More

    ಕೃಷಿ ಮೇಳಕ್ಕೆ ಹರಿದು ಬಂದ ಜನಸಾಗರ

    ಧಾರವಾಡ: ಇಲ್ಲಿನ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕೃಷಿ ಮೇಳದ ಎರಡನೇ ದಿನವಾದ ಭಾನುವಾರ ಜನಸಾಗರವೇ ಹರಿದು ಬಂದಿತ್ತು. ಮೇಳದ ಮೊದಲ ದಿನವಾದ ಶನಿವಾರ ನಿರೀಕ್ಷಿತ ಮಟ್ಟದಲ್ಲಿ ರೈತರು ಆಗಮಿಸಿದ ಹಿನ್ನೆಲೆಯಲ್ಲಿ ಆಯೋಜಕರು ಸೇರಿದಂತೆ ಮಳಿಗೆ ಸ್ಥಾಪಿಸಿದ ವಿವಿಧ ಕಂಪನಿಗಳ ಮಾಲೀಕರಿಗೆ ಒಂದು ರೀತಿಯಲ್ಲಿ ನಿರಾಸೆ ಅನುಭವಿಸುವಂತಾಗಿತ್ತು. ಆದರೆ ರಜಾ ದಿನವಾದ ಭಾನುವಾರ ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ರೈತರ ಜಾತ್ರೆಗೆ ಆಗಮಿಸಿ ಮಾಹಿತಿ ಪಡೆದುಕೊಂಡರು. ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸಿದ್ದರಿಂದ ಯಂತ್ರೋಪಕರಣ, ಕೃಷಿ ಪರಿಕರಗಳ ಮಾರಾಟದ ಭರಾಟೆಯೂ ಜೋರಾಗಿತ್ತು. ಕೇವಲ ಮಳಿಗೆಗಳು ಮಾತ್ರವಲ್ಲದೆ, ಕೃವಿವಿ ಆವರಣದಲ್ಲಿ ನಿರ್ವಿುಸಿರುವ ಪ್ರಾತ್ಯಕ್ಷಿಗಳ ಸ್ಥಳಗಳಿಗೂ ತರಳಿದ್ದ ರೈತರು ಬೆಳೆಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಕೃವಿವಿ ಪ್ರಕಾರ ಭಾನುವಾರ ಒಂದೇ ದಿನ ಸುಮಾರು 2.35 ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದಾರೆ.

    ಮೇಳಕ್ಕೆ ಮೆರುಗು ನೀಡಿದ ಶ್ವಾನ ಪ್ರದರ್ಶನ

    ಕೃಷಿ ಮೇಳದಲ್ಲಿ ಹಮ್ಮಿಕೊಂಡಿರುವ ಜಾನುವಾರುಗಳ ಪ್ರದರ್ಶನ ಮೇಳಕ್ಕೆ ಸಾಕಷ್ಟು ಮೆರುಗು ನೀಡಿದ್ದು ವಿವಿಧ ಜಾತಿಯ ಶ್ವಾನಗಳು. ದೇಶ, ವಿದೇಶಗಳ ತಳಿಗಳನ್ನು ಜನರು ವೀಕ್ಷಿಸಿ ಮೊಬೈಲ್​ನಲ್ಲಿ ಅವುಗಳ ಚಿತ್ರ ಸರೆ ಹಿಡಿಯುತ್ತಿದ್ದರೆ, ನಿತ್ಯವೂ ಮನೆ ಆವರಣದಲ್ಲೇ ಕಾಲ ಕಳೆಯುತ್ತಿದ್ದ ಶ್ವಾನಗಳು ಹೆಚ್ಚಿನ ಸಂಖ್ಯೆಯ ಜನರನ್ನು ನೋಡಿ ಬೆಚ್ಚಿಬಿದ್ದು ಬೊಗಳುತ್ತಲಿದ್ದವು. ಹೀಗಾಗಿ ತಮ್ಮ ಪ್ರೀತಿಯ ಶ್ವಾನಗಳನ್ನು ಸಮಾಧಾನ ಪಡಿಸುವುದೇ ಮಾಲೀಕರಿಗೆ ತಲೆ ನೋವಾಗಿತ್ತು.

    ಜರ್ಮನ್ ಶಫರ್ಡ್, ಲ್ಯಾಬ್ರಡೋರ್, ಗೋಲ್ಡನ್ ರಿಟ್ರೀವರ್, ಪಗ್, ಚೌಚೌ, ಸೈಬೀರಿಯನ್ ಹಸ್ಕಿ ಸೇರಿದಂತೆ 18 ತಳಿಯ 46 ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಇದಲ್ಲದೆ ಮುಧೋಳ ಜಾತಿಯ ಶ್ವಾನಗಳು ಗಮನ ಸೆಳೆಯುತ್ತಿದ್ದವು.ಇನ್ನು ಕಾಟೇವಾಡಿ ತಳಿಯ ಎರಡು ಬಿಳಿ ಕುದುರೆಗಳು, ಸಿರೋಹಿ, ತೋತಾಪುರಿ, ಜಮುನಾಪಾರಿ, ಬೀಟಲ್ ಸೇರಿದಂತೆ 8 ತಳಿಯ ಮೇಕೆಗಳು, ರಾಜಸ್ಥಾನದ ಕಾಂಕ್ರೇಜ್ ತಳಿಯ ಹೋರಿ, ಆಂಧ್ರಪ್ರದೇಶದ ಓಗೋಲ್ ಜಿಲ್ಲೆಯ ಓಗೋಲ್ ತಳಿಯ ಎತ್ತುಗಳು ಸೇರಿ ಒಟ್ಟು 27 ಆಕಳು ಹಾಗೂ ಎಮ್ಮೆಗಳು, ಮೊಲ, ಬಾತುಕೋಳಿ, ಕಡಕ್​ನಾಥ ತಳಿಯ ಕೋಳಿ ಸೇರಿ ಸಹ್ಯಾದ್ರಿ, ಗಿರಿರಾಜ ತಳಿಯ ಕೋಳಿಗಳು ಎಲ್ಲರ ಗಮನ ಸೆಳೆದವು. ಇಷ್ಟೆಲ್ಲ ವೈವಿಧ್ಯಗಳಿಂದ ಕೂಡಿದ ಜಾನುವಾರು ಪ್ರದರ್ಶನ ಜಾನುವಾರು ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts