More

    ಆರೋಪಗಳಿಗೆ ಸೂಕ್ತ ಕಾಲದಲ್ಲಿ ಉತ್ತರ ನೀಡುವೆ: ಬಿವೈಆರ್

    ಶಿವಮೊಗ್ಗ: ಅಭಿವೃದ್ಧಿ ಆಧರಿಸಿ ಚುನಾವಣೆ ನಡೆಯುತ್ತದೆಯೇ ಹೊರತು, ಪ್ರತಿಕ್ರಿಯೆ, ಆರೋಪಗಳ ಮೇಲಲ್ಲ. ಇಲ್ಲಿ ನಾನು ಲೋಕಸಭಾ ಸದಸ್ಯನಾಗಬೇಕು ಎಂಬುದು ಪ್ರಶ್ನೆಯಲ್ಲ. ಐದು ವರ್ಷ ಏನು ಮಾಡಿದ್ದೇನೆ? ಮುಂದೆ ಐದು ವರ್ಷ ಏನು ಮಾಡಬೇಕು ಎಂಬುದಷ್ಟೇ ನನ್ನ ಚಿಂತನೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎದುರಾಳಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೋ ಮಾತನಾಡಿದರೆ ಸುದ್ದಿಯಾಗುತ್ತದೆ. ಮಾಧ್ಯಮಗಳಲ್ಲಿ ಹೆಡ್‌ಲೈನ್ ಬರುತ್ತದೆ ಅಷ್ಟೇ. ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತೇನೆ ಎಂದರು.
    ಹಗುರವಾಗಿ ಮಾತನಾಡುವ ಪ್ರತಿಪಕ್ಷಗಳ ನಾಯಕರ ಬಗ್ಗೆ ಕಾರ್ಯಕರ್ತರು ಗಮನಹರಿಸಬೇಕಿಲ್ಲ. ಕ್ಷೇತ್ರದ ಅಭಿವೃದ್ಧಿ ಆಗಬೇಕು. ಕ್ಷೇತ್ರದ ಜನರಿಗೆ ಒಳ್ಳೆಯದಾಗಬೇಕು ಎಂಬುದೇ ನನ್ನ ಉದ್ದೇಶ. ನಾನು ಲೋಕಸಭೆಯಲ್ಲಿ ಎಷ್ಟು ಬಾರಿ ಮಾತನಾಡಿದ್ದೇನೆ. ಯಾವ ಸಂಗತಿಗಳನ್ನು ನಿರಂತರವಾಗಿ ಫಾಲೋಅಪ್ ಮಾಡಿದ್ದೇನೆ ಎಂಬುದನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ವಲ್ಪ ಸಾವಧಾನವಾಗಿ ನೋಡಿದರೆ ಸಾಕು ಎಂದು ಪ್ರತಿಕ್ರಿಯಿಸಿದರು.
    ವಿಐಎಸ್‌ಎಲ್ ಬಗ್ಗೆ, ಶರಾವತಿ ಸಂತ್ರಸ್ತರ ಪರವಾಗಿ ಮಧು ಬಂಗಾರಪ್ಪ ಸಾರ್ವಜನಿಕ ಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂದು ಕೇಳಿದ್ದಾರೆ. ನನಗೆ ನಗು ಬರುತ್ತಿದೆ. ಯಾವ ನೈತಿಕತೆಯಿಂದ ಅವರು ಈ ಪ್ರಶ್ನೆಗಳನ್ನು ಕೇಳಿದ್ದಾರೋ ಗೊತ್ತಿಲ್ಲ. ನಾನು ಮೊದಲ ಬಾರಿ ಲೋಕಸಭಾ ಸದಸ್ಯನಾದಾಗ ಏನು ಮಾಡಿದ್ದೇನೆ ಎಂಬುದನ್ನು ಶ್ವೇತ ಪತ್ರದ ಮಾದರಿಯಲ್ಲಿ ಮುದ್ರಿಸಿ ಜನರಿಗೆ ತಲುಪಿಸುತ್ತಿದ್ದೇನೆ. ಅವರು ಅದನ್ನು ಓದಿಕೊಂಡರೆ ಸಾಕು ಎಂದು ಲೇವಡಿ ಮಾಡಿದರು.
    ಬೂತ್ ಮಟ್ಟದಲ್ಲಿ ಪ್ರಚಾರ:ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆ ನಡೆಸಿದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ. ಈಗಾಗಲೇ ಬೂತ್ ಮಟ್ಟದಲ್ಲಿ ಪ್ರಚಾರ ಆರಂಭವಾಗಿದೆ. ಸರಿಯಾಗಿ ಅಖಾಡ ಸಿದ್ಧವಾಗಲು ಇನ್ನೂ ಒಂದು ವಾರ ಬೇಕು. ಮತದಾರರು ಬದಲಾಗಿದ್ದಾರೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಆಗದಂತೆ ತಡೆಯುವ ಹುನ್ನಾರ ನಡೆಯುತ್ತಿರುವ ಸಂದರ್ಭದಲ್ಲಿ ಮತದಾರರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts