More

    ಕೋಟಿ ಸುರಿದರೂ ನಿಲ್ಲದ ಕೊಳಚೆ ನೀರು!

    ಹುಬ್ಬಳ್ಳಿ: ಒಂದೆಡೆ 23 ಕೋಟಿ ರೂ. ಸ್ಮಾರ್ಟ್ ಸಿಟಿ ಅನುದಾನದಲ್ಲಿ ತೋಳನಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ತಡೆರಹಿತವಾಗಿ ಒಳಚರಂಡಿ ನೀರು ಕೆರೆಯ ಒಡಲು ಸೇರುತ್ತಿದೆ.

    ಇಂಥದೊಂದು ವ್ಯತಿರಿಕ್ತ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಶಾಸಕ ಅರವಿಂದ ಬೆಲ್ಲದ ದಂಗಾದರು. ಅವರು ಭಾನುವಾರ ಬೆಳಗ್ಗೆ ತೋಳನಕೆರೆ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆಗೆ ಆಗಮಿಸಿದ್ದರು.

    ಸರಿ ಸುಮಾರು ಒಂದೂವರೆ ತಿಂಗಳಿಂದ ಹುಬ್ಬಳ್ಳಿಯಲ್ಲಿ ಸಣ್ಣ ಪ್ರಮಾಣದ ಮಳೆಯೂ ಆಗಿಲ್ಲ. ಆದರೂ, ತೋಳನಕೆರೆ ತುಂಬಿ ಹರಿಯುತ್ತಿದೆ. ಇದಕ್ಕೆ ಕಾರಣ ರಾಮಲಿಂಗೇಶ್ವರನಗರದಿಂದ ಹರಿದು ಬರುವ ಒಳಚರಂಡಿ ನೀರು. ಅಂದರೆ 31 ಎಕರೆ ವಿಸ್ತಾರವಾಗಿರುವ ತೋಳನಕೆರೆ ಒಡಲಿನಲ್ಲಿ ತುಂಬಿರುವುದು ಒಳಚರಂಡಿ ಕೊಳಚೆ ನೀರು ಎಂದು ಸಾಮಾನ್ಯರೂ ಅರ್ಥೈಸಿಕೊಳ್ಳಬಹುದು. ಮುಂದೊಂದು ದಿನ ಉಣಕಲ್ ಕೆರೆಯಲ್ಲಿ ಸೃಷ್ಟಿಯಾದಂತೆ ಪಿಶಾಚಿ ತಾವರೆ (ಕಳೆ) ತೋಳನಕೆರೆಯನ್ನೂ ಆವರಿಸಿಕೊಂಡರೆ ಅಚ್ಚರಿ ಪಡಬೇಕಾಗಿಲ್ಲ.

    ಕಳೆದ ಒಂದೂವರೆ ವರ್ಷದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ತೋಳನಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ಅಮೃತ್ ಯೋಜನೆಯಡಿ 2.5 ಕೋಟಿ ರೂ. ವೆಚ್ಚದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್​ಟಿಪಿ) ಸ್ಥಾಪನೆ ಕೈಗೆತ್ತಿಕೊಳ್ಳಲಾಗಿದೆ. ಎಸ್​ಟಿಪಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ಇವರಿಬ್ಬರು ರಾಮಲಿಂಗೇಶ್ವರನಗರದಿಂದ ಹರಿದು ಬರುತ್ತಿರುವ ಒಳಚರಂಡಿ ನೀರಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ತಮಗೆ ಸಂಬಂಧವಿಲ್ಲ ಎಂಬಂತೆ ಶಾಸಕ ಅರವಿಂದ ಬೆಲ್ಲದ ಎದುರು ನಡೆದುಕೊಂಡರು.

    ಶಾಸಕರಿಂದ ತರಾಟೆ: ಒಳಚರಂಡಿ ನೀರು ತೋಳನಕೆರೆ ಸೇರುತ್ತಿರುವ ಬಗ್ಗೆ ಶಾಸಕ ಬೆಲ್ಲದ ಅವರು ಅಮೃತ್ ಯೋಜನೆಯ ಅಧಿಕಾರಿ ಹಿಂಡಸಗೇರಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಇಲ್ಲಿಯೇ ಎಸ್​ಟಿಪಿ ಕಾಮಗಾರಿ ನಿರ್ವಹಿಸುತ್ತಿರುವ ನೀವು, ಕೆರೆಗೆ ಒಳಚರಂಡಿ ನೀರು ಸೇರುತ್ತಿದ್ದರೂ ತಮಗೆ ಸಂಬಂಧವಿಲ್ಲವೆಂಬಂತೆ ಇದ್ದರೆ ಹೇಗೆ? 5-6 ಲಕ್ಷ ರೂ. ಖರ್ಚು ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ಒಳಚರಂಡಿ ನೀರು ಕೆರೆಯ ಒಡಲು ಸೇರಿದೆ. ನಿಮಗೆ ಕನಿಷ್ಠ ವಿವೇಚನೆಯೂ ಇಲ್ಲವೇ? ಹೊಟ್ಟೆಗೆ ಏನು ತಿನ್ನುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗೋಕುಲ ರಸ್ತೆ ವಿಮಾನ ನಿಲ್ದಾಣದಿಂದ ಸೆಂಟ್ರಲ್ ಎಕ್ಸೈಸ್ ಕಾಲನಿ, ರೇಣುಕಾನಗರ ಮೂಲಕ ಹಾದು ಬಂದಿರುವ ಒಳಚರಂಡಿ ಮೇನ್ ಟ್ರಂಕ್ ಲೈನ್​ನ ಕೊಳಚೆ ನೀರನ್ನು ಶುದ್ಧೀಕರಿಸಲು ಅಮೃತ ಯೋಜನೆಯಡಿ ತೋಳನಕೆರೆ ಮೇಲ್ಭಾಗದಲ್ಲಿ ಎಸ್​ಟಿಪಿ ನಿರ್ಮಾಣ ಮಾಡಲಾಗಿದೆ. ಶುದ್ಧೀಕರಿಸಿದ ನೀರನ್ನು ಕೆರೆಗೆ ಹಾಗೂ ಮುಂದಿನ ಒಳಚರಂಡಿ ಮಾರ್ಗಕ್ಕೆ ಬಿಡಲಾಗುತ್ತಿದೆ. ಆದರೆ, ರಾಮಲಿಂಗೇಶ್ವರನಗರದಿಂದ ಹರಿದು ಬರುವ ಒಳಚರಂಡಿ ನೀರು ಅವ್ಯಾಹತವಾಗಿ ತೋಳನಕೆರೆ ಸೇರುತ್ತಿದೆ.

    ರಾಮಲಿಂಗೇಶ್ವರ ನಗರದಿಂದ ಹರಿದು ಬರುವ ಒಳಚರಂಡಿ ನೀರು ನಾಲಾದಿಂದ ಬೈಪಾಸ್ ಮಾಡಿ ಎಸ್​ಟಿಪಿ ಮಾರ್ಗಕ್ಕೆ ಸೇರ್ಪಡೆಗೊಳಿಸಬೇಕು. ಶುದ್ಧೀಕರಿಸಿದ ನೀರನ್ನು ಕೆರೆಗೆ ಬಿಡಬೇಕು ಎಂದು ಬೆಲ್ಲದ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಹು-ಧಾ ಸ್ಮಾರ್ಟ್ ಸಿಟಿ ಎಂಡಿ ಶಕೀಲ ಅಹ್ಮದ್, ಡಿಜಿಎಂ ಬಸವರಾಜ ಡಿ., ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ರವಿ ನಾಯ್ಕ, ತೋಳನಕೆರೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ರವೀಂದ್ರ ಚಿಕ್ಕರೆಡ್ಡಿ, ಇತರರು ಇದ್ದರು.

    ಕಾಮಗಾರಿ ತೃಪ್ತಿಕರವಾಗಿಲ್ಲ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ತೋಳನಕೆರೆ ಅಭಿವೃದ್ಧಿ ಕಾಮಗಾರಿ ನಿಧಾನವಾಗಿ ಸಾಗಿದೆ. ಒಟ್ಟಾರೆ ಕಾಮಗಾರಿ ತಮಗೆ ತೃಪ್ತಿ ತಂದಿಲ್ಲ. ಇನ್ನು 20-25 ದಿನಗಳಲ್ಲಿ ಕೆರೆಗೆ ಒಳಚರಂಡಿ ನೀರು ಸೇರುವುದನ್ನು ನಿಲ್ಲಿಸಲಾಗುವುದು ಎಂದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೋಳನಕೆರೆ ಅಭಿವೃದ್ಧಿಗೆ ಟಾಟಾ ಕನ್ಸಲ್ಟನ್ಸಿಯವರು ತಯಾರಿಸಿದ ವಿನ್ಯಾಸವನ್ನು ಬದಲಾಯಿಸಲಾಗಿದೆ. ಬಾಲಿ ದೇಶದ ದೇವ ಕುಸುಮ ಅವರನ್ನು ಕರೆಯಿಸಿ ಹೊಸದಾಗಿ ವಿನ್ಯಾಸ ರೂಪಿಸಿದ್ದೇವೆ. ಅದರ ಪ್ರಕಾರ ಇದೊಂದು ಕ್ರೀಡಾ ಉದ್ಯಾನವಾಗಲಿದೆ. ಇಲ್ಲಿ ವಾಲಿಬಾಲ್, ಬ್ಯಾಡ್ಮಿಂಟನ್ ಕೋರ್ಟ್ ಬರಲಿದೆ. ಸೈಕ್ಲಿಂಗ್ ಟ್ರ್ಯಾಕ್ ಇರಲಿದೆ. ಲ್ಯಾಂಡ್ ಸ್ಕೇಪಿಂಗ್​ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ರಾತ್ರಿ ವೇಳೆ ಪಕ್ಷಿಗಳು ತಂಗಲು ತೊಂದರೆಯಾಗದಂತೆ ಲೈಟಿಂಗ್ ವ್ಯವಸ್ಥೆ ಬದಲಾಯಿಸಿದ್ದೇವೆ ಎಂದು ತಿಳಿಸಿದರು. ಮೊದಲು ಯೋಜನಾ ವೆಚ್ಚ 18 ಕೋಟಿ ರೂ. ಇತ್ತು. ಈಗ 23 ಕೋ. ಆಗಿದೆ. ಇಲ್ಲಿಯವರೆಗೂ 7.5 ಕೋ. ಖರ್ಚು ಮಾಡಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts