More

    ಕೆರೆಗಳ ಅಭಿವೃದ್ಧ್ಧಿಗೆ ಸಂಘ-ಸಂಸ್ಥೆಗಳು ನೆರವಾಗಬೇಕು, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಮನವಿ, ಬಿಂಗೀಪುರ ಕೆರೆ ಉದ್ಘಾಟನೆ

    ಆನೇಕಲ್: ಸಂಘ-ಸಂಸ್ಥೆಗಳು ಕೆರೆಗಳ ಅಭಿವೃದ್ಧಿಗೆ ಕೈಜೋಡಿಸಿದರೆ ಅವನತಿಯತ್ತ ಸಾಗಿದ ಕೆರೆಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

    ಎಸ್. ಬಿಂಗಿಪುರದಲ್ಲಿ ಅಲರ್ಗನ್ ಮತ್ತು ಗ್ರೀನ್ ಯಾತ್ರಾ ಅಭಿವೃದ್ಧಿಪಡಿಸಿರುವ ಬಿಂಗೀಪುರ ಕೆರೆ ಉದ್ಘಾಟಿಸಿ ಮಾತನಾಡಿದರು.
    ಕೆರೆಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ. ಕೆರೆಗಳ ಸಂರಕ್ಷಣೆ ಜತೆಗೆ ಕೆರೆಯ ಬರ್ ಜೋನ್ ಗುರುತಿಸಲಾಗುತ್ತಿದೆ. ಅಲ್ಲಿ ಒತ್ತುವರಿ ಮಾಡಿದ್ದರೆ ತೆರವುಗೊಳಿಸಲಾಗುವುದು ಎಂದು ವಿವರಿಸಿದರು.

    ಜಿಲ್ಲಾಡಳಿತದ ಜತೆಗೆ ಕೈಗಾರಿಕೆಗಳು, ಸ್ವಯಂ ಸೇವಾ ಸಂಘಗಳು, ಪರಿಸರ ಪ್ರೇಮಿಗಳು, ಎನ್ನೆಸ್ಸೆಸ್ ಸೇರಿ ಸಮುದಾಯದ ಸಹಕಾರದೊಂದಿಗೆ ಕೆರೆಗಳ ಪುನರುತ್ಥಾನಕ್ಕೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

    ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ಜಿಗಣಿ ಹೋಬಳಿಯ ಕಲ್ಲುಬಾಳು, ಹರಪನಹಳ್ಳಿ, ಕೋನಸಂದ್ರ, ದ್ಯಾವಸಂದ್ರ, ವಡೇರಮಂಚನಹಳ್ಳಿ ಸೇರಿ ಹಲವು ಗ್ರಾಮಗಳ ಕೆರೆಗಳನ್ನು ಸಿಎಸ್‌ಆರ್ ನಿಧಿಯಡಿ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಲ್ಲ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೈಗಾರಿಕೆಗೊಂದು ಕೆರೆಯನ್ನು ದತ್ತು ನೀಡಲು ಚಿಂತನೆ ನಡೆಸಲಾಗಿದೆ ಎಂದರು.

    ಕೆರೆ ಸಂರಕ್ಷಣೆಯ ರೂವಾರಿ ಆನಂದ್ ಮಲ್ಲಿಗ್ವಾಡ್ ಮಾತನಾಡಿ, ವಿವಿಧ ಸಂಸ್ಥೆಗಳ ಸಹಕಾರದಿಂದ 14 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 2025ರ ವೇಳೆಗೆ 45 ಕೆರೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲು ಕೈಜೋಡಿಸುವಂತೆ ಕಂಪನಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

    ಜಿಪಂ ಸದಸ್ಯ ವೆಂಕಟೇಶ್‌ಗೌಡ, ಗ್ರಾಪಂ ಅಧ್ಯಕ್ಷ ಸಯ್ಯದ್ ಸಾಧಿಕ್, ಉಪಾಧ್ಯಕ್ಷೆ ರಮ್ಯಾ, ಪಿಡಿಒ ಕೃಷ್ಣಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ರಾಜಶೇಖರರೆಡ್ಡಿ, ಅಲರ್ಗನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್, ಸಿಎಸ್‌ಆರ್ ಮುಖ್ಯಸ್ಥೆ ಕೃಪಾ, ಗ್ರೀನ್ ಯಾತ್ರಾ ಸಂಸ್ಥೆಯ ಸಹ ಸಂಸ್ಥಾಪಕ ದುರ್ಗೇಶ್ ಮತ್ತಿತರರಿದ್ದರು.

    72 ದಿನದಲ್ಲಿ ಕೆರೆ ಅಭಿವೃದ್ಧಿ:  ಬಿಂಗಿಪುರ ಕೆರೆ 28 ಎಕರೆ ಇದೆ. ಕೆರೆಯ ಪಕ್ಕದಲ್ಲಿ ಬಿಬಿಎಂಪಿ ಹಲವು ವರ್ಷಗಳಿಂದ ಕಸ ಹಾಕುತ್ತಿದ್ದು, ಡಂಪಿಂಗ್ ಯಾರ್ಡ್‌ನಂತೆ ಆಗಿತ್ತು. ಇದು ಕೆರೆಯ ಸ್ವರೂಪವನ್ನು ಕುರೂಪಗೊಳಿಸಿತ್ತು. ಸುತ್ತ ದುರ್ವಾಸನೆ ಹಬ್ಬಿದ್ದರಿಂದ, ಹತ್ತಿರ ಕೂಡ ಹೋಗಲಾಗದ ಸ್ಥಿತಿ ಇತ್ತು. ಇಂಥ ಸ್ಥಿತಿಯಲ್ಲಿದ್ದ ಕೆರೆಯನ್ನು ಯಾವುದೇ ಕಲ್ಲು, ಸಿಮೆಂಟ್ ಬಳಸದೆ 72 ದಿನಗಳಲ್ಲಿ ಪ್ರಾಕೃತಿಕವಾಗಿ ಅಭಿವೃದ್ಧಿಪಡಿಸಲಾಗಿದೆ.

    ಗಮನಸೆಳೆದಿದ್ದ ವಿಜಯವಾಣಿ: ಬಿಂಗಿಪುರ ಕೆರೆಯ ನೀರು ಕಲುಷಿತಗೊಂಡು, ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪುತ್ತಿರುವ ಬಗ್ಗೆ ಹಾಗೂ ಕೆರೆಯಲ್ಲಿ ನೀರು ರಾಸಾಯನಿಕ ತ್ಯಾಜ್ಯ ಮಿಶ್ರಣವಾಗಿ ನಾನಾ ಬಗೆಯ ರೋಗ-ರುಜಿನ ಹರಡುತ್ತಿರುವ ಬಗ್ಗೆ ಹಲವು ವರದಿಗಳನ್ನು ಪ್ರಕಟಿಸಿ ವಿಜಯವಾಣಿ ಗಮನಸೆಳೆದಿತ್ತು. ಇದರಿಂದ ಎಚ್ಚೆತ್ತುಕೊಂಡ ಜನರು ಕೆರೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಕೆರೆಯ ಸುತ್ತ ಮಿಯಾವಾಕಿ ಅರಣ್ಯೀಕರಣ ಪದ್ಧತಿಯಲ್ಲಿ ಮೂರು ಸಾವಿರ ಗಿಡಗಳನ್ನು ನೆಡಲಾಗಿದೆ, ಸ್ಥಳೀಯ ಹಣ್ಣುಹಂಪಲು ಗಿಡಗಳ ಜತೆಗೆ ಆಯುರ್ವೇದೀಯ ಗಿಡಗಳನ್ನು ಬೆಳೆಸಲಾಗಿದೆ.

    ಕೊಳಚೆನೀರು ನೈಸರ್ಗಿಕವಾಗಿ ಸ್ವಚ್ಛ: ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ಮಾನವ ಹಸ್ತಕ್ಷೇಪಕ್ಕೂ ಅವಕಾಶ ಇಲ್ಲದಂತೆ ಕೆರೆಗೆ ಹರಿಯುವ ಕೊಳಚೆನೀರು ನೈಸರ್ಗಿಕವಾಗಿ ಸ್ವಚ್ಛಗೊಳ್ಳುವ ವ್ಯವಸ್ಥೆ ಏರ್ಪಡಿಸಲಾಗಿದೆ. ಕೆರೆಗೆ ಹರಿದುಬರುವ ತ್ಯಾಜ್ಯ ನೀರನ್ನು ಒಂದೆಡೆ ಶೇಖರಿಸಿ, ಕಲ್ಮಶಗಳು ಬೇರ್ಪಟ್ಟ ನಂತರ ಆ ನೀರನ್ನು ಕೆರೆಗೆ ಹರಿಸಲಾಗುತ್ತದೆ.

    ಒಂದೆಡೆ ಕೆರೆಗಳ ಒತ್ತುವರಿ ತೆರವು ಮಾಡುತ್ತಿದ್ದು, ಇನ್ನೊಂದೆಡೆ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ಪೀಳಿಗೆಗೆ ಕೆರೆಗಳನ್ನು ಉಳಿಸಿಕೊಡುವುದು ಆದ್ಯತೆ ಆಗಬೇಕು.
    ಪಿ.ದಿನೇಶ್, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts