More

    ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಜಾತ್ರೆ ಇಂದಿನಿಂದ

    ಧಾರವಾಡ: ಉತ್ತರ ಕರ್ನಾಟಕ ಭಾಗದ ರೈತರ ಪಾಲಿನ ಒಕ್ಕಲುತನದ ಜಾತ್ರೆ ಎಂದೇ ಖ್ಯಾತವಾಗಿರುವ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಮೇಳ ಜ. 18ರಂದು ಆರಂಭಗೊಳ್ಳಲಿದೆ. ಕೃಷಿ ವಿವಿ ಆವರಣ ಸಕಲ ರೀತಿಯಿಂದ ರೈತರನ್ನು ಬರಮಾಡಿಕೊಳ್ಳಲು ಸಜ್ಜುಗೊಂಡಿದ್ದು, ಜ. 20ರವರೆಗೆ ಮೂರು ದಿನ ಮೇಳ ನಡೆಯಲಿದೆ.

    ಪ್ರವಾಹದ ಹಿನ್ನೆಲೆ ನಾಲ್ಕು ತಿಂಗಳು ತಡವಾಗಿ ನಡೆಯುತ್ತಿರುವ ಈ ಮೇಳದಲ್ಲಿ ‘ಪ್ರತಿ ಹನಿ-ಸಮೃದ್ಧ ತೆನಿ’ ಎಂಬ ಘೊಷ ವಾಕ್ಯ ಪ್ರತಿಧ್ವನಿಸಲಿದೆ. ಹನಿ ಹನಿ ನೀರು ಕೂಡ ಕೃಷಿಗೆ ಹೇಗೆಲ್ಲ ಪೂರಕವಾಗಿ ಬಳಕೆಯಾಗಬೇಕು ಎನ್ನುವುದನ್ನು ರೈತ ಸಮುದಾಯಕ್ಕೆ ತಿಳಿಸುವ ಪ್ರಯತ್ನ ನಡೆಯಲಿದೆ. ಹೀಗಾಗಿ ನೀರು ಉಳಿತಾಯ ಮಾಡಬಲ್ಲ ಕೃಷಿ ಪರಿಕರ, ಕೃಷಿ ಯಂತ್ರಗಳ ಮಳಿಗೆಗಳಿಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಅಲ್ಲದೇ ಹನಿ ನೀರಾವರಿ ಪ್ರಪಂಚವನ್ನೇ ಮಳಿಗೆಗಳ ಮಧ್ಯದ ಪ್ರದರ್ಶನ ಭಾಗದಲ್ಲಿ ಸೃಷ್ಟಿ ಮಾಡಿದ್ದು, ಒಂದೇ ಸೂರಿನಡಿ ನಾನಾ ಬಗೆಯ ಹನಿ ನೀರಾವರಿ ಕೃಷಿ ಸಂಬಂಧಿಸಿದ ಪ್ರದರ್ಶಿಕೆಯನ್ನು ತೋರಿಸಲಿದ್ದಾರೆ.

    ಹೊರಗಡೆಯಿಂದ ಬರುವ ರೈತರ ವಾಹನಗಳ ನಿಲುಗಡೆಗಾಗಿ ಮುಖ್ಯ ದ್ವಾರಕ್ಕೆ ಹೊಂದಿಕೊಂಡಿರುವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಿಬಿಟಿಯಿಂದ ಹೆಚ್ಚುವರಿ ಬಸ್​ಗಳ ವ್ಯವಸ್ಥೆ ಕೂಡ ಇದೆ. ಭದ್ರತೆ ದೃಷ್ಟಿಯಿಂದ ಧಾರವಾಡ-ಬೆಳಗಾವಿ ರಸ್ತೆ ಹಾಗೂ ಕೃಷಿ ವಿವಿ ಆವರಣದಲ್ಲಿಯೂ ಭಾರೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

    ಉದ್ಘಾಟನೆಗೆ ಗಣ್ಯರು: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಬೆಳಗ್ಗೆ 11.30ಕ್ಕೆ ಮುಖ್ಯ ವೇದಿಕೆಯಲ್ಲಿ ಮೇಳವನ್ನು ಉದ್ಘಾಟಿಸುವರು. ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವರುಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಸಿ.ಸಿ. ಪಾಟೀಲ, ಪ್ರಭು ಚವ್ಹಾಣ, ಶಶಿಕಲಾ ಜೊಲ್ಲೆ, , ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಇತರರು ಪಾಲ್ಗೊಳ್ಳುವರು.

    ಇಂದಿನ ಗೋಷ್ಠಿಗಳು: ಮೇಳದ ಮೊದಲ ದಿನ ಉದ್ಘಾಟನೆಯ ಬಳಿಕ ಮುಖ್ಯ ವೇದಿಕೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆ ಹೆಚ್ಚಿಸಲು ಇಸ್ರೇಲ್ ತಂತ್ರಜ್ಞಾನ ಆಧಾರಿತ ಕೃಷಿ ಕುರಿತು ಮಾಹಿತಿ ಹಾಗೂ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ; ಮಧ್ಯಾಹ್ನ 3 ಗಂಟೆಗೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಗುಲಾಬಿ ಬಣ್ಣದ ಕಾಯಿಕೊರಕ ಹಾಗೂ ಗೋವಿನ ಜೋಳದಲ್ಲಿ ಲದ್ದಿ ಹುಳುವಿನ ನಿರ್ವಹಣೆ ಕುರಿತು ಉಪನ್ಯಾಸ ನಡೆಯಲಿದೆ.

    ಮೇಳದಲ್ಲಿ ವಿಜಯವಾಣಿ-ದಿಗ್ವಿಜಯ :ಕೃಷಿ ಮೇಳದಲ್ಲಿ ನಾಡಿನ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಕೂಡ ಕಂಗೊಳಿಸುತ್ತಿದೆ. ಮುಖ್ಯ ದ್ವಾರ ಪ್ರವೇಶಿಸುತ್ತಿದಂತೆಯೇ ಮೊದಲಿಗೆ ಬರುವ ಜಾನುವಾರು ಪ್ರದರ್ಶನ ಮೇಳ, ಮುಂದೆ ಸಾಗಿದಂತೆ ಸಿಗುವ ಪ್ರಾತ್ಯಕ್ಷಿಕೆಗಳ ವಿಭಾಗ, ಪ್ರದರ್ಶನ ಮಳಿಗೆಗಳ ವಿಭಾಗದ ಮುಖ್ಯ ಪ್ರವೇಶ ಹಾಗೂ ಮುಖ್ಯ ವೇದಿಕೆಯನ್ನು ಪ್ರವೇಶಿಸುವಾಗ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ನ ಆಳೆತ್ತರದ ಕಟೌಟ್​ಗಳು ರೈತರನ್ನು ಸ್ವಾಗತಿಸುತ್ತಿವೆ.

    *

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts