More

    ಕೆರೆ ಒಡಲಿನಲ್ಲಿ ನೀರಿನ ಹೊನಲು, ಕೋಡಿ ಹರಿಯುತ್ತಿರುವ ಜಲರಾಶಿ, ಬರಡಾದ ನೆಲಕ್ಕೆ ವರ್ಷಧಾರೆಯ ಹರ್ಷ

    ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಹತ್ತಾರು ವರ್ಷದಿಂದ ಖಾಲಿಯಿದ್ದ ಬಹುತೇಲ ಕೆರೆಗಳು ಕೋಡಿ ಹರಿದಿವೆ. ಮಳೆ ಹೀಗೆ ಮುಂದುವರಿದರೆ ಮತ್ತಷ್ಟು ಕೆರೆಗಳ ಒಡಲು ತುಂಬಲಿದೆ.

    ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ತೂಬಗೆರೆಯ ಮೇಳೆಕೋಟೆ, ಗುಂಡಮನಗೆರೆ ಕೆರೆಗಳು ಕೋಡಿ ಹರಿದಿವೆ. ಘಾಟಿಕೆರೆ, ನಾಗರಕೆರೆ, ಕೂಸಮ್ಮನಕೆರೆ, ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂ ಕಣ್ಮನ ಸೆಳೆಯುತ್ತಿದೆ. ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ವಿಶ್ವನಾಥಪುರ ಕೆರೆ ದಶಕದ ಬಳಿಕ ಕೋಡಿ ಬಿದ್ದಿದೆ. ಬೀರಸಂದ್ರ ಕೆರೆಯೂ 15 ವರ್ಷದ ಬಳಿಕ ತುಂಬಿದೆ. ನೆಲಮಂಗಲ ಹಾಗೂ ಹೊಸಕೋಟೆಯ ಬಹಳಷ್ಟು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಸೋಂಪುರ ಹೋಬಳಿಯ ಹಳೇ ನಿಜಗಲ್ ಕೆರೆ ಹಾಗೂ ದೇವರಹೊಸಹಳ್ಳಿ ಕೆರೆಗಳು ಕೋಡಿ ಹರಿದಿವೆ.

    ಬತ್ತಿದ್ದ ಕೆರೆಯಲ್ಲಿ ಜೀವಜಲ: ದೊಡ್ಡಬಳ್ಳಾಪುರ ತಾಲೂಕು ಚಿಕ್ಕಮಧುರೆಯ ಕೆರೆ ನಾಲ್ಕೈದು ವರ್ಷದಿಂದ ಸಂಪೂರ್ಣ ಬತ್ತಿತ್ತು. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಹಿತಿಯಂತೆ ಅಕ್ಟೋಬರ್‌ನಲ್ಲಿ ಸುರಿದ ಮಳೆಗೆ ಈ ಕೆರೆಯ ಒಡಲು ಅರ್ಧ ಭಾಗದಷ್ಟು ಭರ್ತಿಯಾಗಿದೆ. ಇದರಿಂದ ಈಗಾಗಲೇ ಕೆರೆಯ ಸುತ್ತಮುತ್ತಲ ಕೊಳವೆಬಾವಿಗಳಲ್ಲಿ ಅಂತರ್ಜಲ ಮರುಪೂರಣವಾಗಿದ್ದು ಉತ್ತಮ ನೀರು ದೊರೆಯುತ್ತಿದೆ ಎನ್ನಲಾಗಿದೆ.

    ಪಕ್ಷಿಗಳ ಕಲವರ: ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿದ್ದಂತೆ ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷಿಗಳ ಕಲವರ ಮಾರ್ಧನಿಸುತ್ತಿದೆ. ಕೆರೆಗಳಿಂದ ಹರಿದ ನೀರು ಕೆಲವೊಂದು ಗದ್ದೆಗಳಲ್ಲಿ ಸಂಗ್ರಹವಾಗಿದ್ದು, ಕೊಕ್ಕರೆ ಸೇರಿ ಇನ್ನಿತರ ಪಕ್ಷಿಗಳು ಹುಳುಹುಪ್ಪಟೆಗಳ ಭಕ್ಷಣೆಗೆ ದಾಂಗುಡಿ ಇಡುತ್ತಿವೆ, ನೆಲಮಂಗಲ ತಾಲೂಕು ಕುಲುವನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬಿಲ್ಲಿನಕೋಟೆ ಗದ್ದೆಭಾಗ ನೀರಿನಿಂದ ಆವರಿಸಿದ್ದು, ಕೊಕ್ಕರೆಗಳ ನಡಿಗೆ ಜನರನ್ನು ಅಕರ್ಷಣೀಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts