇಶ ಪಡೆದು ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿರುವ ಕುರಿತು ಸದಸ್ಯ ಸತೀಶ ಸಂದಿಮನಿ ಬಿಇಒ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಬಿಇಒ ಎಂ.ಎಚ್. ಪಾಟೀಲರು, ‘ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆಯುವಂತೆ ಸೂಚಿಸಲಾಗಿದೆ. ಯಾರೂ ಒತ್ತಾಯಪೂರ್ವಕವಾಗಿ ಶುಲ್ಕ ಕಟ್ಟುವಂತೆ ಪಾಲಕರಿಗೆ ಹೇಳದಂತೆ ಸೂಚಿಸಲಾಗಿದೆ. ಈ ಕುರಿತು ದೂರುಗಳು ಬಂದರೆ ಕ್ರಮ ವಹಿಸಲಾಗುತ್ತದೆ. ಪ್ರಸಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಗಮವಾಗಿ ನಡೆಯಲು ವಿವಿಧ ಇಲಾಖೆಗಳು, ಜನಪ್ರತಿನಿಧಿಗಳು ಉತ್ತಮ ಸಹಕಾರ ನೀಡಿದ್ದಾರೆ. ಅವರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು. ಆಗ ಸದಸ್ಯ ಮಾಲತೇಶ ಬನ್ನಿಮಟ್ಟಿ ಫಲಿತಾಂಶವೂ ಉತ್ತಮವಾಗಿ ಬರಬೇಕು ಎಂದರು. ಬಿಇಒ ಅವರು ನಾವು ಕರೊನಾ ಸಮಯದಲ್ಲಿ ಪರೀಕ್ಷೆ ನಡೆಸಿ ಪಾಸಾಗಿದ್ದೇವೆ. ಇನ್ನು ವಿದ್ಯಾರ್ಥಿಗಳು ಪಾಸಾಗಬೇಕು ಎಂದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts