More

    ಕೆಲಸದಿಂದ ವಜಾ ಮಾಡಿದ್ದಕ್ಕೆ ಪಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನ

    ಮಂಗಳೂರು: ಸರ್ಕಾರಿ ಸಾಮ್ಯದ ನವಮಂಗಳೂರು ಬಂದರಿನಲ್ಲಿ ಖಾಸಗಿ ಒಡೆತನದ ಕಂಪನಿಯಲ್ಲಿ ಕಳೆದ ಆರು ವರ್ಷಗಳಿಂದ ಲಾರಿಗಳಿಗೆ ಟರ್ಪಾಲ್ ಅಳವಡಿಸುವ ಕೆಲಸ ಮಾಡಿಕೊಂಡು ಬಂದಿದ್ದ 42 ಕಾರ್ಮಿಕರನ್ನು ದಿಢೀರ್ ಪಾಸ್ ನೀಡದೆ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಬುಧವಾರ ಬೆಳಗ್ಗೆ ಕಾರ್ಮಿಕರು ಹಾಗೂ ಅವರ ಕುಟುಂಬ ಹಾಗೂ ಮಕ್ಕಳು ಬಂದರಿನ ಕೆ.ಕೆ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪ್ರತಿಭಟನಾ ನಿರತ ಕಾರ್ಮಿಕರು ಪಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

    ಬುಧವಾರ ಬೆಳಗ್ಗೆ ಕಾರ್ಮಿಕರು ಹಾಗೂ ಅವರ ಕುಟುಂಬ ಹಾಗೂ ಮಕ್ಕಳು ಬಂದರಿನ ಕೆ.ಕೆ ಗೇಟ್ ಮುಂಭಾಗ ಮೂರ‌್ನಾಲ್ಕು ತಾಸು ಪ್ರತಿಭಟನೆ ನಡೆಸಿದ್ದರೂ ಈ ಸಂಬಂಧಿತ ಕಂಪನಿಯ ಅಧಿಕಾರಿಗಳು ಬಾರದೇ ಇದ್ದಾಗ ಹತಾಶೆಗೊಂಡ ಇಬ್ಬರು ಕಾರ್ಮಿಕರು ಕುಟುಂಬದ ಎದುರೇ ಪಿನಾಯಿಲ್ ಸೇವಿಸಿದರು. ತಕ್ಷಣ ಮಾಜಿ ಮನಪಾ ಸದಸ್ಯ ರಘುವೀರ್ ಪಣಂಬೂರು, ಬಿಜೆಪಿ ಮುಖಂಡ ರಣ್‌ದೀಪ್ ಕಾಂಚನ್ ಮತ್ತಿತರರು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಸಹಕರಿಸಿದರು.

    ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡ ರಣ್‌ದೀಪ್ ಕಾಂಚನ್, ಕಳೆದ 6 ವರ್ಷಗಳಿಂದ ಕೆಲಸ ಮಾಡಿ ದಿನಕ್ಕೆ 500-600 ದುಡಿಯುವ ಕಾರ್ಮಿಕರನ್ನು ಏಕಾ ಏಕಿ ಕೆಲಸಕ್ಕೆ ಬೇಕಾದ ಪಾಸ್ ನೀಡದೆ ಬಂದರು ಒಳಗೆ ಹೋಗಲು ಬಿಡಲಿಲ್ಲ. ಇವರೆಲ್ಲಾ ಕನ್ನಡಿಗರಾಗಿದ್ದು ಇವರ ಬದಲಿಗೆ ದೂರದ ಹಿಂದಿ ಭಾಷಿಕರನ್ನು ಟರ್ಪಾಲ್ ಅಳವಡಿಸುವ ಕೆಲಸಕ್ಕೆ ಹಾಕಿದ್ದಾರೆ. ಇದು ಕರ್ನಾಟಕದ ಮಂದಿಗೆ ಮಾಡಿದ ಅನ್ಯಾಯವಾಗಿದೆ. ತತ್‌ಕ್ಷಣ ಮತ್ತೆ ಈ ಹಿಂದಿನ ಕಾರ್ಮಿಕರನ್ನು ನೇಮಿಸಿ ಅವರ ಕುಟುಂಬಕ್ಕೆ ಆಸರೆಕೊಡಬೇಕು. ಯಾವುದೇ ಮುನ್ಸೂಚನೆ ಇಲ್ಲದೆ ಕಾರ್ಮಿಕರನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts