More

    ಕೈಗೆ ಬಂದ ತುತ್ತು ಬಾಯಿಗೆ ಬರದಾಗಿದೆ: ವಿಜಯವಾಣಿ ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡ ಶ್ರೀನಿವಾಸಪುರ ರೈತರು

    ರಾಯಲ್ಪಾಡು: ಮಾವಿನಕಾಯಿ ಸುಗ್ಗಿಯ ಕೊನೆಯ ಹಂತದಲ್ಲಿ ಬರುವ ನೀಲಂ ಜಾತಿಯ ಮಾವು ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು, ಮಾರುಕಟ್ಟೆ ಮೌಲ್ಯ ಕಳೆದುಕೊಳ್ಳುತ್ತಿದೆ. ರೋಗ ನಿವಾರಣೆ, ಔಷಧೋಪಚಾರಕ್ಕಾಗಿ ರೈತರು ಪ್ರಾಯೋಗಿಕ ವೈಜ್ಞಾನಿಕ ಪರೀಕ್ಷೆ ಮಾಡಿಸುವಲ್ಲಿ ನಿರತರಾಗಿದ್ದಾರೆ. ಉತ್ತಮ ಮಟ್ಟದ ಕಾಯಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಬೆಳೆಗಾರರು ವಿಜಯವಾಣಿ ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.


    ಪ್ರಸ್ತುತ ಜಿಲ್ಲೆಯಲ್ಲಿ ಮಾವಿನ ಸುಗ್ಗಿ ಮುಕ್ತಾಯದ ಹಂತದಲ್ಲಿದ್ದು, ನೀಲಂ ಜಾತಿಯ ಕಾಯಿಗಳಿಗೆ ಊಜಿ, ಮಂಗು ಹಾಗೂ ಇತರ ರೋಗಗಳು ಬಾಧಿಸುತ್ತಿರುವುದರಿಂದ ಬೆಳೆಗಾರರಲ್ಲಿ ಆತಂಕ ಉಂಟಾಗಿದೆ.


    ಮಾವಿನ ಮರದಲ್ಲಿ ಚಿಗುರು ಕಾಣಿಸಿಕೊಂಡಾಗ, ಜಿಗಿ ನೊಣದ ಹಾವಳಿ ಶುರುವಾಗುತ್ತದೆ. ಆ ನೊಣ ಸ್ರವಿಸುವ ಅಂಟು, ಎಲೆಯಿಂದ ಜಾರಿ, ಕಾಯಿಯ ಮೇಲೆ ಬೀಳುತ್ತದೆ. ಹಾಗೆ ಬಿದ್ದ ಅಂಟು ಕಪ್ಪು ಬಣ್ಣಕ್ಕೆ ತಿರುಗಿ ಶಿಲೀಂಧ್ರವಾಗಿ ಮಾರ್ಪಾಡಾಗುತ್ತದೆ. ಆ ಶಿಲೀಂಧ್ರ ನಿಧಾನವಾಗಿ ತೊಟ್ಟಿನಿಂದ ಹಿಡಿದು ಕಾಯಿಯನ್ನು ಆವರಿಸುತ್ತದೆ. ಇದರಿಂದ ಕಾಯಿಯ ಅಂದ ಕೆಡುತ್ತಿದೆ. ಇದರಿಂದಾಗಿ ಬಹುತೇಕ ರೈತರು ಕಾಯಿಗಳನ್ನು ಕೀಳದೆ ಮರಗಳಲ್ಲೇ ಬಿಟ್ಟಿದ್ದಾರೆ. ಮಂಗು ಬರದಂತೆ ನೋಡಿಕೊಂಡರೆ, ಲಾಭದಾಯಕ ಬೆಲೆ ಪಡೆಯಲು ಸಾಧ್ಯ. ಆದರೆ, ಬೆಳೆಗಾರರು ಆ ಬಗ್ಗೆ ಆಸಕ್ತಿ ತೋರುತ್ತಿಲ್ಲ.
    ಇದಕ್ಕೆ ಪ್ರಗತಿಪರ ಮಾವು ಬೆಳೆಗಾರ ಹಾಗೂ ಪ್ರಯೋಗಶೀಲ ಕೃಷಿಕ ನೀಲಟೂರಿನ ಚಂದ್ರಶೇಖರ್​ ಬೆಳೆಯ ಹಂತ ಹಂತದಲ್ಲಿ ಸೂಕ್ಷ$್ಮವಾಗಿ ಗಮನಿಸುತ್ತಾ, ಸಮಸ್ಯೆ ಕಂಡು ಬಂದರೆ, ತಕ್ಷಣ ತೋಟಗಾರಿಕೆ ತಜ್ಞರನ್ನು ಹಾಗೂ ಅನುಭವಿ ರೈತರನ್ನು ಸಂರ್ಪಕಿಸಿ, ಅವರ ಸಲಹೆ ಮೇರೆಗೆ ರೋಗ ನಿವಾರಣೆಗೆ ಕ್ರಮ ಕೈಗೊಂಡಿದ್ದಾರೆ.

    ಸಮಸ್ಯೆ ಪರಿಹಾರಕ್ಕೆ ಹೀಗೆ ಮಾಡಿ: ಕಾಯಿ ಕಪ್ಪಾಗುವುದನ್ನ ಸ್ಥಳಿಯವಾಗಿ ಮಂಗು ರೋಗ ಎಂದು ಕರೆಯಲಾಗುತ್ತದೆ. ಈ ರೋಗ ನಿವಾರಣೆಗೆ ಥೈಯೋಪೈನೇಟ್​ ಮೀಥೈಲ್​ ಪುಡಿ 1 ಲೀಟರ್​ ನೀರಿಗೆ 1.25 ಗ್ರಾಂನಂತೆ ಬೆರಸಿ ಸಿಂಪಂಡಣೆ ಮಾಡಬೇಕು. ಕಾಯಿ ಮೇಲಿನ ಫಂಗಸ್​ ಸತ್ತು ಬೂದಿಯಂತೆ ಮೇಲೇಳುತ್ತದೆ. ಮಳೆ ಬಂದಾಗ ಕಾಯಿ ಸ್ವಚ್ಛವಾಗಿ ಹೊಳೆಯುತ್ತದೆ ಎಂದು ಪ್ರಗತಿಪರ ರೈತ ಚಂದ್ರಶೇಖರ್​ ತಿಳಿಸಿದರು. ಅಲ್ಲದೆ, ಕಾಯಿಗಳ ಮೇಲೆ ಮಂಗು ಹೆಚ್ಚಾಗಿದ್ದಲ್ಲಿ 400 ಲೀಟರ್​ ನೀರಿಗೆ 1.5 ಕೆಜಿ ಮೈದಾ ಹಿಟ್ಟು ಬೆರೆಸಿ ಮಂಗು ಪೀಡಿತ ಕಾಯಿ ಮೇಲೆ ಸಿಂಪಡಣೆ ಮಾಡಬೇಕು. ಅದು ಒಣಗಿ ಕಾಯಿ ಮೇಲಿನ ಕಪ್ಪು ಅಂಟಿಸಿಕೊಂಡು ಉದುರಿ ಬೀಳುತ್ತದೆ. ಮಂಗು ಆವರಿಸಿದ ಎಲ್ಲ ಜಾತಿಯ ಮಾವಿಗೂ ಈ ಉಪಚಾರ ಮಾಡಬಹುದು. ಮಾವು ಬೆಳೆಗಾರರು ಸಾಂಪ್ರದಾಯಿಕ ಕೃಷಿ ಹಾಗೂ ಮಾರಾಟ ಪದ್ಧತಿಗೆ ಅಂಟಿಕೊಳ್ಳುವುದರಿಂದ ಲಾಭದ ಪ್ರಮಾಣ ತೀರಾ ಕಡಿಮೆ. ಬದಲಾದ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಬೆಳೆ ನಿರ್ವಹಣೆ ಹಾಗೂ ಆನ್​ಲೈನ್​ ವಹಿವಾಟು ರೂಡಿಸಿಕೊಳ್ಳಬೇಕು. ತಾಳ್ಮೆಯಿಂದ ಕೆಲಸ ಮಾಡಿದರೆ ಎಲ್ಲವೂ ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.

    ಆನ್​ಲೈನ್​ ಮಾರುಕಟ್ಟೆಯ ಮೂಲಕ ನಡೆಸುವ ವಹಿವಾಟಿನಲ್ಲಿ ಮಂಗು ರೋಗ ಪೀಡಿತ ಕಾಯಿಗಳಿಗೆ ಟನ್​ ಒಂದಕ್ಕೆ 15ಸಾವಿರ ರೂ.ನಂತೆ ಮಾರಾಟವಾಗುತ್ತಿದ್ದರೆ, ನಮ್ಮ ತೋಟದ ಕಾಯಿಗಳಿಗೆ ಮಂಡಿಯಲ್ಲಿ 60 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಬಹುಶಃ ಅನ್​ಲೈನ್​ ಮೂಲಕ ಮಾರಾಟವಾದರೆ, ಇನ್ನೂ ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು. ನೀಲಟೂರಿನ ಚಂದ್ರಶೇಖರ್​, ಪ್ರಗತಿಪರ ಮಾವು ಬೆಳೆಗಾರ, ಪ್ರಯೋಗಶೀಲ ಕೃಷಿಕ

    ಬಹುತೇಕ ಫಸಲು ಮಾರುಕಟ್ಟೆ ಸೇರಿದೆ. ಇನ್ನೂ ಸ್ವಲ್ಪ ಇದ್ದು, ಅವುಗಳಿಗೆ ಮಂಗು, ಊಜಿ, ಶಿಲೀಂದ್ರಗಳಂತಹ ರೋಗ ಬಾಧಿಸುತ್ತಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸುವುರಿಂದ ಅವುಗಳಲ್ಲಿ ರಾಸಾಯನಿಕ ಔಷಧಗಳನ್ನು ಸಿಂಪಡನೆ ಮಾಡುವುದು ಸರಿಯಲ್ಲ. ಆದ್ದರಿಂದ ರೈತರು ನೀರನ್ನು 45ಡಿಗ್ರಿಯಷ್ಟು ಬಿಸಿ ಮಾಡಿ, ಆ ನೀರಿನಲ್ಲಿ ಕಾಯಿಗಳನ್ನು ಚೆನ್ನಾಗಿ ತೊಳೆದು, ಒಣ ಬಟ್ಟೆಯಲ್ಲಿ ಒರೆಸಿದಾಗ, ಕಾಯಿ ಸ್ವಚ್ಛವಾಗಿ ಹೊಳೆಯುತ್ತದೆ.
    ಡಾ. ಟಿ.ಬಿ.ಮಂಜುನಾಥರೆಡ್ಡಿ, ಅಸಿಸ್ಟೆಂಟ್​ ಪ್ರೊ., ರೋಗ ಲಕ್ಷಣ ಶಾಸ್ತ್ರ, ತೋಟಗಾರಿಕೆ ಇಲಾಖೆ, ಟಮಕ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts