More

    ಕೈಗಾರಿಕೆಗಳಿಗೆ ವಿನಾಯಿತಿ, ಪ್ರಯೋಜನ ಅಷ್ಟಕ್ಕಷ್ಟೇ

    ಮಂಗಳೂರು: ಈ ಬಾರಿಯ ಲಾಕ್‌ಡೌನ್‌ನಲ್ಲಿ ಸರ್ಕಾರ ಸ್ಪಷ್ಟವಾಗಿ ಕೈಗಾರಿಕೆಗಳನ್ನು ಹೊರಗಿರಿಸಿರುವುದಕ್ಕೆ ಕೈಗಾರಿಕಾ ವಲಯದಿಂದ ಸ್ವಾಗತ ಸಿಕ್ಕಿದೆ. ಆದರೆ ಯಾವುದೇ ಸಾರಿಗೆ ಇಲ್ಲದಿರುವಾಗ ಕಾರ್ಮಿಕರನ್ನು ಕೈಗಾರಿಕಾ ಘಟಕಗಳಿಗೆ ಕರೆದೊಯ್ಯುವುದು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ.

    ಕಳೆದ ಬಾರಿಯಂತೆ ಈ ಬಾರಿಯೂ ಖಾಸಗಿ ಬಸ್‌ಗಳನ್ನು ಬುಕ್ ಮಾಡಿ ಕಾರ್ಮಿಕರನ್ನು ಕರೆತರುವುದೇ ಎನ್ನುವ ಬಗ್ಗೆ ಸದ್ಯ ಯೋಚನೆ ಇದೆ. ಆದರೆ ಅದಕ್ಕೆ ಪೊಲೀಸರಿಂದ ಕಳೆದ ಬಾರಿ ಅಡೆತಡೆ ಎದುರಾಗಿದ್ದು, ಈ ಬಾರಿ ಅಂತಹದ್ದು ಎದುರಾಗದಿರಲಿ ಎನ್ನುತ್ತಿದ್ದಾರೆ ಕೈಗಾರಿಕೋದ್ಯಮಿಗಳು.

    ಈ ಬಾರಿಯ ಲಾಕ್‌ಡೌನ್‌ನಲ್ಲಿ ಗಾರ್ಮೆಂಟ್ಸ್ ಬಿಟ್ಟು ಇತರ ಕೈಗಾರಿಕೆಗಳಿಗೆ ನಿರ್ಬಂಧವಿಲ್ಲ. ಮಂಗಳೂರಿನಲ್ಲಿ ಗಾರ್ಮೆಂಟ್ ಫ್ಯಾಕ್ಟರಿಗಳಿಲ್ಲ. ಪ್ಲಾಸ್ಟಿಕ್, ಫಾರ್ಮಾ, ಇಂಜಿನಿಯರಿಂಗ್, ಆಹಾರೋತ್ಪನ್ನದ ಫ್ಯಾಕ್ಟರಿಗಳಿವೆ. ಆಹಾರೋದ್ಯಮ, ಪ್ಲಾಸ್ಟಿಕ್ ಇತ್ಯಾದಿಗೆ ಬೇಡಿಕೆ ಇಳಿಯದು, ಉಳಿದ ಕೈಗಾರಿಕೆಗಳಿಗೆ ಉತ್ಪಾದನೆ ಎಂದಿನಂತೆ ಆದರೂ ರಾಜ್ಯದಲ್ಲಿ ಲಾಕ್‌ಡೌನ್ ಕಾರಣ ವಿತರಣೆ ಸರಿಯಾಗಿ ಆಗದು. ಹೊರ ರಾಜ್ಯಗಳಿಗೆ ಕಳಿಸುವವರಿಗೆ ತೊಂದರೆ ಇಲ್ಲ. ಇನ್ನು ಇಂಜಿನಿಯರಿಂಗ್ ಕ್ಷೇತ್ರದವರಿಗೆ ಲಿಕ್ವಿಡ್ ಆಕ್ಸಿಜನ್ ಪೂರೈಕೆಯನ್ನು ಎರಡು ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಉತ್ಪಾದನೆ ಮೇಲೆ ಅದು ಪರಿಣಾಮ ಬೀರಿದೆ.

    ಕೆಲ ಕ್ಷೇತ್ರದವರು ಉತ್ಪಾದಿಸಿದ್ದನ್ನು ಗೋದಾಮಿನಲ್ಲಿ ಶೇಖರಿಸಿ ಇರಿಸಬಹುದೇ ಹೊರತು ಈಗ ಮಾರಾಟವಿಲ್ಲದ ಕಾರಣ ಏನೂ ಮಾಡಲಾಗದು. ಏನೇ ಇರಲಿ, ಕಳೆದ ಬಾರಿಯಂತೆ ಮುಚ್ಚಿರುವುದಕ್ಕಿಂತ ಇದು ಪರವಾಗಿಲ್ಲ ಎಂದು ಸಣ್ಣ ಕೈಗಾರಿಕಾ ಸಂಘದ ಗೌರವ್ ಹೆಗ್ಡೆ ತಿಳಿಸುತ್ತಾರೆ. ಈವರೆಗೆ ಕಾರ್ಮಿಕರಲ್ಲಿ ಹೆಚ್ಚಿನವರು ಕೆಲಸ ಮಾಡುತ್ತಿದ್ದಾರೆ, ಇನ್ನೂ ತಮ್ಮ ಊರಿಗೆ ತೆರಳಲು ಮನಸ್ಸು ಮಾಡಿಲ್ಲ, ಅದು ಈ ಬಾರಿಯ ಮತ್ತೊಂದು ಧನಾತ್ಮಕ ಅಂಶ.

    ಮುಂದಿನ ದಿನಗಳು ಕಠಿಣ: ಸರ್ಕಾರ ಇಂತಹ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಮೊದಲು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಮುಖ್ಯಸ್ಥರನ್ನು ಸಂಪರ್ಕ ಮಾಡುತ್ತಾರೆ ಎಂದು ನಾವು ಭಾವಿಸಿದ್ದೆವು. ಈಗಾಗಲೇ ಕೋವಿಡ್ ಸಾಂಕ್ರಾಮಿಕ ಬಾಧಿಸಿ ಒಂದು ವರ್ಷ ಕಳೆದಿದೆ. ಈಗ ಕೇಂದ್ರ ಸರ್ಕಾರದಿಂದ ಲಾಕ್‌ಡೌನ್‌ಗೆ ಯಾವುದೇ ನಿರ್ದೇಶನವಿಲ್ಲ. ಹಾಗಾಗಿ ಯಾವುದೇ ಆತ್ಮನಿರ್ಭರ ಪ್ಯಾಕೇಜ್ ಇರುವುದಿಲ್ಲ. ಸಮಾಜವನ್ನೇ ಲಾಕ್‌ಡೌನ್ ಮಾಡಿದರೆ ಆರ್ಥಿಕತೆಯನ್ನೇ ಲಾಕ್‌ಡೌನ್ ಮಾಡಿದಂತೆ. ಉದ್ಯಮದ ಮಂದಿ ಬಿಲ್ ಭರಿಸುವುದು, ತೆರಿಗೆ ಪಾವತಿ, ಸಾಲ ಮರುಪಾವತಿ ಇತ್ಯಾದಿಗಳನ್ನು ಹೇಗೆ ಮಾಡುತ್ತಾರೆ ಎನ್ನುವುದನ್ನು ಊಹಿಸುವುದೇ ದುರ್ಬರವಾಗಲಿದೆ. ಮುಂದಿನ ದಿನಗಳು ಬಲು ಕಠಿಣವಾಗಲಿದೆ ಎಂದು ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಐಸಾಕ್ ವಾಸ್.

    ಕರ್ಫ್ಯೂ ಹೆಸರಿನಲ್ಲಿ ಬೆಳಗ್ಗೆ 6ರಿಂದ 10ರವರೆಗೆ ಮಾತ್ರವೇ ದಿನಸಿ ವಸ್ತು ಖರೀದಿಗೆ ನೀಡಿದರೆ ಇದರ ಪರಿಣಾಮ ಜನರನ್ನು ಒಟ್ಟು ಸೇರಿಸಿದಂತೆ ಆಗಲಿದೆ. ಕಡಿಮೆ ಸಮಯದಲ್ಲಿ ಎಲ್ಲರೂ ಖರೀದಿಗೆ ಧಾವಿಸುತ್ತಾರೆ. ಇದರಿಂದ ಲಾಕ್‌ಡೌನ್‌ನ ಉದ್ದೇಶವೇ ಈಡೇರದು ಎಂದೂ ಅವರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts