More

    ಕೃಷಿ ಖಾತೆ ಮುಳ್ಳಿನ ಹಾಸಿಗೆ ಇದ್ದಂತೆ

    ಹಿರೇಕೆರೂರ: ನಾನು ರೈತ ಕುಟುಂಬದವನಾಗಿದ್ದು, ಕೃಷಿ ಖಾತೆ ಎಂಬುದು ಮುಳ್ಳಿನ ಹಾಸಿಗೆ ಇದ್ದ ಹಾಗೆ. ಇಲ್ಲಿ ಜೈಕಾರದ ಬದಲು ನಿಂದನೆ ಅಪಾಯದಂತಹ ದಾರಿಗಳೆ ಹೆಚ್ಚು. ಆದರೂ ಇದನ್ನು ಲೆಕ್ಕಿಸದೆ ರೈತರ ಹಿತ ಕಾಪಾಡಲು ಈ ಖಾತೆಯನ್ನು ಕೇಳಿ ಪಡೆದಿದ್ದೇನೆ. ಅಲ್ಪ ಅವಧಿಯಲ್ಲಿ ಸಾಕಷ್ಟು ಮಹತ್ತರ ಕಾರ್ಯ ಮಾಡಿದ್ದು, ಮುಂದೆಯೂ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಾಟನೆ, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ (ಕೃಷಿ ಯಂತ್ರಧಾರೆ) ಹಾಗೂ ತುಂತುರು ನೀರಾವರಿ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಅಧಿಕಾರ ವಹಿಸಿಕೊಂಡ ನಂತರ ಕರೊನಾ ಸಮಯದಲ್ಲಿ 30 ಜಿಲ್ಲೆಗಳಿಗೆ 30 ದಿನದಲ್ಲಿ 8 ಸಾವಿರ ಕಿ.ಮೀ ಪ್ರಯಾಣಿಸಿ, ರೈತರ ಸಂಕಷ್ಟಗಳಿಗೆ ಭಾಗಿಯಾಗುವ ಮೂಲಕ ಅಗ್ರಿವಾರ್ ರೂಮ್ ಗ್ರೀನ್ ಪಾಸ್, ಮೆಕ್ಕೆಜೋಳ ಬೆಳೆಗೆ ಪೋ›ತ್ಸಾಹ ಧನದಲ್ಲಿ ಖರೀದಿ ಸೇರಿ ಹಲವು ಮಹತ್ತರ ಕೆಲಸಗಳನ್ನು ಮಾಡಲಾಗಿದೆ. ಈ ವರ್ಷ ಶೇ. 104 ರಷ್ಟು ಕೃಷಿ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ನಿಜವಾದ ರೈತ ಯಾವುದೆ ಕಾರಣಕ್ಕೂ ಆತ್ಮಹತ್ಯೆಗಳಂತಹ ಹೇಡಿತನದ ಕೃತ್ಯ ಮಾಡಿಕೊಳ್ಳುವುದಿಲ್ಲ. ಮಾಡಿಕೊಳ್ಳಬಾರದು ಇದು ಒಳ್ಳೆಯ ಬೆಳವಣಿಗೆಯಲ್ಲ. ರೈತ ಭಿಕ್ಷೆ ಬೇಡಬಾರದು, ತಲೆ ಎತ್ತಿ ಬದುಕಬೇಕು ಎಂದರು.

    ಪ್ರತಿ ಗ್ರಾಮದಲ್ಲಿ ಮಣ್ಣು ಪರೀಕ್ಷಾ ಕೇಂದ್ರ ನಿರ್ವಿುಸುವ ಕನಸು ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದ್ದು, ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 1 ಮಣ್ಣು ಪರೀಕ್ಷಾ ಕೇಂದ್ರವನ್ನು ಆರಂಭಿಸಲು ಪತ್ರ ಬರೆಯಲಾಗಿದೆ. 2 ವರ್ಷಗಳ ಒಳಗಾಗಿ ನದಿಗಳ ಮೂಲದಿಂದ 5 ಏತ ನೀರಾವರಿ ಯೋಜನೆಗಳ ಮೂಲಕ ರಟ್ಟಿಹಳ್ಳಿ, ಹಿರೇಕೆರೂರು ತಾಲೂಕಿನ ಶೇ. 97ರಷ್ಟು ಕೆರೆಗಳು ಭರ್ತಿಯಾಗಲಿವೆ. ಒಟ್ಟಾರೆ ಕೃಷಿ ಇಲಾಖೆಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

    ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಈ ವಿಧಾನಸಭಾ ಕ್ಷೇತ್ರ ಅತಿ ಪ್ರಜ್ಞಾವಂತಿ ಕೆಯಿಂದ ಕೂಡಿದ್ದು, ಇಲ್ಲಿನ ಜನತೆ ಬಿ.ಸಿ. ಪಾಟೀಲ ಅವರನ್ನು ಮರು ಆಯ್ಕೆ ಮಾಡುವ ಮೂಲಕ ಕೃಷಿ ಮಂತ್ರಿಯನ್ನಾಗಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಡ್ಡುಗಟ್ಟಿದ ಕೃಷಿ ಇಲಾಖೆಗೆ ಹೊಸ ಆಯಾಮ ನೀಡುವ ಮೂಲಕ ರೈತ ಯಂತ್ರಧಾರೆಯನ್ನು ಈ ಭಾಗದ ಜನರಿಗೆ ಪರಿಚಯಿಸಿದ ಕೀರ್ತಿ ಸಚಿವರಿಗೆ ಸಲ್ಲುತ್ತದೆ ಎಂದರು.

    ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿದರು. ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಇದೇ ವೇಳೆ ಕೃಷಿ ಇಲಾಖೆಯ ವತಿಯಿಂದ ಸಚಿವ ಬಿ.ಸಿ. ಪಾಟೀಲ ಅವರ ಜನ್ಮದಿನ ಆಚರಿಸಲಾಯಿತು. ನೀರಿನಲ್ಲಿ ಮುಳುಗುತ್ತಿದ್ದ ತಾಯಿ, ಮಗುವನ್ನು ರಕ್ಷಣೆ ಮಾಡಿದ ರಟ್ಟಿಹಳ್ಳಿ ತಾಲೂಕಿನ ತಡಕನಹಳ್ಳಿ ಗ್ರಾಮದ ಕುಬೇರಪ್ಪ ಬಣಕಾರ ಅವರನ್ನು ಸನ್ಮಾನಿಸಲಾಯಿತು. ಅವರಿಗೆ ಸಚಿವರು ವೈಯಕ್ತಿಕವಾಗಿ 5 ಸಾವಿರ ರೂ. ನೀಡಿದರು.

    ನಂತರ ಸಚಿವ ಬಿ.ಸಿ. ಪಾಟೀಲ, ಯು.ಬಿ. ಬಣಕಾರ, ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಆತ್ಮ ಯೋಜನೆಯಡಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.

    ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಕನ್ನಪ್ಪಳವರ, ತಾಪಂ ಅಧ್ಯಕ್ಷ ರಾಜು ಬಣಕಾರ, ದಿಳ್ಳೆಪ್ಪ ಹಳ್ಳಳ್ಳಿ, ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ, ಜಿಪಂ ಸದಸ್ಯರಾದ ಸುಮಿತ್ರಾ ಪಾಟೀಲ, ಶಿವರಾಜ ಹರಿಜನ, ಎನ್.ಎಂ. ಈಟೇರ, ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್, ಅಧಿಕಾರಿಗಳು, ರೈತರು ಇದ್ದರು. ಪ್ರಾಚಾರ್ಯ ಡಾ.ಎಸ್.ಪಿ. ಗೌಡರ, ರಾಣೆಬೆನ್ನೂರು ಉಪಕೃಷಿ ನಿರ್ದೇಶಕಿ ಸ್ಪೂರ್ತಿ ಬಿ.ಎಸ್., ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts