More

    ಕೃಷಿ ಸಂಜೀವಿನಿಗೆ ಸಿಗದ ಸ್ಪಂದನೆ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಮಣ್ಣಿನ ಪರೀಕ್ಷೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿಕೊಂಡು ರೈತರು ಅಧಿಕ ಇಳುವರಿ ತೆಗೆಯಬೇಕೆಂಬ ಸುದುದ್ದೇಶದಿಂದ ವರ್ಷದ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಜೀವಿನಿ ಯೋಜನೆಗೆ ಗಡಿ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.

    ಕೃಷಿ ಸಂಜೀವಿನಿ ಯೋಜನೆ ಅಡಿ ಮಣ್ಣು ಪರೀಕ್ಷೆ ನಡೆಸುವ ಉಪಕರಣ ಹಾಗೂ ಇತರ ಯಂತ್ರಗಳ ಸೌಲಭ್ಯಗಳು ಇರುವ ಅಗ್ರಿ ಆಂಬುಲೆನ್ಸ್ (ಕೃಷಿ ಆಂಬುಲೆನ್ಸ್) ಅನ್ನು ಜಿಲ್ಲೆಗೆ ಕೇವಲ ಒಂದು ಒದಗಿಸಲಾಗಿದೆ. ಈ ಯೋಜನೆಯ ಬಗ್ಗೆ ರೈತರಲ್ಲಿ ಮಾಹಿತಿ ಕೊರತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಆಂಬುಲೆನ್ಸ್ ಇರದಿರುವುದು ವೈಲ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

    ಕಳೆದ ಒಂದು ವರ್ಷದಲ್ಲಿ ವಿವಿಧ ಕೃಷಿ ಸಮಸ್ಯೆ ಹೇಳಿಕೊಂಡು ಜಿಲ್ಲೆಯ ರೈತರಿಂದ ಕೃಷಿ ಆಂಬುಲೆನ್ಸ್ಗೆ ಬೆರಳೆಣಿಕೆಯಷ್ಟು ಕರೆಗಳು ಬಂದಿವೆ. ಜಿಲ್ಲೆಯ ಬಹುತೇಕ ರೈತರಿಗೆ ಈ ಯೋಜನೆ ಬಗ್ಗೆ ಗೊತ್ತಿಲ್ಲದ ಕಾರಣ ನಿರೀಕ್ಷಿತ ಕರೆಗಳು ಬಂದಿಲ್ಲ. ಇನ್ನು ಪ್ರತಿ ವಿಧಾನಸಭೆಗೆ ಒಂದರಂತೆ ಕೃಷಿ ಆಂಬುಲೆನ್ಸ್ ನೀಡುವುದಾಗಿ ಆರಂಭದಲ್ಲಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಜಿಲ್ಲೆಗೆ ವರ್ಷದ ಹಿಂದೆ ಒಂದು ಆಂಬುಲೆನ್ಸ್ ನೀಡಲಾಗಿದೆ. ಈ ಮಾಸಾಂತ್ಯಕ್ಕೆ ಜಿಲ್ಲೆಗೆ ಇನ್ನೂ ಐದು ಆಂಬುಲೆನ್ಸ್ ಬರಲಿವೆ. ಈ ವಾಹನಗಳು ಬಂದರೆ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ.

    ಏನಿದು ಕೃಷಿ ಆಂಬುಲೆನ್ಸ್: ಹೊಲದಲ್ಲಿನ ಮಣ್ಣು ಪರೀಕ್ಷೆ, ಕೀಟ ಬಾಧೆ ನಿರ್ವಹಣೆಗೆ ಸಂಪಡಿಸುವ ಔಷಧದ ಮಾಹಿತಿ ಸೇರಿದಂತೆ ಇತರ ಕೃಷಿ ಚಟುವಟಿಕೆಗಳ ಮಾಹಿತಿಗಳನ್ನು ರೈತರ ಮನೆ ಬಾಗಿಲಿಗೆ ನೀಡುವ ಉದ್ದೇಶದಿಂದ ಕೃಷಿ ಇಲಾಖೆಯು ರಾಜ್ಯಾದ್ಯಂತ ಕೃಷಿ ಸಂಜೀವಿನಿ ಯೋಜನೆಯಡಿ ಆಂಬುಲೆನ್ಸ್ಗಳನ್ನು ಸೇವೆಗೆ ನೀಡಿದೆ.

    155313ಗೆ ಕಾಲ್ ಮಾಡಿ: ಕೃಷಿ ಸಂಜೀವಿನಿ ಸಹಾಯವಾಣಿ ಸಂಖ್ಯೆ 155313 ಇದೆ. ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ ಇದಾಗಿದ್ದು, ಈ ಸಂಖ್ಯೆಗೆ ಯಾವುದಾದರೂ ಜಿಲ್ಲೆಯಿಂದ ಕರೆ ಮಾಡಿದ್ದಲ್ಲಿ ಟೋಲ್ ಫ್ರೀ ಸಂಖ್ಯೆಯಿಂದ ಕರೆ ಮಾಡಿದ ರೈತರಿರುವ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಹೋಗುತ್ತದೆ. ಆಗ ರೈತರು ತಮ್ಮ ಸಮಸ್ಯೆಯನ್ನು ತಿಳಿಸಿ ಪರಿಹಾರ ಪಡೆಯಬಹುದಾಗಿದೆ. ಆರೋಗ್ಯ ಇಲಾಖೆ ಆಂಬುಲೆನ್ಸ್ ಮಾದರಿಯಂತೆ ಕೃಷಿ ಸಂಜೀವಿನಿ ಸಹಾಯವಾಣಿ ಕೆಲಸ ಮಾಡಲಿದೆ.

    ನಿತ್ಯವೂ ಗ್ರಾಮಕ್ಕೆ ತೆರಳಿ ಜಾಗೃತಿ: ಕೃಷಿಗೆ ಸಂಬಂಧಿಸಿದ ಸಮಸ್ಯೆ ಕುರಿತು ಕರೆ ಮಾಡಿದರೆ ಸ್ಥಳಕ್ಕೆ ಕೃಷಿ ಆಂಬುಲೆನ್ಸ್ ತೆರಳಿ ಪರಿಹರಿಸಬೇಕು. ಆದರೆ ಜಿಲ್ಲೆಯಲ್ಲಿ ರೈತರಿಂದ ನಿರೀಕ್ಷಿತವಾಗಿ ಕರೆಗಳು ಬರುತ್ತಿಲ್ಲ. ಹೀಗಾಗಿ ಕೃಷಿ ಆಂಬುಲೆನ್ಸ್ ನಿತ್ಯವೂ ಒಂದು ಊರಿಗೆ ತೆರಳಿ ಕೃಷಿ ಸಂಜೀವಿನಿ ಯೋಜನೆ ಕುರಿತು ರೈತರಿಗೆ ಜಾಗೃತಿ ಮೂಡಿಸುವ ಜತೆಗೆ ಕೃಷಿ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸುವ ಕೆಲಸ ಮಾಡುತ್ತಿದೆ. ಭಾನುವಾರ ರಜೆ ಹೊರತುಪಡಿಸಿ ವಾರದ 6 ದಿನಗಳಲ್ಲಿ ನಿತ್ಯವೂ ಜಿಲ್ಲೆಯ ತಾಲೂಕಿನ ಒಂದು ಗ್ರಾಮ ಆಯ್ಕೆ ಮಾಡಿಕೊಂಡು ಅಲ್ಲಿಗೆ ಆಂಬುಲೆನ್ಸ್ ಹೋಗುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಹಳ್ಳಿಯಲ್ಲಿದ್ದು, ಮಣ್ಣು ಪರೀಕ್ಷೆ, ಕೀಟ ಬಾಧೆ ನಿರ್ವಹಣೆ ಸೇರಿ ಇತರ ಕಾರ್ಯಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಒಂದು ತಿಂಗಳಲ್ಲಿ ಸರಾಸರಿ 500 ರೈತರ ಬಳಿಗೆ ಕೃಷಿ ಆಂಬುಲೆನ್ಸ್ ತೆರಳುತ್ತಿದೆ ಎನ್ನುತ್ತಾರೆ ಯೋಜನೆ ನೋಡಲ್ ಅಧಿಕಾರಿ ಧೂಳಪ್ಪ ಹೊಸಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts