More

    ಕೈ ಮುಕ್ತಗೊಳಿಸಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸೂಕ್ತ

    ಕೋಲಾರ: ಜೆಡಿಎಸ್ ಮುಖಂಡರಿಗೆ ನಿಜಕ್ಕೂ ಕೋಲಾರ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕೆಂಬ ಉದ್ದೇಶವಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ ಎಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಅಭ್ಯರ್ಥಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಹೇಳಿದರು.

    ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಎಲ್‌ಸಿ ಚುನಾವಣೆಯಲ್ಲಿ ನಾನು ಗೆಲ್ಲುವುದಕ್ಕೆ ಒಳ್ಳೆಯ ವಾತಾವರಣ ಸೃಷ್ಟಿಯಾಗಿತ್ತು, ಬಿಜೆಪಿಗೆ ಜಯ ಸಿಗಬಾರದೆಂದು ಜೆಡಿಎಸ್ ಮುಖಂಡರು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣದ ಹೊಳೆ ಹರಿಸಿದ್ದರಿಂದ ನಮಗೆ ಸಿಗಬೇಕಿದ್ದ ಮತ ಚದುರಿ ಸೋಲು ಅನುಭವಿಸಬೇಕಾಯಿತು ಎಂದು ಡಾ.ವೇಣುಗೋಪಾಲ್ ಹೇಳಿದರು.

    ನನ್ನನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ಸಚಿವರಾದ ಡಾ.ಸುಧಾಕರ್, ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಮುಳಬಾಗಿಲು ಶಾಸಕರು ಹಾಗೂ ಮಾಜಿ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರಾದರೂ ಜೆಡಿಎಸ್ ಮುಖಂಡರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಚುನಾವಣೆಗೆ 3 ದಿನ ಇರುವಾಗ ಕಾಂಗ್ರೆಸ್‌ಗೆ ಅನುಕೂಲವಾಗುವಂತೆ ತಂತ್ರಗಾರಿಕೆ ಮಾಡಿದ್ದರಿಂದ ನಾನು ಸೋಲಬೇಕಾಯಿತು ಎಂದರು.

    ಚುನಾವಣೆಗೆ ಮುಂಚೆಯೇ ಬಿಜೆಪಿಯವರು ಹಣ ಹಂಚಿಕೆ ಮಾಡಿದ್ದರು ಎಂದು ಜೆಡಿಎಸ್ ಮಾಡಿರುವ ಆರೋಪ ಸತ್ಯಕ್ಕೆ ದೂರ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿದ್ದು ಜೆಡಿಎಸ್, ನಾವಲ್ಲ, ಬಹುಶಃ ಅಂದು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದರಿಂದ ಋಣ ತೀರಿಸಲು ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಸಂಸದರ ಮೇಲೆ ಆರೋಪ ಮಾಡಿರಬಹುದು ಎಂದರು.

    ಜೆಡಿಎಸ್‌ನವರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತಿಗೊಳಿಸಬೇಕೆಂಬ ಆಸೆ ಇದ್ದರೆ ರಾಜಕೀಯ ನಿಲುವು ಸ್ಪಷ್ಟಡಿಸಲಿ, ಒಂದೊಂದು ಚುನಾವಣೆ ಸಂದರ್ಭದಲ್ಲಿ ಒಂದೊಂದು ನಿಲುವು ತಾಳುವುದು ಬೇಡ ಎಂದರು. ಚುನಾವಣೆ ಸಂದರ್ಭದಲ್ಲಿ ನಾನು ಮತ್ತು ಸಂಸದರು ಜತೆಗೂಡಿ ಪ್ರಚಾರ ನಡೆಸಿದ್ದು, ಮುಖ್ಯಮಂತ್ರಿಗಳನ್ನು ಈ ವೇಳೆ ಭೇಟಿಯಾಗಿ ಚುನಾವಣಾ ಕಣದಿಂದ ಹಿಂದೆ ಸರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೋಳಾಡಿದೆ ಎಂಬುದು ಸುಳ್ಳು, ಸಂಸದರು ಹೊಸಕೋಟೆ ಬಳಿ ರಮೇಶ್‌ಕುಮಾರ್ ಅವರನ್ನು ಭೇಟಿಯಾಗಿ ಚನ್ನಸಂದ್ರದ ತೋಟಕ್ಕೆ ಕರೆದುಕೊಂಡು ಹೋಗಿ ರಹಸ್ಯ ಒಪ್ಪಂದ ಮಾಡಿಕೊಂಡರು ಎಂಬ ಜೆಡಿಎಸ್ ಮುಖಂಡರ ಹೇಳಿಕೆ ಗೊಂದಲ ಸೃಷ್ಟಿಸುವ ತಂತ್ರಗಾರಿಕೆ ಎಂದರು.

    ಜಿಲ್ಲಾ ಕೋರ್ ಕಮಿಟಿ ಸದಸ್ಯರಾದ ಎಸ್.ಬಿ.ಮುನಿವೆಂಕಟಪ್ಪ, ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಡಿ.ರಾಮಚಂದ್ರ, ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮಾಧ್ಯಮ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts