More

    ಕೆಂಜಿಗೆ ಕಾಡಲ್ಲಿ ಆನೆ ದಾಳಿಗೆ ರೈತ ಸಾವು

    ಮೂಡಿಗೆರೆ: ಕಾಡಿಗೆ ಮೇಯಲು ಹೋಗಿದ್ದ ಜಾನುವಾರುಗಳನ್ನು ಭಾನುವಾರ ಮಧ್ಯಾಹ್ನ ಹುಡುಕಿಕೊಂಡು ಹೋದ ಕೆಂಜಿಗೆ ಗ್ರಾಮದ ಹಾಗೋಡು ನಿವಾಸಿ ಆನಂದ ದೇವಾಡಿಗ(52) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.</p><p>ರಾತ್ರಿಯಾದರೂ ಮನೆಗೆ ಹಿಂದಿರುಗದ ಆನಂದ ದೇವಾಡಿಗ ಅವರನ್ನು ಪತ್ನಿ ಪ್ರೇಮಾ ಮತ್ತು ಪುತ್ರ ಅನ್ವಿತ್ ಹುಡುಕಿಕೊಂಡು ಹೋದಾಗ ಸೋಮವಾರ ಬೆಳಗ್ಗೆ ಕಾಡಿನ ಮಧ್ಯೆ ಅಪ್ಪಚ್ಚಿಯಾಗಿದ್ದ ಆನಂದ ಅವರ ಶವ ಪತ್ತೆಯಾಗಿದೆ.

    ಇವರನ್ನು ಕಾಡಾನೆ ಸುಮಾರು ಅರ್ಧ ಕಿಮೀ ದೂರಕ್ಕೆ ಎಳೆದೊಯ್ದಿರುವುದು ಹೆಜ್ಜೆಯ ಗುರುತು ಮತ್ತು ಶರೀರವನ್ನು ಚಿಂದಿ ಮಾಡಿದ ಕುರುಹುಗಳು ದಾರಿಯುದ್ದಕ್ಕೂ ಪತ್ತೆಯಾಗಿವೆ. ಒಂಟಿ ಸಲಗ 20 ವರ್ಷದಿಂದ ಕೆಂಜಿಗೆ ಬಿದರಹಳ್ಳಿ, ತತ್ಕೊಳ, ಕುಂದೂರು, ತಳವಾರ, ಹುಲ್ಲೆಮನೆ, ಸಾರಗೋಡು, ಕುಂದೂರು ಭಾಗದಲ್ಲಿ ಸಂಚರಿಸುತ್ತ ರೈತರ ನಿದ್ದೆಗೆಡಿಸಿದೆ.

    ಕಳೆದ ವರ್ಷ ಆ.16ರಂದು ಕುಂದೂರು ರಸ್ತೆಯಲ್ಲಿ ಚಲಿಸುತ್ತಿದ್ದ ಮಾರುತಿ ಒಮ್ನಿ ಮೇಲೆ ದಾಳಿ ನಡೆಸಿ ವ್ಯಾನನ್ನು ಮಗುಚಿಹಾಕಿತ್ತು. ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದರು. ಈ ಒಂಟಿ ಸಲಗ ಮಾತ್ರವಲ್ಲದೆ, ಒಟ್ಟು ಐದು ಆನೆಗಳು ಇದೇ ಪರಿಸರದಲ್ಲಿ ಓಡಾಡುತ್ತ ಬೆಳೆ ಹಾನಿ ಮಾಡುತ್ತಿವೆ. ಗ್ರಾಮಸ್ಥರು ಸಂಜೆಯ ನಂತರ ಓಡಾಡಲು ಭಯಪಡುತ್ತಿದ್ದಾರೆ.

    25 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯ: ಆನೆ ದಾಳಿಯಿಂದ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ನೂರಾರು ಗ್ರಾಮಸ್ಥರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಾಡಾನೆಯನ್ನು ಸ್ಥಳಾಂತರಿಸಬೇಕು. ಮೃತ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಪುತ್ರನಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡಬೇಕು. ಬೇಡಿಕೆ ಈಡೇರಿಸದಿದ್ದರೆ ಶವ ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು.

    ಶಾಸಕ ಎಂ.ಪಿ.ಕುಮಾರಸ್ವಾಮಿ, ಎಂಎಲ್​ಸಿ ಎಂ.ಕೆ.ಪ್ರಾಣೇಶ್, ಡಿಎಫ್​ಒ ಪ್ರಭಾಕರ್, ಎಸಿಎಫ್ ರಾಜೇಶ್ ನಾಯಕ್, ಆರ್​ಎಫ್​ಒ ಮೋಹನ್​ಕುಮಾರ್, ತಹಸೀಲ್ದಾರ್ ನಾಗರಾಜ್, ಪೊಲೀಸರು ಧಾವಿಸಿ ಬಂದು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಸ್ಥಳದಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ದೂರವಾಣಿ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ನಂತರ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಅರಣ್ಯ ಇಲಾಖೆಯ ಬೆಂಗಳೂರಿನ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಕಾಡಾನೆ ಸ್ಥಳಾಂತರಿಸುವಂತೆ, ಮೃತ ವ್ಯಕ್ತಿಯ ಪುತ್ರನಿಗೆ ಉದ್ಯೋಗ ನೀಡುವಂತೆ ಸೂಚಿಸಿದರು.

    ಡಿಸಿಎಫ್ ಪ್ರಭಾಕರ್ ಮಾತನಾಡಿ, ಮೃತ ವ್ಯಕ್ತಿಯ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ. ಅಂತ್ಯಕ್ರಿಯೆಗೂ ಮುಂಚಿತವಾಗಿ 2 ಲಕ್ಷ ರೂ. ಮೊತ್ತದ ಚೆಕ್ ಮತ್ತು ಒಂದು ವಾರದ ಬಳಿಕ 5.5 ಲಕ್ಷ ರೂ. ಚೆಕ್ ನೀಡಲಾಗುವುದು. ಸರ್ಕಾರದಿಂದ ಅನುಮತಿ ಪಡೆದು ಕಾಡಾನೆ ಹಿಡಿದು ಸಾಗಿಸುವುದಾಗಿ ಭರವಸೆ ನೀಡಿದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts