More

    ಕೃಷಿ ಹೊಂಡ ನಿರ್ಮಾಣದಲ್ಲಿ ಅಕ್ರಮ ಆರೋಪ

    ಶಿಗ್ಗಾಂವಿ: ತಾಲೂಕಿನ ಅತ್ತಿಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ 184 ಕೃಷಿ ಹೊಂಡಗಳಿಗೆ ಲಕ್ಷಾಂತರ ರೂ. ಖರ್ಚು ಹಾಕಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ತಾ.ಪಂ. ಸದಸ್ಯ ಶ್ರೀಕಾಂತ ಪೂಜಾರ ಆರೋಪಿಸಿದರು.

    ಪಟ್ಟಣದ ತಾಪಂ ಆಡಳಿತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಒಂದೆರಡು ರೈತರ ಹೊಲದಲ್ಲಿ ನಿರ್ವಿುಸಿದ ಕೃಷಿ ಹೊಂಡದ ಫೋಟೋಗಳನ್ನೇ ಬಳಸಿ, ಬೇರೆ ಬೇರೆ ರೈತರ ಹೆಸರಿನಲ್ಲಿ 2018-19, 2020ನೇ ಸಾಲಿನಲ್ಲಿ ದಾಖಲೆ ಸೃಷ್ಟಿಸಿ, ಅವ್ಯವಹಾರ ನಡೆಸಲಾಗಿದೆ ಎಂದು ದಾಖಲೆ ಪ್ರದರ್ಶಿಸಿದರು. ಅಲ್ಲದೆ, ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವಂತೆ ಕಳೆದ ಆರು ತಿಂಗಳಿಂದ ಆಗ್ರಹಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.

    ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶಬಾಬುರಾವ್ ದೀಕ್ಷೀತ್, ತನಿಖೆಗೆ ಸಮಿತಿ ರಚಿಸಿ 15 ದಿನದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಪರವಾನಗಿ ಇಲ್ಲದೆ ರಸಗೊಬ್ಬರ ಅಂಗಡಿ ತೆರೆದು ಬೀಜ, ಗೊಬ್ಬರಕ್ಕೆ ರೈತರಿಂದ ಹೆಚ್ಚುವರಿ ಹಣ ಪಡೆಯತ್ತಿದ್ದಾರೆ ಎಂಬ ಸದಸ್ಯ ವಿಶ್ವನಾಥ ಹರವಿ ಆರೋಪಕ್ಕೆ ವ್ಯಾಪಾರಸ್ಥರ ಮೇಲೆ ಕ್ರಮದ ಭರವಸೆ ನೀಡಿದರು.

    ಅಂಗನವಾಡಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳು ಕಿರಾಣಿ ಅಂಗಡಿಗೆ ಮಾರಾಟವಾಗುತ್ತಿವೆ ಎಂದು ಸದಸ್ಯೆ ತಾರಾಮತಿ ಧರಣೆಪ್ಪನವರ ಆರೋಪಿಸಿದರು. ಪ್ರತಿಕ್ರಿಯಿಸಿದ ಸಿಡಿಪಿಒ ಎಸ್. ವಾಡಕರ್, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಸೂಚಿಸಿದ ತಾಪಂ ಇಒ ಪ್ರಶಾಂತ ತುರಕಾಣಿ ಅವರು ಚರ್ಚೆಗೆ ತೆರೆ ಎಳೆದರು.

    ತಾಲೂಕಿನ 946 ಬಿಸಿಯೂಟ ತಯಾರಕರಿಗೆ ಕಳೆದ ಐದು ತಿಂಗಳಿಂದ ಸಂಬಳ ನೀಡಿಲ್ಲ. ಕೂಡಲೆ ಸಂಬಳ ನೀಡಲು ಕ್ರಮ ಕೈಗೊಳ್ಳುವಂತೆ ಸದಸ್ಯ ಸಾತಪ್ಪ ದೇಸಾಯಿ ಸಭೆಯ ಗಮನ ಸೆಳೆದರು.

    ಅಧ್ಯಕ್ಷೆ ಪಾರವ್ವ ಆರೇರ್, ಉಪಾಧ್ಯಕ್ಷೆ ಪದ್ಮಾವತಿ ಪಾಟೀಲ, ಸದಸ್ಯರಾದ ರಾಜಕುಮಾರ ವೆರ್ಣೆಕರ, ಮಲ್ಲೇಶಪ್ಪ ದೊಡ್ಡಮನಿ, ಯಲ್ಲಪ್ಪ ನರಗುಂದ, ವಿಜಯಲಕ್ಷ್ಮೀ ಮುಂದಿನಮನಿ, ಬಿ.ಎಸ್. ಹಿರೇಮಠ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts