More

    ಕೈಗಾರಿಕೆಗಳಿಗೆ ಸಿಗದ ಇಲಾಖೆಗಳ ಸಹಕಾರ

    ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಕೈಗಾರಿಕಾ ವಸಾಹತಿನಲ್ಲಿ ನಿವೇಶನ ಪಡೆದವರು ಸೇಲ್ ಡೀಡ್ ಮಾಡಿಕೊಳ್ಳಲು ಒಂದೂವರೇ ದಶಕ ಹೋರಾಟ ಮಾಡಬೇಕಾಯಿತು. ಕೊನೆಗೂ ಆ ಸೇಲ್ ಡೀಡ್ ಮಾಡಿಕೊಡಲು ಜಗದೀಶ ಶೆಟ್ಟರ್ ಅವರು ಕೈಗಾರಿಕಾ ಮಂತ್ರಿಯಾಗಿ ಬರಬೇಕಾಯಿತು ಎಂದರೆ ನಂಬಲೇಬೇಕು.

    ಈಗಿನ ಇನ್ವೆಸ್ಟ್ ಕರ್ನಾಟಕ ರೂವಾರಿಗಳೂ ಆದ ಶೆಟ್ಟರ್, ರಾಜ್ಯದ ಕೈಗಾರಿಕಾ ವಸಾಹತುಗಳಲ್ಲಿ ಸಮಸ್ಯೆಗಳನ್ನು ಅರಿತು ಉದ್ಯಮಿಗಳ ನೋವು ಆಲಿಸಿ ಅನೇಕ ತೊಂದರೆಗಳನ್ನು ದೂರ ಮಾಡಿದ್ದಾರೆ. ಕೈಗಾರಿಕೆಗಳ ಬೆಳವಣಿಗೆಗೆ ರಾಜ್ಯದಲ್ಲಿ ಭವಿಷ್ಯ ಇದೆ ಎಂಬ ಭರವಸೆ ಮೂಡಿಸುತ್ತಿದ್ದಾರೆ. ಅಂತೆಯೇ ಇನ್ನೂ ಹಲವು ಸಮಸ್ಯೆಗಳು ಬಾಕಿ ಇದ್ದು, ಉದ್ಯಮಪತಿಗಳು ಆಗಾಗ ನಿವೇದನೆ ಮಾಡುತ್ತಿದ್ದಾರೆ.

    ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಯಾವುದೇ ಜಿಲ್ಲೆಗಳನ್ನು ತೆಗೆದುಕೊಂಡರೂ ಇದುವರೆಗಿನ ಕೈಗಾರಿಕಾ ಇತಿಹಾಸ ನೋಡಿದರೆ ಉದ್ಯಮಗಳಿಗೆ ಪೂರಕ ವಾತಾವರಣ ಇರಲಿಲ್ಲ. ಈಗಲೂ ಹುಬ್ಬಳ್ಳಿ- ಧಾರವಾಡದ ಕೆಲ ಕೈಗಾರಿಕಾ ವಸಾಹತುಗಳಿಗೆ ಹೋದರೆ ಸರಿಯಾದ ರಸ್ತೆ, ಗಟಾರು, ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಕಂಡು ಬರುತ್ತದೆ. ಮಳೆಗಾಲದಲ್ಲಿ ಅಲ್ಲಿನ ಉದ್ಯಮಿಗಳು ಪ್ರತಿಯೊಂದಕ್ಕೂ ಗೋಳಿಡಬೇಕಾದ ಪ್ರಸಂಗ ಬರುತ್ತದೆ. ಸರಕು ತುಂಬಿದ ಲಾರಿಯೊಂದು ಕೆಸರು ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡರೆ ನೂರು ಇನ್ನೂರು ಮೀಟರ್ ದೂರ ತಮ್ಮ ಘಟಕಗಳಿಗೆ ಸರಕು ಹೊತ್ತುಕೊಂಡು ಸಾಗಿಸಬೇಕಾಗುತ್ತದೆ.

    ಕನಿಷ್ಠ ಸೌಲಭ್ಯಗಳಿಗೂ ಮೂರ್ನಾಲ್ಕು ದಶಕದಿಂದ ಹೋರಾಡಿದ ನಮ್ಮ ಇಂಡಸ್ಟ್ರಿಯಲಿಸ್ಟ್ ಗಳು ಹೇಗೋ ಉದ್ಯಮ ನಡೆಸಿಕೊಂಡು ಬಂದಿದ್ದಾರೆ. ಅವರಿಗೊಂದಿಷ್ಟು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಅವಕಾಶ ಕೊಟ್ಟರೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗಮನ ಸೆಳೆಯುವ ಸಾಮರ್ಥ್ಯ ಈ ಭಾಗದ ಕೈಗಾರಿಕೋದ್ಯಮಿಗಳಿಗೆ ಇದೆ. ಹುಬ್ಬಳ್ಳಿ ವಾಲ್ವ್​ಗಳು ದೇಶ- ವಿದೇಶಗಳಲ್ಲಿ ಹೆಸರು ಪಡೆದಿವೆ. ಅಂತಹ ಅನೇಕ ಸರಕುಗಳಿಗೆ ಹುಬ್ಬಳ್ಳಿ ಖ್ಯಾತಿ ಪಡೆದಿದೆ. ಆದರೆ, ಅನೇಕ ಕಂಪನಿಗಳು ಈಗಲೂ ನಾಮ್ೆವಾಸ್ತೆ ಎಂಬಂತೆ ಉಸಿರು ಹಿಡಿದುಕೊಂಡಿವೆ.

    ಹುಬ್ಬಳ್ಳಿ- ಧಾರವಾಡ ಅಷ್ಟೇ ಅಲ್ಲ ಈ ಭಾಗದಲ್ಲಿ ಸಣ್ಣ ಕೈಗಾರಿಕೆಗಳಿಗೆ ಸರ್ಕಾರದ ಸಬ್ಸಿಡಿಯಾಗಲಿ, ಸೌಲಭ್ಯಗಳಾಗಲಿ ಮರೀಚಿಕೆಯಾಗೇ ಉಳಿಯುತ್ತಿವೆ.

    ದರ ಹೆಚ್ಚಳ: ಇಲ್ಲಿಯ ಗಾಮನಗಟ್ಟಿಯಲ್ಲಿ ಕೈಗಾರಿಕಾ ವಸಾಹತುವನ್ನು ಕೆಐಎಡಿಬಿಯಿಂದ ಅಭಿವೃದ್ಧಿ ಪಡಿಸಲಾಗಿದೆ. ಕೈಗಾರಿಕೋದ್ಯಮಿಗಳಿಗೆ ನಿವೇಶನ ಕೊಡುವಾಗ ಪ್ರತಿ ಚದರ ಅಡಿಗೆ 400 ರೂ. ನಿಗದಿ ಮಾಡಲಾಗಿತ್ತು. ಆದರೆ, ಈಗ ಅದನ್ನು 700 ರೂ.ಗೆ ಹೆಚ್ಚಿಸಲಾಗಿದೆ. 120ಕ್ಕೂ ಹೆಚ್ಚು ಜನ ಈಗಾಗಲೇ ಉದ್ಯಮ ಆರಂಭಿಸಿದ್ದಾರೆ. ಈಗ ಏಕಾಏಕಿ ದರ ಹೆಚ್ಚಿಸಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆದರೂ ಪರಿಹಾರ ಸಿಕ್ಕಿಲ್ಲ. ಇನ್ನು ಸಣ್ಣ ಕೈಗಾರಿಕೆಗಳನ್ನು ವಾಣಿಜ್ಯ ಉದ್ದೇಶ (ಕಮರ್ಷಿಯಲ್) ಎಂದು ಪರಿಗಣಿಸದಿರುವಂತೆ ಪ್ರತಿ ಕೆಇಆರ್​ಸಿ ಸಭೆಯಲ್ಲೂ ವಿದ್ಯುತ್ ಇಲಾಖೆಗೆ ಸಣ್ಣ ಉದ್ಯಮದಾರರು ಕೇಳುತ್ತಲೇ ಬಂದಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಗಾಮನಗಟ್ಟಿ ಕೈಗಾರಿಕಾ ವಸಾಹತುವಿಗೆ ಸರಿಯಾದ ಸಂಪರ್ಕ ರಸ್ತೆ ಇಲ್ಲ. ಇಂತಹ ಹತ್ತಾರು ಇಲ್ಲಗಳ ಮಧ್ಯೆಯೂ ಉದ್ಯಮಪತಿಗಳು ಮುನ್ನಡೆಯುತ್ತಿದ್ದಾರೆ.

    ಲಾಬಿ ಮಾಡಲ್ಲ: ಸಣ್ಣ ಕೈಗಾರಿಕೆಯವರಿಗೆ ದೊಡ್ಡ ಮಟ್ಟದ ಲಾಬಿ ಮಾಡಿ ಗೊತ್ತಿರುವುದಿಲ್ಲ. ಏನಿದ್ದರೂ ಸಂಘಟನೆಯೊಂದೇ ಇವರಿಗೆ ಇರುವ ದಾರಿ. ಈಗ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ಹಿನ್ನೆಲೆಯಲ್ಲಿ ದೊಡ್ಡ ಕೈಗಾರಿಕೆಗಳು ಬಂದರೂ ವಿವಿಧ ಇಲಾಖೆಗಳ ಅಸಹಕಾರ ಇದೇ ರೀತಿ ಮುಂದುವರಿಯಬಾರದು. ದೊಡ್ಡ ಕೈಗಾರಿಕೆಗಳು ಇಂತಹ ಅಡೆತಡೆಗಳನ್ನು ಹೇಗೋ ದಾಟಬಹುದು. ಆದರೆ, ಕೈಗಾರಿಕೆ ಬೆಳವಣಿಗೆಗೆ ಪೂರಕ ವಾತಾವರಣ ಇರದಿದ್ದರೆ ಹೇಗೆ? ಎಂಬುದು ಉದ್ಯಮಾಸಕ್ತರ ಪ್ರಶ್ನೆ. ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಯಶಸ್ವಿ ಮಾಡುವುದೇ ಆಗಿದ್ದರೆ ಅಥವಾ ದೊಡ್ಡ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗಕ್ಕೆ ಬರುವುದೇ ಸರ್ಕಾರದ ಆಶಯವಾಗಿದ್ದರೆ ಅದಕ್ಕಾಗಿ ಒಬ್ಬ ಹಿರಿಯ ಅಧಿಕಾರಿಯನ್ನು ನೇಮಿಸಬೇಕು. ಕಂಪನಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಇಲ್ಲಿರುವ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡುವುದು, ಸರ್ಕಾರ ನೀಡುವ ರಿಯಾಯಿತಿ, ಸೌಕರ್ಯಗಳನ್ನು ತಿಳಿಸಿಕೊಡುವ ಕೆಲಸ ಆಗಬೇಕು. ವಿವಿಧ ಇಲಾಖೆ ಅಧಿಕಾರಿಗಳನ್ನು ಅದಕ್ಕಾಗಿ ಸಜ್ಜುಗೊಳಿಸಬೇಕು ಎಂಬುದು ಈ ಭಾಗದ ಜನರ ಆಶಯ.

    ಈ ಭಾಗದಲ್ಲಿ ಉದ್ಯಮ ಬೆಳವಣಿಗೆಗೆ ಎಲ್ಲ ಇಲಾಖೆಗಳ ಸಹಕಾರ ಮುಖ್ಯ. ಗಾಮನಗಟ್ಟಿ ವಸಾಹತಿನಲ್ಲಿ ನಿವೇಶನ ಹಂಚಿಕೆಯಾದ ನಂತರ ದರ ಹೆಚ್ಚಳ ಮಾಡಿ ಹೊರೆಯಾಗಿಸಿದರು. ಈಗಲೂ ಅಲ್ಲಿ ಸಂಪರ್ಕ ರಸ್ತೆ ಇಲ್ಲ. ಸಣ್ಣ ಕೈಗಾರಿಕೆಗಳಿಗೆ ರಿಯಾಯಿತಿ ವಿದ್ಯುತ್ ನೀಡಿ ಎಂದು ಪ್ರತಿ ಕೆಇಆರ್​ಸಿ ಸಭೆಯಲ್ಲೂ ಕೇಳುತ್ತಿದ್ದೇವೆ. | ಎನ್.ಎಸ್. ಬಿರಾದಾರ, ಅಧ್ಯಕ್ಷರು, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘ

    1500ಕ್ಕೂ ಹೆಚ್ಚು ಉದ್ಯಮಿಗಳ ನಿರೀಕ್ಷೆ: ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ ಸಮಾವೇಶವು ಫೆ. 14ರಂದು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್​ನಲ್ಲಿ ಜರುಗಲಿದ್ದು, ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಸೋಮವಾರ ಧಾರವಾಡದ ತಮ್ಮ ಕಚೇರಿಯಲ್ಲಿ ಪೂರ್ವಸಿದ್ಧತೆ ಪರಿಶೀಲನೆ ಸಭೆ ನಡೆಸಿ, ಸಲಹೆ ಸೂಚನೆ ನೀಡಿದರು.

    ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಉತ್ತರ ಕನ್ನಡ, ಗದಗ, ದಾವಣಗೆರೆ ಹಾಗೂ ಕೊಪ್ಪಳ ಜಿಲ್ಲೆಯ ಜಂಟಿ ನಿರ್ದೇಶಕರು ಆಯಾ ಜಿಲ್ಲೆಗಳ ಕೈಗಾರಿಕೆ ಸಂಘಗಳಿಗೆ ಆಮಂತ್ರಣ ನೀಡಿದ್ದಾರೆ. ಸಮ್ಮೇಳನದಲ್ಲಿ ಧಾರವಾಡ ಜಿಲ್ಲೆಯಿಂದ 1000, ಬೆಳಗಾವಿ ಜಿಲ್ಲೆಯಿಂದ 200 ಮತ್ತು ಉಳಿದ ಪ್ರತಿ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಉದ್ದಿಮೆದಾರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

    ಸಮ್ಮೇಳನದ ಅಂಗವಾಗಿ ಅವಳಿ ನಗರದ ಸೌಂದಯೀಕರಣ, ಜಾಹೀರಾತು ಫಲಕಗಳ ಅಳವಡಿಕೆ, ಪೊಲೀಸ್ ಬಂದೋಬಸ್ತ್, ವಾಹನಗಳ ರ್ಪಾಂಗ್ ಸ್ಥಳ ನಿಗದಿ ಇತ್ಯಾದಿಗಳ ಕುರಿತು ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್. ರುದ್ರಪ್ಪ, ರವಿ ನಾಯಕ, ಮಹಮ್ಮದ್ ಜುಬೇರ, ಅಜೀಜ ದೇಸಾಯಿ ಇತರರಿದ್ದರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts