More

    ಕೋವಿಡ್ ಆಸ್ಪತ್ರೆಯಾದ ಸಮುದಾಯ ಭವನ

    ನರಗುಂದ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಬಸವೇಶ್ವರ ಸಮುದಾಯ ಭವನವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಘೊಷಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಪಟ್ಟಣದ ಗಾಡಿ ಓಣಿ, ಸಿದ್ದನಬಾವಿ ಬಡಾವಣೆಯ ಕಂಟೇನ್ಮೆಂಟ್ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ನಂತರ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಲಿರುವ ಬಸವೇಶ್ವರ ಸಮುದಾಯ ಭವನವನ್ನು ಪರಿಶೀಲಿಸಿ ಮಾತನಾಡಿದರು.

    ಪಟ್ಟಣದ ಜಮಲಾಪೂರ ಬಡಾವಣೆಯಲ್ಲಿ 1, ಹೊಸುರ ಓಣಿಯಲ್ಲಿ 1, ಸಿದ್ದನಬಾವಿ ಬಡಾವಣೆಯಲ್ಲಿ 1, ಗಾಡಿ ಓಣಿಯಲ್ಲಿ 15 ಸೇರಿ ತಾಲೂಕಿನಲ್ಲಿ ಒಟ್ಟು 18 ಜನರಿಗೆ ಸೋಂಕು ತಗುಲಿರುವುದು ಆರೋಗ್ಯ ಇಲಾಖೆಯಿಂದ ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 18 ಜನರನ್ನು ತಾಲೂಕಿನ ಬೆನಕನಕೊಪ್ಪ ಮುರಾರ್ಜಿ ವಸತಿ ಶಾಲೆಯಲ್ಲಿ ಹಾಗೂ 56 ಜನರನ್ನು ಸಿದ್ದಾಪೂರದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಬೆಳ್ಳೇರಿ ಡಿಪ್ಲೊಮಾ ಕಾಲೇಜನ್ನು ತಾಲೂಕಾಡಳಿತದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

    ತಾಲೂಕಿನಾದ್ಯಂತ ಲಭ್ಯವಿರುವ ಎಲ್ಲ ಸುಸಜ್ಜಿತ ಸರ್ಕಾರಿ ಕಟ್ಟಡಗಳನ್ನು ಗುರುತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರದ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಆಗಸ್ಟ್ ತಿಂಗಳವರೆಗೂ ಔಷಧ ಸಿಂಪಡಿಸಬೇಕು. ಬಸವೇಶ್ವರ ಸಮುದಾಯ ಭವನದಲ್ಲಿ ದಾಖಲಾಗುವ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ತಾಲೂಕು ಕ್ರೀಡಾಂಗಣದಲ್ಲಿರುವ ವಸತಿ ನಿಲಯದಲ್ಲಿರಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

    ಸಮುದಾಯ ಭವನದ ಕೋವಿಡ್ ಆಸ್ಪತ್ರೆಯ ಬಳಿ ವಾಹನ ಸಂಚಾರ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಅಂತಹ ವಾಹನಗಳನ್ನು ಸೀಜ್ ಮಾಡುವಂತೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ ಅವರಿಗೆ ಸೂಚಿಸಿದರು. ತಹಸೀಲ್ದಾರ್ ಎ.ಎಚ್. ಮಹೇಂದ್ರ, ತಾಪಂ ಇಒ ಚಂದ್ರಶೇಖರ ಕುರ್ತಕೋಟಿ, ವೈದ್ಯಾಧಿಕಾರಿಗಳಾದ ರೇಣುಕಾ ಕೊರವನವರ, ಪ್ರವೀಣ ಮೇಟಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಎಸ್.ಎಲ್. ಪಾಟೀಲ, ಶಿವಕುಮಾರ ಶೆಟ್ಟರ್, ಎ.ಆರ್.ಭೋವಿ, ಇತರರಿದ್ದರು.

    ಪಶು ವೈದ್ಯಕೀಯ ಕಾಲೇಜ್ ಕ್ವಾರಂಟೈನ್ ಕೇಂದ್ರ: ಜಿಲ್ಲೆಯಲ್ಲಿ ಕರೊನಾ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡರೆ ಗದಗ ನಗರದಲ್ಲಿರುವ ಪಶು ವೈದ್ಯಕೀಯ ಕಾಲೇಜ್ ಅನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆದು ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲಾಗುವುದು. ರಾಜ್ಯ ಸರ್ಕಾರ ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಶಕ್ತಿ ಮೀರಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ. ಸಾರ್ವಜನಿಕರು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ ಕರೊನಾ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

    ಸ್ಥಳೀಯರಿಂದ ವಿರೋಧ: ನರಗುಂದ ಪಟ್ಟಣದ ಬಸವೇಶ್ವರ ಸಮುದಾಯ ಭವನವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡುವ ನಿರ್ಧಾರಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಳೆದೊಂದು ವಾರದಿಂದ ಅವಧಿಯಲ್ಲಿ ಪಟ್ಟಣದಲ್ಲಿ ಕರೊನಾ ಸೊಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಮಧ್ಯೆ ಕರೊನಾ ಸೋಂಕಿತರ ಆರೈಕೆಗೆ ಇಲ್ಲಿನ ಸಮುದಾಯ ಭವನವನ್ನು ಆಸ್ಪತ್ರೆಯನ್ನಾಗಿ ಮಾರ್ಪಡಿಸುವುದು ಖಂಡನೀಯ. ಸಮುದಾಯ ಭವನಕ್ಕೆ ಹೊಂದಿಕೊಂಡಿರುವ ಸರ್ವಜ್ಞ ಸರ್ಕಲ್ ಹಾಗೂ ಸೋಮಾಪುರ ಬಡಾವಣೆಯಲ್ಲಿ ನೂರಾರು ಕುಟುಂಬಗಳಿವೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಸೇರಿ ಸಾವಿರಾರು ಜನರು ಪ್ರತಿನಿತ್ಯ ಇಲ್ಲಿ ಸಂಚರಿಸುತ್ತಾರೆ. ಆದ್ದರಿಂದ, ಇಲ್ಲಿ ಕೋವಿಡ್ ಆಸ್ಪತ್ರೆ ತೆರೆಯುವುದು ಬೇಡ ಎಂದು ಹುಬ್ಬಳ್ಳಿ-ವಿಜಯಪುರ ರಸ್ತೆಯನ್ನು ತಡೆದ ನೂರಾರು ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು. ವೆಂಕಟೇಶ ಸಾಬಳೆ, ವಲ್ಲಭ ಆನೇಗುಂದಿ, ಅಜಯ ಮೋರೆ, ಮಹಮ್ಮದ್ ಜವಳಿ, ಅಶೋಕ ಮೋರೆ, ಮೋದಿನ ರಾಮದುರ್ಗ, ಮಾರುತಿ ಸಾಬಳೆ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts