More

    ಕೆಲಸವಾಗದಿದ್ದರೆ ಪ್ರಕರಣ ದಾಖಲಿಸುವ ಎಚ್ಚರಿಕೆ

    ರಾಣೆಬೆನ್ನೂರ: ಎರೇಕುಪ್ಪಿ ಗ್ರಾಮದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುವುದನ್ನು ತಪ್ಪಿಸದಿದ್ದರೆ ತಹಸೀಲ್ದಾರ್, ತಾಪಂ ಇಒ, ಸರ್ವೆ ಅಧಿಕಾರಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರ್ ಮೇಲೆ ವಂಚನೆ ಪ್ರಕರಣ ದಾಖಲಿಸುವುದಾಗಿ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಎಚ್ಚರಿಸಿದರು.

    ನಗರದ ತಾಪಂ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸ್ವಲ್ಪ ಮಳೆ ಬಂದರೂ ನೀರು ಸಂಪೂರ್ಣ ಮನೆಗಳಿಗೆ ನುಗ್ಗುತ್ತಿದೆ. ರಸ್ತೆಗಳು ಜಲಾವ್ರತಗೊಳ್ಳುತ್ತಿವೆ. ಇಲ್ಲಿಯ ಸಮಸ್ಯೆ ಬಗೆಹರಿಸುವಂತೆ ಎರಡು ವರ್ಷದಿಂದ ಹೇಳುತ್ತಿದ್ದರೂ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಕ್ರಿಯಿಸಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿ ರಾಮಣ್ಣ, ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕಾದರೆ ಖಾಸಗಿಯವರ ಜಮೀನಿಗೆ ನೀರು ನುಗ್ಗುತ್ತದೆ. ಆ ರೀತಿ ಕೆಲಸ ಮಾಡಲು ಹೋದರೆ ಜಮೀನಿನ ಮಹಿಳೆ ನಮ್ಮನ್ನು ಹೊಡೆಯೋಕೆ ಬರುತ್ತಿದ್ದಾಳೆ ಎಂದರು. ಇದರಿಂದ ಸಿಟ್ಟಾದ ಶಾಸಕ ಬಳ್ಳಾರಿ, ‘ನಿಮ್ಮನ್ನು ಹೊಡೆಯೋಕೆ ಬಂದರೆ ಕೂಡಲೆ ಅವರ ಮೇಲೆ ಪೊಲೀಸ್ ಕೇಸ್ ದಾಖಲಿಸಿ. ತಹಸೀಲ್ದಾರ್, ತಾಪಂ ಇಒ, ಸರ್ವೆ ಅಧಿಕಾರಿಗಳು ಸೇರಿ ಹೊಗಿ, ನೈಸರ್ಗಿಕವಾಗಿ ನೀರು ಹೇಗೆ ಹರಿಯುತ್ತದೆಯೋ ಆ ರೀತಿ ದಾರಿ ಮಾಡಿಕೊಡಬೇಕು. ಮುಂದಿನ ಕೆಡಿಪಿ ಸಭೆಯೊಳಗೆ ಈ ಕೆಲಸ ಆಗದಿದ್ದರೆ, ನಿಮ್ಮ ಮೇಲೆಯೇ ದೂರು ದಾಖಲಿಸುತ್ತೇನೆ’ ಎಂದು ಎಚ್ಚರಿಸಿದರು.

    ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

    ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​ಗಳು ಕೆಲಸ ಮಾಡುವ ರೀತಿಯೇ ಅರ್ಥವಾಗುತ್ತಿಲ್ಲ. ರೋಗಿಗಳು ಬಂದು ಬಾಯಿ ಬಡಕೊಂಡರೂ ಅವರತ್ತ ತಿರುಗಿ ನೋಡುವುದಿಲ್ಲ. ವೈದ್ಯಾಧಿಕಾರಿಯಾಗಿ ಏನ್ ಮಾಡ್ತಾ ಇದ್ದೀರಿ ಎಂದು ಶಾಸಕ ಅರುಣಕುಮಾರ ಪೂಜಾರ, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗೋವಿಂದ ಅವರನ್ನು ತರಾಟೆಗೆ ತೆಗೆದುಕೊಂಡರು.

    ನಾನು ಆಸ್ಪತ್ರೆಗೆ ಭೇಟಿ ನೀಡಿದಾಗ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಲು ಹೇಳಿದ್ದೇನೆ. ಇನ್ನೊಂದು ಸಾರಿ ಭೇಟಿ ನೀಡಿದಾಗ ಎಲ್ಲವೂ ಸರಿ ಇರಬೇಕು. ಆಸ್ಪತ್ರೆಯ ಮೇಲ್ಮಹಡಿ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸದೇ ಗುತ್ತಿಗೆದಾರರಿಗೆ ಯಾವುದೇ ಬಿಲ್ ಪಾಸು ಮಾಡುವಂತಿಲ್ಲ ಎಂದು ಅರುಣಕುಮಾರ ತಾಕೀತು ಮಾಡಿದರು.

    ರೈತರಿಗೆ ಗೌರವ ಕೊಡಿ

    ಕಚೇರಿಗೆ ಬರುವ ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ, ಕೃಷಿ ಕಚೇರಿಯಲ್ಲಿ ರೈತರಿಗೆ ಮಾಹಿತಿ ಕೊಡುತ್ತಿಲ್ಲ ಎಂಬ ಆರೋಪವಿದೆ. ತಾಲೂಕಿನಲ್ಲಿ ಹಲವು ರೈತರಿಗೆ ಬಿಮೆ ಹಣ ಬರೋದಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ಸರಿಪಡಿಸಿ ಎಂದು ಕೃಷಿ ಸಹಾಯಕ ನಿರ್ದೇಶಕ ಎಂ.ಬಿ. ಗೌಡಪ್ಪಳ್ಳವರ ಅವರಿಗೆ ಶಾಸಕ ಅರುಣಕುಮಾರ ಸೂಚಿಸಿದರು.

    ಜಿಪಂ ಸದಸ್ಯರಾದ ಏಕನಾಥ ಭಾನುವಳ್ಳಿ, ಮಂಗಳಗೌರಿ ಪೂಜಾರ, ಮಾರುತಿ ರಾಠೋಡ, ತಾಪಂ ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ತಾಪಂ ಇಒ ಎಸ್.ಎಂ. ಕಾಂಬಳೆ, ತಹಸೀಲ್ದಾರ್ ಬಸವನಗೌಡ ಕೋಟೂರು, ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ, ಡಿವೈಎಸ್ಪಿ ಟಿ.ವಿ. ಸುರೇಶ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಕಳಪೆ ಕಾಮಗಾರಿ ರೂವಾರಿ…! : ಲಿಂಗದಹಳ್ಳಿ-ಹೊಳೇಆನ್ವೇರಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರ ಐ.ಡಿ. ಲಮಾಣಿ ಮಾಡುತ್ತಿದ್ದಾರೆ. ಇವರು ಕಳಪೆ ಕಾಮಗಾರಿಯ ರೂವಾರಿ. ಆದ್ದರಿಂದ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಬೇಕು. ನಂತರ ಬಿಲ್ ಪಾಸು ಮಾಡಬೇಕು. ಇದರಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ನಿಮ್ಮ ತಲೆಗೆ ಕಟ್ಟುತ್ತೇನೆ ಎಂದು ಶಾಸಕ ಅರುಣಕುಮಾರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿ ರಾಮಣ್ಣ ಅವರಿಗೆ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts