More

    ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ತಂತ್ರ ಫಲಿಸಲ್ಲ – ಪ್ರಮೋದ ಮುತಾಲಿಕ್

    ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಂದುತ್ವದಡಿ ಸೇವಾ ಮನೋಭಾವ ಹಾಗೂ ಪಾರದರ್ಶಕ ವ್ಯಕ್ತಿಯಾಗಿದ್ದಾರೆ. ಪ್ರತಿಪಕ್ಷಗಳು ಏನೇ ಸರ್ಕಸ್ ಮಾಡಿದರೂ ಮೋದಿ ಮಣಿಸಲು ಆಗಲ್ಲ. ಅಗತ್ಯವಾದರೆ ಶ್ರೀರಾಮಸೇನೆಯಿಂದಲೂ ‘ಮೋದಿ ಗೆಲ್ಲಿಸಿ, ದೇಶ ಉಳಿಸಿ’ ಅಭಿಯಾನ ಆರಂಭಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರದರ್ಶಕ, ಸುಭದ್ರ ಆಡಳಿತ ನಡೆಸುತ್ತಿರುವ ಮೋದಿ ವಿರುದ್ಧ ರಾಷ್ಟ್ರದ ಇನ್ನಿತರ ರಾಜಕೀಯ ಪಕ್ಷಗಳು ಒಗ್ಗೂಡಿರುವುದು ದೇಶಕ್ಕೆ ಅಪಾಯಕಾರಿ ಸಂಗತಿ ಎಂದರು.

    ಯುಪಿಎ ಬಣಕ್ಕೆ ಮುಸ್ಲಿಂ ತುಷ್ಟೀಕರಣ ಬೇಕಿದೆಯೇ ಹೊರತು ಹಿಂದುತ್ವ ಬೇಡ. ದೇಶಕ್ಕಾಗಿ ಹೋರಾಡಿದ ಸಾವರ್ಕರ್, ಭಗತ್‌ಸಿಂಗ್ ಪಾಠಗಳನ್ನು ಕಾಂಗ್ರೆಸ್ ಪಠ್ಯದಿಂದ ತೆಗೆದಿದ್ದು ಏಕೆ? ಇವರಿಗೆ ಭ್ರಷ್ಟರು, ದೇಶದ್ರೋಹಿಗಳು ಬೇಕೇ ಹೊರತು ದೇಶಭಕ್ತರು ಬೇಡ. ರಾಜ್ಯದಲ್ಲಿ ಬಿಜೆಪಿ ವಿರೋಧಿ ಮತದಾನದಿಂದ ಕಾಂಗ್ರೆಸ್ ಅಧಿಕಾರಕ್ಕೇರಿದೆಯೇ ಹೊರತು ಕಾಂಗ್ರೆಸ್ ಗೆಲುವು ಸಾಧಿಸಿಲ್ಲ.

    ದೇಶಕ್ಕೆ ಮೋದಿ ಬೇಕು, ದೇಶ ಸುರಕ್ಷಿತ ಇದ್ದರೆ ರಾಜ್ಯಗಳು ಸುರಕ್ಷಿತ ಇರುತ್ತವೆ. ಇಲ್ಲವಾದರೆ ರಾಜ್ಯವೂ ತಾಲಿಬಾನ್ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಯುಸಿಸಿಗೆ ಈಗಾಗಲೇ ಆಪ್ ಮತ್ತು ಮಾಯಾವತಿ ಪಕ್ಷ ಬೆಂಬಲಿಸಿದೆ. ಇದೀಗ 50 ಲಕ್ಷಕ್ಕೂ ಹೆಚ್ಚು ಜನರು ಸಮಾನ ನಾಗರಿಕ ಸಂಹಿತೆ ಜಾರಿಗೆ ಬೆಂಬಲ ನೀಡಿದ್ದಾರೆ.

    ಹೀಗಾಗಿ ಕೇಂದ್ರ ಸರ್ಕಾರ ಮೀನಮೇಷ ಮಾಡದೆ ಕೂಡಲೇ ಸಮಾನ ನಾಗರಿಕ ಕಾನೂನು ಜಾರಿ ಮಾಡಬೇಕು. ಯುಸಿಸಿ ಜಾರಿಗೆ ಆಗ್ರಹಿಸಿ ಶ್ರೀರಾಮಸೇನೆ ಸಂಘಟನೆ ನೇತೃತ್ವದಲ್ಲಿ ಜು.18ರಿಂದಲೇ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಜು.28ರ ವರೆಗೆ 5 ಲಕ್ಷ ಸಹಿ ಸಂಗ್ರಹ ನಡೆಯಲಿದೆ. ಶರಿಯಾ ಕಾನೂನು ಪ್ರಕಾರ ನಡೆಯಬೇಕೆನ್ನುವವರು ಅಪಘಾನಿಸ್ತಾಕ್ಕೆ ಹೋಗಬೇಕು. ಆರು ತಿಂಗಳಲ್ಲಿ ಕಾನೂನು ಜಾರಿಗೊಳಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಎ.ಕೆ.ಕೊಟ್ಟೂರಶೆಟ್ಟಿ, ಆದಿತ್ಯ ಶಾಸ್ತ್ರಿ ಹಾಗೂ ರಾಜು ಕೋಕಿತ್ಕರ್ ಇದ್ದರು.

    ಕಾಂಗ್ರೆಸ್‌ನಿಂದ ಯೋಗ್ಯ ನಿರ್ಧಾರ: ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿ ದೇವಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಮೊಬೈಲ್ ಬ್ಯಾನ್ ಮಾಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಸರ್ಕಾರ ಇಂದು ಯೋಗ್ಯ ನಿರ್ಣಯ ತೆಗೆದುಕೊಂಡಿದೆ. ಇಲಾಖೆ ವ್ಯಾಪ್ತಿಯಲ್ಲಿ 36 ಸಾವಿರ ದೇವಸ್ಥಾನಗಳಿದ್ದು, ಇನ್ನುಳಿದ ಖಾಸಗಿ ದೇವಸ್ಥಾನಗಳ ಆಡಳಿತ ಮಂಡಳಿಗೆ ಮನವಿ ಮಾಡುತ್ತೇನೆ. ಎಲ್ಲ ದೇವಸ್ಥಾನಗಳಲ್ಲೂ ಮೊಬೈಲ್ ಬ್ಯಾನ್ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು

    ಯತಿ ಕೊಲೆಯಲ್ಲಿ ತಾಲಿಬಾನ್ ಮನಸ್ಥಿತಿ: ಹಿರೇಕೋಡಿ ಜೈನಮುನಿ ಹತ್ಯೆ ತಾಲಿಬಾನ್ ಮಾದರಿಯಲ್ಲಿ ನಡೆದಿದ್ದು, ತಾಲಿಬಾನ್ ಮನಸ್ಥಿತಿ ಇರುವವರೇ ಜೈನಮುನಿ ದೇಹವನ್ನು ತುಂಡರಿಸಿದ್ದಾರೆ. ಪ್ರಕರಣದಲ್ಲಿ ಕೆಲ ಸಂಘಟನೆಗಳೂ ಇರಬಹುದು. ಇದರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ಪತ್ತೆಹಚ್ಚಬೇಕಿದೆ. ಸಿಬಿಐ ತನಿಖೆಗೆ ಕೊಡುವ ಅಗತ್ಯವಿಲ್ಲ. ಆದರೆ, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಕ್ರೌರ್ಯ ಮೆರೆದ ಆರೋಪಿಗಳ ಪರ ವಕಾಲತು ವಹಿಸದಂತೆ ಬೆಳಗಾವಿ ವಕೀಲರ ಸಂಘಕ್ಕೆ ಪ್ರಮೋದ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts