More

    ಕೇಂದ್ರ ಸಚಿವ-ಶಾಸಕ ಬೆಂಬಲಿಗರ ಬೀದಿ ಕಾಳಗ

    ಬಸವಕಲ್ಯಾಣ: ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಸ್ಥಳೀಯ ಬಿಜೆಪಿ ಶಾಸಕ ಶರಣು ಸಲಗರ ಬೆಂಬಲಿಗರ ಮಧ್ಯೆ ನಡು ಬೀದಿಯಲ್ಲಿ ವಾಗ್ವಾದ, ಬೈದಾಟ, ಅವಾಚ್ಯ ಪದ ಬಳಸಿ ಕಿತ್ತಾಡಿರುವ ಘಟನೆ ಶನಿವಾರ ನಡೆದಿದೆ. ಸ್ವಲ್ಪದರಲ್ಲೇ ಮಾರಾಮಾರಿ ತಪ್ಪಿದೆ.

    ಸಚಿವ ಖೂಬಾ, ಶಾಸಕ ಸಲಗರ ನಡುವೆ ಇತ್ತೀಚೆಗೆ ಸಂಬಂಧ ಹಳಸಿದೆ. ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ ರಾಲಿ ವೇಳೆ ಇದು ಸ್ಫೋಟಗೊಂಡಿದೆ. ಪರಸ್ಪರ ವಾಗ್ವಾದ ಜೋರಾಗಿ ನಡೆದಿದ್ದು, ಶಾಸಕರ ಬೆಂಬಲಿಗರು ಸಚಿವರ ಕಾರಿಗೆ ಮುತ್ತಿಗೆ ಹಾಕಿದ್ದಲ್ಲದೆ ಹಿಂಬದಿ ನಂಬರ್ ಪ್ಲೇಟ್ ಕಿತ್ತೆಸೆದು, ಅದನ್ನು ಗಾಜಿನ ಮೇಲೆ ಎಸೆದಿದ್ದಾರೆ. ನೀರಿನ ಬಾಟಲ್ ಸಹ ಬಿಸಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಸಚಿವರ ಕಾರು ಸುರಕ್ಷಿತವಾಗಿ ಮುಂದೆ ಕಳಿಸಿಕೊಟ್ಟು ಮತ್ತಷ್ಟು ಕಿರಿಕ್ ಆಗುವುದನ್ನು ತಪ್ಪಿಸಿದ್ದಾರೆ.

    ಶಾಸಕರ ಬೆಂಬಲಿಗರು ಸಚಿವರ ವಿರುದ್ಧ ಜೋರಾಗಿ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಅವಾಚ್ಯ ಪದಗಳ ಬಳಕೆಯೂ ನಡೆದಿದೆ. ಸಚಿವರ ಬೆಂಬಲಿಗರು ಸಹ ಶಾಸಕರ ಟೀಮ್ ವಿರುದ್ಧ ಬೈದು ಆಕ್ರೋಶ ಹೊರಹಾಕಿದ್ದಾರೆ. ಒಂದು ಹಂತದಲ್ಲಿ ಶಾಸಕ ಸಲಗರ ಸಹ ಸಚಿವರಿಗೆ ಟಾಗರ್ೆಟ್ ಮಾಡಿ ಏರುದನಿಯಲ್ಲಿ ಭಾರತ ಮಾತಾ ಕಿ ಜೈಕಾರ ಘೋಷಣೆ ಹಾಕುತ್ತ ಎಲ್ಲರಿಗೂ ತಬ್ಬಿಬ್ಬಾಗುವಂತೆ ಮಾಡಿದ್ದಾರೆ. ಶಾಸಕರ ಈ ಆವೇಶ ಸ್ಥಿತಿ ಮತ್ತಷ್ಟು ಗರಂ ಆಗುವಂತೆ ಮಾಡಿತು. ಸ್ವಪಕ್ಷೀಯರ ನಡುವಿನ ಈ ಜಗಳದ ಬೆಳವಣಿಗೆ ಕೆಲಕಾಲ ಸ್ಥಳದಲ್ಲಿ ಗೊಂದಲದ ಸ್ಥಿತಿಗೆ ಕಾರಣವಾಗಿತ್ತು.

    ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಇತರ ಮುಖಂಡರು ಈ ಎಲ್ಲ ಘಟನೆಗೆ ಮೂಕಸಾಕ್ಷಿಯಾದರು. ಶಾಸಕರ ಬೆಂಬಲಿಗರ ಆಕ್ರೋಶ, ಆವೇಶ, ಕಿರುಚಾಟ, ಕಾರಿನ ಮೇಲೆ ದಾಳಿಗೆ ಮುಂದಾದ ಸ್ಥಿತಿ ಸಚಿವ ಖೂಬಾಗೆ ಶಾಕ್ ನೀಡಿತು. ಕೆಲಕಾಲ ಇದರಿಂದ ಖೂಬಾ ವಿಚಲಿತರಾದಂತೆ ಕಂಡರು. ಇಂದಿನ ಬೆಳವಣಿಗೆ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

    ಇದೆಲ್ಲ ಹೇಗಾಯಿತು?: ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ ರ್ಯಾಲಿ ನಗರದ ವಿವಿಧ ವೃತ್ತಗಳಲ್ಲಿ ಬಂದಾಗ ಶಾಸಕ ಸಲಗರ ಅವರನ್ನು ಕಡೆಗಣಿಸಲಾಗಿದೆ. ಸಚಿವರ ಪಕ್ಕದಲ್ಲಿ (ಮುಂಭಾಗ) ಬರುವುದಕ್ಕೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ. ಇದು ಶಾಸಕರ ಬೆಂಬಲಿಗರ ಸಿಟ್ಟಿಗೆ ಕಾರಣವಾಗಿದೆ. ಶಿವಾಜಿ ವೃತ್ತ ದಾಟಿದ ಬಳಿಕ (ಮಠಪತಿ ಆಸ್ಪತ್ರೆ ಹತ್ತಿರ) ಇದು ವಾಗ್ವಾದಕ್ಕೆ ತಿರುಗಿದೆ. ಇದೇ ವೇಳೆ ಸಚಿವರ ಬೆಂಬಲಿಗರು ಶಾಸಕರ ಬೆಂಬಲಿಗರೊಬ್ಬರಿಗೆ ಹೊಡೆದಿದ್ದಾರೆ. ಇದು ಶಾಸಕರು ಮತ್ತವರ ಬೆಂಬಲಿಗರನ್ನು ಕೆರಳಿಸಿ ಖೂಬಾ ವಿರುದ್ಧ ನೇರ ಸಮರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಘಟನೆ ಬಳಿಕ ಎಸ್ಪಿ ಡಿ.ಕಿಶೋರಬಾಬು, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಎಎಸ್ಪಿ ಶಿವಾಂಶು ರಾಜಪುತ ನಗರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದು, ಎಲ್ಲ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದಾರೆ.

    ಹಳಸಿದ ಸಂಬಂಧ: ಕಳೆದ ವಿಧಾನಸಭೆ ಉಪ ಚುನಾವಣೆ ಹೊತ್ತಿನಲ್ಲಿ ಸಚಿವ ಖೂಬಾ ಮತ್ತು ಸಲಗರ ಮಧ್ಯೆ ಗಳಸ್ಯ-ಕಂಠಸ್ಯ ಸಂಬಂಧವಿತ್ತು. ಬಿಜೆಪಿ ಟಿಕೆಟ್ ಸಲಗರಗೆ ಸಿಗಲು ಖೂಬಾ ಕಾರಣ ಎನ್ನಲಾಗಿತ್ತು. ಆದರೆ ನಂತರ ಇಬ್ಬರ ನಡುವೆ ಅದೇಕೋ ಸಂಬಂಧ ಪೂರ್ಣ ಹಳಸಿದೆ. ಒಂದೇ ಪಕ್ಷದಲ್ಲಿದ್ದರೂ ಒಬ್ಬರಿಗೊಬ್ಬರು ಸರಿಯಾಗಿ ಮಾತನಾಡದಂಥ ಸ್ಥಿತಿಗೆ ಬಂದಿದ್ದಾರೆ. ಈ ವಿಷಯ ಕಲ್ಯಾಣ ಮಾತ್ರವಲ್ಲ, ಜಿಲ್ಲಾ ಬಿಜೆಪಿಯಲ್ಲಿ ಚಚರ್ೆಗೂ ಕಾರಣವಾಗಿದೆ. ಈ ಮನಸ್ತಾಪ ಇಂದು ನಡು ಬೀದಿಯಲ್ಲಿ ಕಿರಿಕಿರಿ ಮಾಡುವ ಮಟ್ಟಿಗೆ ಹೋಗಿರುವುದು ಶಿಸ್ತಿನ ಪಕ್ಷದೊಳಗಿನ ಅಶಿಸ್ತು ಹೊರಹಾಕಿದೆ. ಜಿಲ್ಲೆಯ ಇನ್ನೊಬ್ಬ ಬಿಜೆಪಿ ಶಾಸಕರಿರುವ ಔರಾದ್ ಕ್ಷೇತ್ರದಲ್ಲೂ ಸಚಿವ ಖೂಬಾ ಹಾಗೂ ಪ್ರಭು ಚವ್ಹಾಣ್ ನಡುವೆ ವ್ಯಾಪಕ ಮನಸ್ತಾಪ ಸೃಷ್ಟಿಯಾಗಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇದು ಯಾವ ತಿರುವು ಪಡೆಯಬಹುದೋ ತಿಳಿಯದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts