More

    ಕೆರೆ ಸೇರುತ್ತಿದೆ ಊರಿನ ತ್ಯಾಜ್ಯ

    ಕಿಕ್ಕೇರಿ: ಪಟ್ಟಣದಲ್ಲಿರುವ ಗಂಗೇನಹಳ್ಳಿ ಕೆರೆಗೆ ತ್ಯಾಜ್ಯ ಸುರಿಯುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿದೆ.
    ಸುಮಾರು 25 ಎಕರೆ ವಿಸ್ತಾರದ ಕೆರೆ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದೆ. ಆದರೆ ಕೆರೆಗೆ ನಿತ್ಯ ರಾತ್ರಿ ವೇಳೆ ಪಟ್ಟಣದ ಅಂಗಡಿ ಮುಂಗಟ್ಟಿನವರು ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದಾರೆ. ಹಲವು ಬಡಾವಣೆಯವರು ತಮ್ಮ ಮನೆಯ ಹಳೆಯ ಬಟ್ಟೆ, ಪ್ಲಾಸ್ಟಿಕ್ ಪದಾರ್ಥಗಳನ್ನು ಹಾಕುತ್ತಿದ್ದಾರೆ. ಹಲವರು ದೇವರ ಪೂಜಾ ಸಾಮಗ್ರಿಗಳನ್ನು ಹಾಕುತ್ತಿದ್ದಾರೆ. ಖಾಸಗಿ ವೈದ್ಯಕೀಯ ಚಿಕಿತ್ಸಾಲಯಗಳು ತ್ಯಾಜ್ಯ, ಸಿರಿಂಜ್ ಹಾಕಿದರೆ, ಮದ್ಯಪ್ರಿಯರು ಕುಡಿದ ಬಾಟಲಿಗಳನ್ನು ಕೆರೆಗೆ ಹಾಕುವ ಪರಿಪಾಠ ಬೆಳೆಸಕೊಂಡಿದ್ದಾರೆ. ಹಳೆಯ ಮನೆಗಳ ನಿರುಪಯುಕ್ತ ಕಲ್ಲು, ಮಣ್ಣು, ಮರದ ಸಾಮಗ್ರಿಗಳನ್ನು ಕೆರೆಗೆ ಸುರಿಯಲಾಗುತ್ತಿದೆ.
    ಕೆರೆಯ ಸುತ್ತ ಅನೈರ್ಮಲ್ಯ ತಾಂಡವವಾಡುತ್ತಿದ್ದು, ತ್ಯಾಜ್ಯ ಕೊಳೆತು ಗಬ್ಬುನಾರುತ್ತಿದೆ. ಗಾಳಿ ಬಂದಾಗ ಅಸಹ್ಯಕರ ವಾಸನೆ ಪರಿಸರದಲ್ಲಿ ವ್ಯಾಪಿಸುತ್ತಿದ್ದು, ಕೆರೆ ಆಸುಪಾಸಿನ ನಿವಾಸಿಗಳಿಗೆ ತೊಂದರೆಯಾಗಿದೆ. ಕೊಳೆತ ತ್ಯಾಜ್ಯದಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕೆರೆ ಪಕ್ಕದಲ್ಲಿಯೇ ಶಾಲೆ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ. ರಾತ್ರಿ ವೇಳೆ ಸೊಳ್ಳೆ ಪರದೆ ಇಲ್ಲದೆ ಮಲಗಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
    ಸದ್ಯ ಕೆರೆಯಲ್ಲಿ ಹೂಳು ತುಂಬಿಕೊಂಡು ಕ್ರಿಕೆಟ್ ಮೈದಾನದಂತೆ ಆಗಿದೆ. ಬೇಸಿಗೆಯ ಕಾರಣ ಕೆರೆ ಒಣಗಿದ್ದು, ವಾರದಿಂದ ಅಲ್ಪಸ್ವಲ್ಪ ಮಳೆ ಸುರಿದ ಕಾರಣ ಗುಂಡಿಗಳಲ್ಲಿ ನೀರು ತುಂಬಿದೆ.

    ಇಡೀ ಊರಿನ ತ್ಯಾಜ್ಯ ಕೆರೆಗೆ ಎನ್ನುವಂತಾಗಿದೆ. ಪರಿಣಾಮ ಕೆರೆ ಸುತ್ತಲಿನ ಪರಿಸರ ಅಶುಚಿತ್ವಗೊಂಡಿದ್ದು, ತ್ಯಾಜ್ಯ ಕೊಳೆತು ಗಬ್ಬು ನಾರುತ್ತಿದೆ. ಕೆರೆ ಆಸುಪಾಸಿನ ನಿವಾಸಿಗಳು ಸೊಳ್ಳೆಗಳ ಕಾಟ ಅನುಭವಿಸುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷೃದಿಂದ ಕೆರೆ ಮಲಿನವಾಗುತ್ತಿದೆ.
    ಚಂದ್ರಶೇಖರ್, ಗ್ರಾಮಸ್ಥ.

    ಕೆರೆಗೆ ರಾತ್ರಿ ವೇಳೆ ಹಲವರು ತ್ಯಾಜ್ಯ ಹಾಕಿ ಮಾಲಿನ್ಯ ಮಾಡುತ್ತಿರುವುದು ತಿಳಿದುಬಂದಿದೆ. ಇಂತಹವರ ಮೇಲೆ ಕಾನೂನು ಕ್ರಮ ಜರುಗಿಸುವ ಮೊದಲು ಸಾರ್ವಜನಿಕರು ಕೆರೆಗೆ ತ್ಯಾಜ್ಯ ಸುರಿಯದಂತೆ ಕ್ರಮವಹಿಸಲಾಗುವುದು.
    ಗುರುಪ್ರಸಾದ್, ಎಇಇ ಕಾವೇರಿ ನೀರಾವರಿ ನಿಗಮ

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts