More

    ಕೊಲೆ ಬೆದರಿಕೆ ಖಂಡಿಸಿ ಪ್ರತಿಭಟನೆ

    ಬೆಳಗಾವಿ: ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಮೇಲಿನ ಹಲ್ಲೆಗೆ ಯತ್ನ ಮತ್ತು ಕೊಲೆ ಬೆದರಿಕೆ ಖಂಡಿಸಿ ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

    ಫೆ. 4ರಂದು ಕಾರ್ಖಾನೆಯ ಕೆಲ ನಿರ್ದೇಶಕರು ಮತ್ತು ಖಾಸಗಿ ವ್ಯಕ್ತಿಗಳು ಸಿದಗೌಡ ಮೋದಗಿ ಅವರನ್ನು ಕೂಡಿಹಾಕಿ ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದು ಸರಿಯಲ್ಲ. ಸಿದಗೌಡ ಮೋದಗಿ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಮತ್ತು ಇದಕ್ಕೆ ಪರೋಕ್ಷವಾಗಿ ಕಾರಣರಾದ ವ್ಯವಸ್ಥಾಪಕ ನಿರ್ದೇಶಕರನ್ನು ತಕ್ಷಣ ಕರ್ತವ್ಯದಿಂದ ವಜಾ ಮಾಡುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

    ಸಿದಗೌಡ ಮೋದಗಿ ಅವರು ರೈತರ ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷರಾಗಿ, ಎಂ.ಕೆ. ಹುಬ್ಬಳ್ಳಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿದ್ದಾರೆ. ರಾಜ್ಯಾದ್ಯಂತ ಅವರು ಸಭೆ ಸಮಾರಂಭಗಳಿಗೆ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ಅವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

    ಪರಿಸರವಾದಿ ಶಿವಾಜಿ ಕಾಗನಿಕರ, ಕಾರ್ಮಿಕ ಮುಖಂಡ ಜಿ.ವಿ. ಕುಲಕರ್ಣಿ, ನೇಕಾರ ಮುಖಂಡ ಶಂಕರ ಢವಳಿ, ಶಂಕರ ಅಂಬಲಿ, ಶಿವಲೀಲಾ ಮೀಸಾಳೆ, ರುದ್ರಪ್ಪ ಕೊಡ್ಲಿ, ಸುನೀಲ ತಿಪ್ಪನ್ನವರ, ಉಮೇಮೇಶ ಮಾಳಗಿ, ಗಂಗಾಧರ ತುಕ್ಕಾರ ಶಿವಾಜಿ ಕದಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts