More

    ಕೋಳಿಪೇಟೆ ಮಕ್ಕಳಿಬ್ಬರ ಕೂಗಿಗೆ ಸಿಕ್ಕಿದ ಸ್ಪಂದನೆ

    ಹುಬ್ಬಳ್ಳಿ: ತಂದೆ-ತಾಯಿ ಇಬ್ಬರೂ ಲಾಕ್​ಡೌನ್​ನಿಂದಾಗಿ ದೂರದ ರಾಜಸ್ಥಾನದಲ್ಲಿ ಸಿಲುಕಿದ್ದಾರೆ. ಮನೆಯಲ್ಲಿ ಇರುವುದು ಇಬ್ಬರು ಹೆಣ್ಣು ಮಕ್ಕಳಷ್ಟೇ. ಪಾಲಕರನ್ನು ನೆನೆದು ಆ ಮುಗ್ಧ ಮಕ್ಕಳು 50 ದಿನದಲ್ಲಿ ಅದೆಷ್ಟು ಅತ್ತಿದ್ದಾರೋ ಲೆಕ್ಕವಿಲ್ಲ.

    ಇದು ಹುಬ್ಬಳ್ಳಿ ಮರಾಠಾ ಗಲ್ಲಿ ಬಳಿಯ ಕೋಳಿಪೇಟೆಯಲ್ಲಿ ವಾಸ ಇರುವ ಮಕ್ಕಳ ವ್ಯಥೆ. 10 ಹಾಗೂ 7 ವರ್ಷದ ಈ ಮಕ್ಕಳ ಪಾಲಕರು ರಾಜಸ್ಥಾನದ ಶಿವಾನಾ ಜಿಲ್ಲೆ ಆಮ್ಲಾ ಮೂಲದವರು. ಸಂಬಂಧಿಕರು ತೀರಿಕೊಂಡಿದ್ದಾರೆಂದು ಲಾಕ್​ಡೌನ್​ಗೆ ಮುಂಚೆಯೇ ಊರಿಗೆ ಹೊರಡುವಾಗ, ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಪಕ್ಕದ ಮನೆಯವರಲ್ಲಿ ಮನವಿ ಮಾಡಿಕೊಂಡು ಬಿಟ್ಟು ಹೋಗಿದ್ದರು.

    2-3 ದಿನದಲ್ಲಿ ವಾಪಸ್ ಬರಬಹುದೆಂಬ ಲೆಕ್ಕಾಚಾರದಿಂದ ರಾಜಸ್ಥಾನಕ್ಕೆ ಹೋದವರು ಲಾಕ್​ಡೌನ್​ನಿಂದಾಗಿ ಅಲ್ಲಿಯೇ ಸಿಲುಕಿಕೊಂಡರು.

    ಅಪ್ಪ-ಅಮ್ಮನ ನೋಡದೇ ಗೋಳಿಡುತ್ತಿದ್ದ ಮಕ್ಕಳ ವಿಷಯವನ್ನು ಅದೇ ಬಡಾವಣೆಯ ವ್ಯಕ್ತಿಯೊಬ್ಬರು ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಗಮ ಹಂಜಿ ಅವರಿಗೆ ತಿಳಿಸಿದ್ದರು.

    ಹಂಜಿಯವರು ತಕ್ಷಣ ಸರ್ಕಾರದ ಜನಸ್ನೇಹಿ ಆಪ್​ಗೆ ಮಾಹಿತಿ ಅಪ್​ಲೋಡ್ ಮಾಡಿದರು. ಅಲ್ಲಿಂದ ಧಾರವಾಡ ಜಿಲ್ಲಾಧಿಕಾರಿಗೆ ಮಾಹಿತಿ ರವಾನೆಯಾಗಿ, ಹುಬ್ಬಳ್ಳಿ ತಹಸೀಲ್ದಾರ್ ಶಶಿಧರ ಮಾಡ್ಯಾಳ ಅವರಿಗೆ ಮಕ್ಕಳ ಬಗ್ಗೆ ವಿಚಾರಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.

    ಕೋಳಿಪೇಟೆಗೆ ತೆರಳಿ ಮಕ್ಕಳ ಯೋಗಕ್ಷೇಮ ವಿಚಾರಿಸಿದ ತಹಸೀಲ್ದಾರ್ ಮಾಡ್ಯಾಳ, ಅವರ ಪಾಲಕರೊಂದಿಗೆ ಮಾತನಾಡಿದ್ದಾರೆ.

    ಮಕ್ಕಳನ್ನು ರಾಜಸ್ಥಾನಕ್ಕೆ ತಲುಪಿಸುವುದಕ್ಕಾಗಿ ಸಂಗಮ ಹಂಜಿ ಅವರು ಕಾರಿನ ವ್ಯವಸ್ಥೆ ಮಾಡಿದ್ದು, ಚಾಲಕನಾಗಿ ತೆರಳಲು ತಮ್ಮ ಸ್ನೇಹಿತನನ್ನೇ ಒಪ್ಪಿಸಿದ್ದಾರೆ. ರಾಜಸ್ಥಾನಕ್ಕೆ ತೆರಳುವ ಮತ್ತೊಂದು ಕುಟುಂಬವನ್ನೂ ಜಿಲ್ಲಾಡಳಿತದವರು ಜೊತೆಗೆ ಸೇರಿಸಿ, ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಸಹ ಮಕ್ಕಳನ್ನು ಕರೆದುಕೊಂಡು ಹೋಗಲು ಪಾಸ್ ನೀಡುವ ಭರವಸೆ ನೀಡಿದ್ದು, ಗುರುವಾರ ಮಕ್ಕಳು ರಾಜಸ್ಥಾನದತ್ತ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts