More

    ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ

    ಬೆಳಗಾವಿ: ಕೈಗಡ ಎಂದು ಕೊಟ್ಟ ಸಾಲ ವಾಪಸ್ ಕೇಳಿದರು ಎಂಬ ಕಾರಣಕ್ಕೆ ಯುಗಾದಿ ದಿನವೇ ಸಹೋದರರನ್ನು ಮನೆಯಿಂದ ಹೊತ್ತೊಯ್ದು ಓರ್ವನ ಕಾಲು ಮುರಿದು, ಮತ್ತೊಬ್ಬನನ್ನು ಹತ್ಯೆಗೈದು ಮನೆ ಅಂಗಳದಲ್ಲಿ ಶವ ಎಸೆದು ಹೋದ ಘಟನೆ ಶನಿವಾರ ರಾತ್ರಿ ತಾಲೂಕಿನ ರಣಕುಂಡೆ ಗ್ರಾಮದಲ್ಲಿ ನಡೆದಿದೆ.
    ಸ್ಥಳೀಯ ನಿವಾಸಿ ನಾಗೇಶ ಪಾಟೀಲ(30)ಕೊಲೆಯಾದ ಯುವಕ. ಅದೇ ಸಮುದಾಯಕ್ಕೆ ಸೇರಿದ ಯುವಕರ ಗುಂಪು ಮದ್ಯದ ಅಮಲಿನಲ್ಲಿ ತಡರಾತ್ರಿ ಮನೆಗೆ ನುಗ್ಗಿ ಸಹೋದರರಾದ ನಾಗೇಶ ಹಾಗೂ ಮೋಹನ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಮೋಹನನ ಕಾಲು ಮುರಿದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ನಾಗೇಶ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಕಾನೂನು ಕ್ರಮ ಜರುಗಿಸಿದ್ದಾರೆ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಗನನ್ನು ಹತ್ಯೆಗೈದಿದ್ದಾರೆ. ಹಲ್ಲೆ ತಡೆಯಲು ಮುಂದಾಗಿದ್ದ ನಾಗೇಶನ ಸಹೋದರ ಹಾಗೂ ಆತನ ತಾಯಿ ಮೇಲೂ ಹಲ್ಲೆ ಮಾಡಿ, ಪರಾರಿಯಾಗಿದ್ದಾರೆ ಎಂದು ಶ್ರೀಧರ ಪಾಟೀಲ, ಪ್ರಮೋದ ಪಾಟೀಲ, ಮಹೇಶ ಕಂಗ್ರಾಳಕರ್ ವಿರುದ್ಧ ನಾಗೇಶನ ತಾಯಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗಾಗಿ, ವಿಶೇಷ ತಂಡ ರಚಿಸಿದ್ದಾರೆ.

    ಕೆಲಸಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದ: ಗುಜರಾತ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ ಈಚೆಗೆ ರಜೆ ಪಡೆದು ತಮ್ಮ ಮತ್ತು ತಾಯಿಯನ್ನು ನೋಡಲು ಊರಿಗೆ ಬಂದಿದ್ದ. ಈ ಸಂದರ್ಭದಲ್ಲಿ ಹಣಕಾಸಿನ ಅಡಚಣೆಯಿಂದಾಗಿ ತಮ್ಮ ತಂದೆಯು(ನಾಗೇಶನ ತಂದೆ) ಪ್ರಮೋದ ಪಾಟೀಲ ಎಂಬಾತನಿಗೆ ನೀಡಿದ್ದ 20 ಸಾವಿರ ರೂ. ಸಾಲ ವಾಪಸ್ ಕೇಳಿದ್ದ. ಹಬ್ಬದಾಚರಣೆಗೆ ಹಣ ಬೇಕಾಗಿದೆ ನೀಡಿ ಎಂದು ಹಲವು ಬಾರಿ ಆತನ ಮನೆಗೆ ತೆರಳಿ ಸಾಲ ವಾಪಸ್ ನೀಡುವಂತೆ ಒತ್ತಡ ಹಾಕಿದ್ದನು. ಇದರಿಂದ ಬೇಸತ್ತ ಪ್ರಮೋದ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಮದ್ಯದ ಪಾರ್ಟಿ ಮಾಡಿ, ಹಬ್ಬದ ದಿನವೇ ನಾಗೇಶನನ್ನು ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಗರ ವ್ಯಾಪ್ತಿಯಲ್ಲಿ ಹೆಚ್ಚಿದ ಕೊಲೆ: ಕಳೆದ ಒಂದು ವಾರದ ಅವಧಿಯಲ್ಲಿ 3 ಕೊಲೆಗಳು ನಡೆದಿದ್ದು, ಅದರಲ್ಲಿ ಎರಡು ಗ್ಯಾಂಗ್‌ವಾರ್‌ಗಳೇ ಆಗಿರುವುದು ಕುಂದಾನಗರಿಗರನ್ನು ಬೆಚ್ಚಿಬೀಳಿಸಿದೆ. ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದಲ್ಲಿ ಮಾ.31ರಂದು ರಾತ್ರಿ ಯುವಕರ ಗುಂಪುಗಳು ನಡುವೆ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಬೈಲಹೊಂಗಲ ತಾಲೂಕಿನ ಮುದಕಪ್ಪ ಅಂಗಡಿ ಎಂಬಾತ ಸ್ಥಳದಲ್ಲೇ ಮೃತಪಟ್ಟು, 7 ಜನ ಗಂಭೀರವಾಗಿ ಗಾಯಗೊಂಡಿದ್ದರು. ಇನ್ನೊಂದು ಪ್ರಕರಣದಲ್ಲಿ ಮಾ.25ರಂದು ನಗರದ ಜನನಿಬಿಡ ಪ್ರದೇಶದಲ್ಲಿ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಹೀನಾಕೌಸರ್(21) ಎಂಬ ಮಹಿಳೆಯ ಕೊಲೆಯಾಗಿತ್ತು. ಆಕೆಯ ಪತಿ ಮಂಜೂರ್‌ಹಿಲಾಯಿ ನದಾಫ್ ಎಂಬಾತ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದ. ಸ್ಥಳೀಯರು ಆರೋಪಿಯನ್ನು ಮಾರೀಹಾಳ ಠಾಣೆಗೆ ಒಪ್ಪಿಸಿದ್ದರು.

    ಸದ್ಯ ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಮಚ್ಚು ಲಾಂಗ್‌ಗಳು ಸದ್ದು ಮಾಡುತ್ತಿದ್ದು, ಪೊಲೀಸರು ಕಠಿಣ ಕ್ರಮ ಜರುಗಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts