More

    ಕೃಷಿ ಚಟುವಟಿಕೆಗೆ ಚುರುಕು

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಭರ್ಜರಿಯಾಗಿ ಸುರಿದಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಮೇ ಕೊನೇ ವಾರ ಇಲ್ಲವೇ ಜೂನ್ ಮೊದಲ ವಾರದಲ್ಲಿ ಬಹುತೇಕ ಮುಂಗಾರು ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದಾರೆ. ಇದರ ಜತೆಗೆ, ಕೃಷಿ ಇಲಾಖೆ ಕೂಡ ಅಗತ್ಯ ಬೀಜ- ಗೊಬ್ಬರ ಒದಗಿಸಲು ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದೆ.

    ಕಳೆದ ಎರಡು ವರ್ಷ ಆರಂಭದಲ್ಲಿ ಸಾಮಾನ್ಯವಾಗಿದ್ದ ಮುಂಗಾರು, ನಂತರದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ವಿುಸಿತ್ತು. ಈ ವರ್ಷ ಉತ್ತಮ ಮುಂಗಾರಿನ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಾಗಿ ರೈತ ಸಮುದಾಯ ಉತ್ಸಾಹದಿಂದ ಕೃಷಿ ಕಾರ್ಯದಲ್ಲಿ ತೊಡಗಿದೆ.

    ಮುಂಗಾರು ಪೂರ್ವ ಅಂದರೆ ಕಳೆದ ಮಾರ್ಚ್ ನಿಂದ ಈವರೆಗೆ (ಮೇ 17) ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಪ್ರತಿ ವರ್ಷ ಈ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ 80.2 ಮಿ. ಮೀಟರ್ ಮಳೆಯಾಗುತ್ತಿತ್ತು. ಆದರೆ, ಈ ಬಾರಿ 178 ಮಿ.ಮೀ. (ಅಂದರೆ, ಶೇ. 122 ಅಧಿಕ) ಮಳೆಯಾಗಿದೆ. ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿಯೂ ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಈ ಬಾರಿ ಸಕಾಲದಲ್ಲಿ (ಜೂನ್ ಮೊದಲ ವಾರ) ಬಿತ್ತನೆಯಾಗುವ ನಿರೀಕ್ಷೆ ಇದೆ.

    ಕೃಷಿ ಇಲಾಖೆ ಸಿದ್ಧತೆ: ಕೃಷಿ ಇಲಾಖೆ ಅಧಿಕಾರಿಗಳು ಸಹ ಅಗತ್ಯ ಬಿತ್ತನೆ ಬೀಜ, ಗೊಬ್ಬರ ಇತ್ಯಾದಿ ಸೌಲತ್ತುಗಳನ್ನು ರೈತರಿಗೆ ಮಾಡಿ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ (ಆರ್​ಎಸ್​ಕೆ) ಸಂಗ್ರಹ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 14 ಆರ್​ಎಸ್​ಕೆ, 13 ಹೆಚ್ಚುವರಿ ಬೀಜ ವಿತರಣೆ ಕೇಂದ್ರಗಳು ಇವೆ.

    ಬೀಜ ದಾಸ್ತಾನು: ಈ ವರ್ಷ ಧಾರವಾಡ ಜಿಲ್ಲೆಯಲ್ಲಿ 2.35 ಲಕ್ಷ ಹೆಕ್ಟೇರ್ (ತೊಟಗಾರಿಕೆ ಹೊರತುಪಡಿಸಿ) ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿದೆ. ಪ್ರತಿ ವರ್ಷ ಸುಮಾರು 35 ಸಾವಿರ ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಗಳನ್ನು ರೈತರು ಆರ್​ಎಸ್​ಕೆಗಳಿಂದ ಕೊಂಡೊಯ್ಯುತ್ತಾರೆ. ಇದರ ಆಧಾರದಲ್ಲಿ ಇದೀಗ ಆರ್​ಎಸ್​ಕೆಗಳಲ್ಲಿ ಬೀಜ ದಾಸ್ತಾನು ಪ್ರಕ್ರಿಯೆ ನಡೆದಿದೆ.

    ಸೋಯಾಬೀನ್ 10 ಸಾವಿರ ಕ್ವಿಂಟಾಲ್ ಅಗತ್ಯವಿದ್ದು, ಈ ಪೈಕಿ 7 ಸಾವಿರ ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ. ಜೂನ್ ಮೊದಲ ವಾರ ಬೇಡಿಕೆ ನೋಡಿಕೊಂಡು ಇನ್ನಷ್ಟು ಬೀಜ ತರಿಸಲಾಗುತ್ತದೆ.

    ಹೆಸರು 1100 ಕ್ವಿಂಟಾಲ್, ಉದ್ದು 150 ಕ್ವಿಂಟಾಲ್ ಸಂಗ್ರಹ ಮಾಡಲಾಗಿದೆ. ಇವು ಮುಂಗಾರಿನ ಮೊದಲ ಬಿತ್ತನೆ ಬೀಜಗಳಾಗಿವೆ. ನಂತರದ ದಿನಗಳಲ್ಲಿ ಶೇಂಗಾ, ಹತ್ತಿ, ಅಲಸಂದೆ, ಗೋವಿನಜೋಳ, ಜೋಳ, ತೊಗರಿ ಬೀಜಗಳನ್ನು ಬಿತ್ತನೆ ಮಾಡಲಾಗುತ್ತದೆ. ಇವುಗಳ ಸಂಗ್ರಹಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗೊಬ್ಬರ ಲಭ್ಯತೆ

    ಮುಂಗಾರು ಹಂಗಾಮಿನಲ್ಲಿ (ಏಪ್ರಿಲ್​ನಿಂದ ಸೆಪ್ಟೆಂಬರ್) ಯೂರಿಯಾ ಗೊಬ್ಬರ ಸುಮಾರು 28 ಸಾವಿರ ಮೆಟ್ರಿಕ್ ಟನ್, ಡಿಎಪಿ 15 ಸಾವಿರ ಮೆಟ್ರಿಕ್ ಟನ್, ಎಂಒಪಿ 3786 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 10121 ಮೆಟ್ರಿಕ್ ಟನ್ ಗೊಬ್ಬರ ಬೇಕಾಗುತ್ತದೆ. ಈ ಪೈಕಿ ಯೂರಿಯಾ 8232 ಮೆಟ್ರಿಕ್ ಟನ್, ಡಿಎಪಿ 8220 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 12200 ಮೆಟ್ರಿಕ್ ಟನ್, ಎಂಒಪಿ 2800 ಮೆಟ್ರಿಕ್ ಟನ್ ದಾಸ್ತಾನು ಇದೆ. ಪ್ರತಿ ತಿಂಗಳು ಅಗತ್ಯಕ್ಕೆ ತಕ್ಕಂತೆ ಮತ್ತೆ ತರಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts