More

    ಕೆಜಿಎಫ್ ಎಸ್ಪಿ ಕಚೇರಿ ಸ್ಥಳಾಂತರ ವಿಚಾರದಲ್ಲಿ ಗೊಂದಲ!

    ಕೋಲಾರ: ನನಗಿರುವ ಮಾಹಿತಿ ಪ್ರಕಾರ ಕೆಜಿಎಫ್ ಎಸ್ಪಿ ಕಚೇರಿಯನ್ನು ವಿಜಯನಗರಕ್ಕೆ ಸ್ಥಳಾಂತರಿಸಲಾಗಿದೆ. ಆದೇಶದಲ್ಲಿ ಮಾರ್ಪಾಡಾಗಿದ್ದರೆ ಅದಕ್ಕೆ ಸಹಮತವಿದೆ, ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಕೆಜಿಎಫ್‌ಗೆ ಪ್ರತ್ಯೇಕ ಎಸ್ಪಿ ಕಚೇರಿ ಅವಶ್ಯಕತೆಯಿತ್ತು. ಈಗ ಅವಶ್ಯಕತೆ ಇಲ್ಲವಾದ್ದರಿಂದ ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸಲಾಗುತ್ತಿದೆ. ಕೋಲಾರ ಎಸ್ಪಿಗೆ ಕೆಜಿಎಫ್, ಬಂಗಾರಪೇಟೆ ತಾಲೂಕು ಹೆಚ್ಚುವರಿಯಾದರೆ ಕಷ್ಟ ಆಗಲ್ಲ. ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವುದಿಲ್ಲ ಎಂದು ಸ್ಥಳಾಂತರಕ್ಕೆ ಸಹಮತ ಸೂಚಿಸಿದ್ದೇನೆ ಎಂದರು.

    ಯಾವುದೇ ಕಾರಣಕ್ಕೂ ಎಸ್ಪಿ ಕಚೇರಿ ಸ್ಥಳಾಂತರ ಮಾಡುತ್ತಿಲ್ಲ, ಈ ಬಗ್ಗೆ ಸಿಎಂ, ಗೃಹಸಚಿವ, ಎಡಿಜಿಪಿ ಜತೆ ಚರ್ಚಿಸಲಾಗಿದೆ. ಕೆಜಿಎಫ್ ಹೊರತುಪಡಿಸಿ ವಿಜಯನಗರಕ್ಕೆ ಹುದ್ದೆಗಳನ್ನು ವರ್ಗಾಯಿಸಿದ್ದಾರೆ. ಉಸ್ತುವಾರಿ ಸಚಿವರು ಚುನಾವಣೆ ಪ್ರಚಾರದಲ್ಲಿದ್ದರಿಂದ ಮಾಹಿತಿ ಇಲ್ಲ, ಅವರಿಗೆ ಈ ಮಾಹಿತಿ ನೀಡಲಾಗುವುದು ಎಂದು ಸಂಸದ ಎಸ್. ಮುನಿಸ್ವಾಮಿ ಗಾಂಧಿವನದಲ್ಲಿ ಪ್ರತಿಕ್ರಿಯಿಸಿದರು.

    ಕೆಜಿಎಫ್‌ನಲ್ಲಿ 3150 ಎಕರೆ ಕೈಗಾರಿಕೆ ಪ್ರದೇಶವಾಗಿ ಅಭಿವೃದ್ಧಿ ಹೊಂದಲಿದೆ. ಚಿನ್ನದ ಗಣಿ ಪುನರಾರಂಭ ಆಗಲಿರುವುದರಿಂದ ಎಸ್ಪಿ ಕಚೇರಿ ಅವಶ್ಯಕತೆ ಇದೆ. ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗುವುದು. ಗಣಿ ಪ್ರದೇಶ ಒತ್ತುವರಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಮತ್ತು ಗಣಿ ಸಚಿವರಿಗೆ ಮನವಿ ಸಲ್ಲಿಸಿದ ಮೇರೆಗೆ 71 ಭದ್ರತಾ ಸಿಬ್ಬಂದಿಯನ್ನು ಹೊಸದಾಗಿ ಆಯ್ಕೆ ಮಾಡಲಾಗಿದೆ ಎಂದರು.

    ಸಚಿವರ ಸ್ಪಷ್ಟನೆ: ದ್ವಂದ್ವ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಮುನಿರತ್ನ, ಕೆಜಿಎಫ್ ಎಸ್ಪಿ ಕಚೇರಿ ವಿಜಯನಗರಕ್ಕೆ ಸ್ಥಳಾಂತರಿಸಿ ಆ.19ರಂದು ಆದೇಶಿಸಿತ್ತು. ಕಚೇರಿ ಸ್ಥಳಾಂತರ ಮಾರ್ಪಾಡಾಗಿರುವ ಬಗ್ಗೆ ಸಂಸದರು ಹೇಳುತ್ತಿದ್ದಾರೆ. ಉಪಚುನಾವಣೆ ಮುಂಚೆ ಇದ್ದ ಆದೇಶದಲ್ಲಿ ಬದಲಾವಣೆಯಾಗಿದ್ದರೆ ಅದನ್ನು ಒಪ್ಪಲೇಬೇಕು. ನಮ್ಮೊಳಗೆ ಗೊಂದಲದ ಹೇಳಿಕೆ ಇರಬಾರದು, ಹಾಗಾಗಿ ಬೆಂಗಳೂರಿಗೆ ಹೋದ ತಕ್ಷಣವೇ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ ಎಂದರು.

    ತನಿಖೆ ಆಗದಿದ್ದರೆ ದ್ರೋಹ: ಕೋಲಾರ ಡಿಸಿಸಿ ಬ್ಯಾಂಕ್‌ನಲ್ಲಿ ಹಗರಣ ನಡೆದಿರುವ ಬಗ್ಗೆ ಸಚಿವ ಸುಧಾಕರ್ ಆರೋಪಕ್ಕೆ ಧ್ವನಿಗೂಡಿಸಿದ ಉಸ್ತುವಾರಿ ಸಚಿವ ಮುನಿರತ್ನ, ತನಿಖೆ ಆಗಲಿಲ್ಲ ಎಂದರೆ ಅದಕ್ಕಿಂತ ದ್ರೋಹ ಇನ್ನೊಂದಿಲ್ಲ. ನನಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಸತ್ತವರ ಹೆಸರಿನಲ್ಲಿ ಯಾರ‌್ಯಾರು ಸಾಲ ಪಡೆದು ವಂಚಿಸಿದ್ದಾರೆಂದು ತನಿಖೆಯಿಂದ ಗೊತ್ತಾಗುತ್ತದೆ. ಈ ವಿಚಾರದಲ್ಲಿ ಯಾರೇ ಆಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts