More

    ಕೊಡಲಿಯಿಂದ ಕೊಚ್ಚಿ ಪತ್ನಿ ಕೊಲೆ

    ಹುಬ್ಬಳ್ಳಿ: ಪತ್ನಿ ಶೀಲ ಶಂಕಿಸಿ ಜಗಳ ತೆಗೆದ ಪತಿರಾಯ ಬೆಳ್ಳಂಬೆಳಗ್ಗೆ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಾಲೂಕಿನ ಭಂಡಿವಾಡ ಗ್ರಾಮದ ಮುಖ್ಯರಸ್ತೆಯಲ್ಲಿ ಸೋಮವಾರ ಜರುಗಿದೆ.

    ಗ್ರಾಮದ ಶಾರವ್ವ ಹನುಮಂತಪ್ಪ ಕುರಡಿಕೇರಿ (40) ಹತ್ಯೆಯಾದವಳು. ಆಕೆಯ ಪತಿ ಹನುಮಂತಪ್ಪ ಕುರಡಿಕೇರಿ (45) ಆರೋಪಿ. ಶಾರವ್ವಳ ಶೀಲ ಶಂಕಿಸಿ ಹನುಮಂತಪ್ಪ ಆಗಾಗ ಜಗಳ ತೆಗೆಯುತ್ತಿದ್ದ. ಮದುವೆಯಾಗಿ ಹಲವು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಕಳೆದ 10 ವರ್ಷಗಳಿಂದ ಶಾರವ್ವ ಪತಿ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಳು. ಆ ವಿಚಾರವಾಗಿ ಬೇಸರಗೊಂಡಿದ್ದ ಹನುಮಂತಪ್ಪ ಸಂಚು ರೂಪಿಸಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಹನುಮಂತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಡುರಸ್ತೆಯಲ್ಲೇ ಕೊಚ್ಚಿ ಕೊಲೆಗೈದ ಘಟನೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

    ಅಂಗಿ ಹಿಂದೆ ಕೊಡಲಿ!: ಶಾರವ್ವಳನ್ನು ಹತ್ಯೆ ಮಾಡಲೆಂದೇ ಹನುಮಂತ ಮೊದಲೇ ಶರ್ಟ್ ಹಿಂದೆ ಕೊಡಲಿ ಇಟ್ಟುಕೊಂಡು ಹೊಂಚು ಹಾಕಿ ಕುಳಿತಿದ್ದ. ಶಾರವ್ವ ಬೆಳಗ್ಗೆ 6.30ರ ಸುಮಾರು ಬಹಿರ್ದೆಸೆಗೆ ಹೋಗಿ ವಾಪಸ್ ಬರುತ್ತಿದ್ದಳು. ಆ ವೇಳೆ ಆಕೆಯನ್ನು ಮಾತನಾಡಿಸುವ ನೆಪದಲ್ಲಿ ಎದುರು ಬಂದಿದ್ದ. ಮಾತನಾಡಿಸುತ್ತ ಏಕಾಏಕಿ ಶರ್ಟ್ ಹಿಂದೆ ಸಿಕ್ಕಿಸಿಕೊಂಡಿದ್ದ ಕೊಡಲಿ ತೆಗೆದು ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ. ನಡುರಸ್ತೆಯಲ್ಲೇ ರಕ್ತಸಿಕ್ತವಾಗಿ ಬಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಗ್ರಾಮೀಣ ಠಾಣೆ ಇನ್ಸ್​ಪೆಕ್ಟರ್ ರಮೇಶ ಗೋಕಾಕ ತಿಳಿಸಿದ್ದಾರೆ.

    ಯುವಕನ ಮೇಲೆ ಮೂವರಿಂದ ಹಲ್ಲೆ: ಮೂವರು ಯುವಕರ ಗುಂಪು ಯುವಕನೊಬ್ಬನ ಜತೆ ಯಾವುದೋ ಕಾರಣಕ್ಕೆ ಜಗಳ ತೆಗೆದು ಆತನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಹುಬ್ಬಳ್ಳಿ ಹೊಸೂರು ಘಂಟಿ ಆಸ್ಪತ್ರೆ ಬಳಿ ಭಾನುವಾರ ರಾತ್ರಿ ನಡೆದಿದೆ. ಆದರ್ಶ ಕಾಮತ ( ) ಹಲ್ಲೆಗೀಡಾದ ಯುವಕ. ಅಶೋಕ ಹೆಬಸೂರು, ಚೇತನ ಹಿರೇಕೆರೂರು, ಯಲ್ಲಪ್ಪ ಹೆಬಸೂರು ಹಲ್ಲೆ ನಡೆಸಿದ ಆರೋಪಿಗಳು. ಯಾವುದೋ ಕಾರಣಕ್ಕೆ ಜಗಳ ತೆಗೆದು ಹಲ್ಲೆ ನಡೆಸಿರುವುದಾಗಿ ಯುವಕ ದೂರು ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಉಪ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಹೊಟ್ಟೆ ನೋವು ತಾಳದೇ ಆತ್ಮಹತ್ಯೆ: ಹೊಟ್ಟೆ ನೋವು ತಾಳಲಾರದೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ. ರಾಜೇಶ ಜಿಲ್ಲಾರ (25) ಆತ್ಮಹತ್ಯೆ ಮಾಡಿಕೊಂಡವನು. ರಾಜೇಶ ಕೆಲ ದಿನಗಳಿಂದ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಇದೇ ವಿಚಾರಕ್ಕೆ ಬೇಸಗೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಕುಡಿಯುವ ನೀರಿನ ಕೆರೆಯಲ್ಲಿ ಈಜಾಡುತ್ತಿದ್ದವ ಸೆರೆ: ಅಣ್ಣಿಗೇರಿ ಪಟ್ಟಣದ ಅಂಬಿಗೇರಿ ಕುಡಿಯುವ ನೀರಿನ ಕೆರೆಯಲ್ಲಿ ಈಜಾಡುತ್ತಿದ್ದ ಯುವಕನನ್ನು ಸ್ಥಳೀಯ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪಟ್ಟಣದ 40 ಸಾವಿರಕ್ಕೂ ಅಧಿಕ ಜನರಿಗೆ ಕುಡಿಯುವ ನೀರು ಒದಗಿಸುತ್ತಿರುವ ಅಂಬಿಗೇರಿ ಕೆರೆಯಲ್ಲಿ ವಾಲ್ಮೀಕಿ ನಗರದ ನಿವಾಸಿ ಫಕಿರೇಶ ನವಲಗುಂದ (40) ಈಜಾಡುತ್ತಿದ್ದ. ಈ ವಿಷಯವನ್ನು ಕೆರೆ ಕಾಯುವ ವ್ಯಕ್ತಿ ಹಾಗೂ ಅಕ್ಕಪಕ್ಕದ ನಿವಾಸಿಗಳು ಪುರಸಭೆ ಅಧಿಕಾರಿಗಳು, ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಯುವಕನನ್ನು ಕೆರೆಯಿಂದ ಹೊರಗೆ ತಂದು ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts