More

    ಕೊಳೆಯುತ್ತಿದೆ ಚಿಕ್ಕು, ಬಾಳೆ

    ಮುಂಡರಗಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಬಾಳೆ, ಚಿಕ್ಕು, ಕಲ್ಲಂಗಡಿ ಮೊದಲಾದ ಬೆಳೆ ಬೆಳೆದ ರೈತರು ಹಣ್ಣು ಮಾರಾಟ ಮಾಡಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ತಾಲೂಕಿನ ಮಕ್ತುಂಪುರ ಗ್ರಾಮದ ರೈತ ಟಿ.ಎಲ್. ನಾಯಕ ಅವರ 8 ಎಕರೆ ಜಮೀನಿನಲ್ಲಿ ಬೆಳೆದಿರುವ ಚಿಕ್ಕು ಹಣ್ಣು ಮಾರಾಟವಾಗದೆ ಜಮೀನಿನಲ್ಲಿ ಕೊಳೆಯುವ ಹಂತ ತಲುಪಿದೆ. ಫೆಬ್ರವರಿಯಲ್ಲಿ ಸುಮಾರು 10 ಟನ್ ಚಿಕ್ಕು ಹಣ್ಣನ್ನು ಪ್ರತಿ ಟನ್​ಗೆ 20 ಸಾವಿರ ರೂ.ನಂತೆ ಮಾರಾಟ ಮಾಡಿದ್ದರು. ಆದರೆ, ಈಗ ಲಾಕ್​ಡೌನ್​ನಿಂದಾಗಿ ಹಣ್ಣು ಮಾರಾಟವಾಗದೆ ಸುಮಾರು 6 ಟನ್​ನಷ್ಟು ಚಿಕ್ಕು ಕೊಳೆಯುತ್ತಿದೆ. ತೋಟದಲ್ಲಿ ಇನ್ನು 5 ಟನ್ ಚಿಕ್ಕು ಬರುವ ನಿರೀಕ್ಷೆ ಇದೆ. ಲಾಕ್​ಡೌನ್ ತೆರವಾದರೆ ವ್ಯಾಪಾರ ವಹಿವಾಟು ಪ್ರಾರಂಭವಾಗಿ ಹಣ್ಣಿನ ವ್ಯಾಪಾರಸ್ಥರು ಚಿಕ್ಕು ಖರೀದಿಸಲು ಮುಂದೆ ಬಂದರೆ ನೆರವಾಗಲಿದೆ. ಈಗ ಬಂದಿರುವ ಚಿಕ್ಕು ಹಣ್ಣನ್ನು ಬಡವರಿಗೆ, ಸುತ್ತ್ತನವರಿಗೆ ವಿತರಿಸುತ್ತೇನೆ ಎನ್ನುತ್ತಾರೆ ರೈತ ಟಿ.ಎಲ್.ನಾಯಕ.

    ಪಟ್ಟಣದ ರೈತ ಶಿವಪುತ್ರಪ್ಪ ಹುಬ್ಬಳ್ಳಿ ಅವರು 3 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಬಾಳೆ ಬೆಳೆದಿದ್ದಾರೆ. ಬಾಳೆ ಬಾಳು ಬೆಳಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತನಿಗೆ ಕರೊನಾ ಹಾವಳಿ ರೈತನ ನಿರೀಕ್ಷೆಯನ್ನು ಹುಸಿ ಮಾಡಿದೆ.

    ಈ ಮೊದಲು ಪ್ರತಿ ಟನ್ ಬಾಳೆಗೆ ಅಂದಾಜು 8 ಸಾವಿರ ರೂ. ತನಕ ಮಾರಾಟ ಮಾಡಿದ್ದರು. ಆದರೆ ಈಗ ಬಾಳೆ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಈಗಾಗಲೇ ಬಾಳೆಯು ತೋಟದಲ್ಲಿ ಕೊಳೆಯುತ್ತಿದೆ. ಇದರಿಂದಾಗಿ ರೈತರಿಗೆ ದಿಕ್ಕು ತೋಚದೆ ಕಣ್ಣೀರು ಹಾಕುವಂತಾಗಿದೆ.

    ಸ್ಥಳೀಯ ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ ಅವರು ತಮ್ಮ 6 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆಯು ಮಾರಾಟವಾಗದ ಕಾರಣ ಎಸ್.ಎಸ್. ಪಾಟೀಲ ನಗರದ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಿಸಿದ್ದಾರೆ.

    ಸ್ಥಳೀಯ ವ್ಯಾಪಾರಸ್ಥರು ಬಾಳೆ ಖರೀದಿಸದ ಕಾರಣ ನಾವೇ ವಾಹನ ಮಾಡಿಕೊಂಡು ಬೆಂಗಳೂರಿನಂತಹ ಪ್ರದೇಶಕ್ಕೆ ತೆರಳಿ ಬಾಳೆಯನ್ನು ಮಾರಾಟ ಮಾಡಬೇಕೆಂದುಕೊಂಡರೆ ಪ್ರತಿ ಟನ್ ಬಾಳೆಗೆ 2,000 ರೂ.ನಿಂದ 2,500ರೂ.ತನಕ ಮಾತ್ರ ಮಾರಾಟವಾಗುತ್ತದೆ. ಹೀಗಾಗಿ ಬಾಳೆ ತೋಟದಲ್ಲೇ ಕೊಳೆಯಬಾರದು ಎನ್ನುವ ಉದ್ದೇಶದಿಂದ ಜನರಿಗೆ ಉಚಿತವಾಗಿ ಹಂಚಿದ್ದೇವೆ.
    | ಶಿವಪುತ್ರಪ್ಪ ಹುಬ್ಬಳ್ಳಿ, ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts