More

    ಕೆರೆಗೆ ನೀರು ತುಂಬಿಸಲು ಅನುದಾನ

    ಸಂಬರಗಿ/ಕಾಗವಾಡ, ಬೆಳಗಾವಿ: ಮತಕ್ಷೇತ್ರದ ಬರ ಪೀಡಿತ ಪ್ರದೇಶ ಅಭಿವೃದ್ಧಿಗಾಗಿ 23 ಕೆರೆಗಳಿಗೆ ನೀರು ತುಂಬಿಸಲು 230 ಕೋಟಿ ರೂ. ಅನುದಾನ ಬಿಡುಗಡೆಗೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

    ಅನುದಾನ ಬಿಡುಗಡೆ ಹಿನ್ನೆಲೆಯಲ್ಲಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಕಾಗವಾಡ ಕ್ಷೇತ್ರದ ಶೇ.80 ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದವು. ಈ ಸಮಸ್ಯೆಗೆ ಪರಿಹಾರ ನೀಡುವಂತೆ ರೈತರು 20 ವರ್ಷಗಳಿಂದ ಕೆರೆ ತುಂಬಿಸುವ ಯೋಜನೆಗೆ ಬೇಡಿಕೆ ಇಟ್ಟಿದ್ದರು. ನಿರಂತರವಾಗಿ ಸಮಸ್ಯೆ ಕುರಿತು ಮುಖ್ಯಮಂತ್ರಿ ಬೊಮ್ಮಯಿ ಅವರ ಮೇಲೆ ಒತ್ತಡ ಹೇರಲಾಗಿತ್ತು. ಪರಿಣಾಮ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 23 ಕೆರೆ ತುಂಬಿಸಲು 230 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.

    ಕೆರೆ ತುಂಬಿಸುವ ಯೋಜನೆ ಜತೆಗೆ ಈಗಾಗಲೇ ಮುಕ್ತಾಯದ ಹಂತದಲ್ಲಿರುವ ಖಿಳೇಗಾಂವ ಬಸವೇಶ್ವರ ಏತನೀರಾವರಿ ಯೋಜನೆ ಪೂರ್ಣಗೊಳ್ಳಲು ಬೇಕಾದ ಅಗತ್ಯ ಅನುದಾನ ಬಿಡುಗಡೆಗೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದು, ಡಿಸೆಂಬರ್ ಅಂತ್ಯದೊಳಗಾಗಿ ಈ ಯೋಜನೆ ಮುಕ್ತಾಯಗೊಳ್ಳಲಿದೆ. ಡಿಸೆಂಬರ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಾಗವಾಡ ಕ್ಷೇತ್ರಕ್ಕೆ ಭೇಟಿ ನೀಡಿ, ಕೆರೆ ತುಂಬಿಸುವ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದರು.

    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶೀತಲ್ ಪಾಟೀಲ ಮಾತನಾಡಿ, ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಹಾಗೂ ಬರಪೀಡಿತ ಪ್ರದೇಶಕ್ಕೆ ನೀರಾವರಿ ಒದಗಿಸುವ 23 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಗೊಳ್ಳುವಲ್ಲಿ ಶಾಸಕ ಶ್ರೀಮಂತ ಪಾಟೀಲ ಶ್ರಮ ದೊಡ್ಡದು. ಅಲ್ಲದೆ ಸರ್ಕಾರಿ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಅನಂತಪುರ ಬಿಜೆಪಿ ಮುಖಂಡ ರಾಜೇಂದ್ರ ದಾದಾ ಶಿಂಧೆ ಮಾತನಾಡಿ, ಖಿಳೇಗಾಂವ ಬಸವೇಶ್ವರ ನೀರಾವರಿ ಹಾಗೂ 23 ಕೆರೆಗಳನ್ನು ತುಂಬಿಸುವ ಯೋಜನೆಯಿಂದ ಬರ ಪೀಡಿತ ಅನಂತಪುರ, ಮದಭಾವಿ, ಮಂಗಸೂಳಿ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ ಎಂದರು. ಐನಾಪುರ ಬಿಜೆಪಿ ಮುಖಂಡ ರಾಜೇಂದ್ರ ಪೋದ್ದಾರ ಮಾತನಾಡಿ, ಈ ಯೋಜನೆಯ ಅನುಷ್ಠಾನದಿಂದ ಕ್ಷೇತ್ರದ ಕೆಲವು ಗ್ರಾಮಗಳು ಅಭಿವೃದ್ಧಿ ಹೊಂದಲಿವೆ ಎಂದು ಹೇಳಿದರು. ಬಿಜೆಪಿ ಧುರೀಣ ದಾದಾ ಪಾಟೀಲ, ತಮ್ಮಣ್ಣ ಪಾರಶೆಟ್ಟಿ ಮಾತನಾಡಿದರು.

    ಅನಂತಪುರ ಗ್ರಾಪಂ ಅಧ್ಯಕ್ಷ ಕುಮಾರ ಹಬಗೊಂಡೆ, ಖಿಳೇಗಾಂವ ಗ್ರಾಪಂ ಅಧ್ಯಕ್ಷ ರವಿ ನಾಗೊಳ, ಮಲಾಬಾದ ಗ್ರಾಪಂ ಅಧ್ಯಕ್ಷ ಬೀರಪ್ಪ ಉಗಾರೆ, ಧರೆಪ್ಪ ಹೊನ್ನಾಗೋಳ, ಸುನೀಲ ಚೌಗಲೆ, ಸಂಭಾಜಿ ವೀರ, ಅಬಾ ಚವ್ಹಾಣ, ರಾಜು ಚವ್ಹಾಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts