More

    ಕೃಷಿ ಕಲ್ಯಾಣಕ್ಕೆ ದಶಸೂತ್ರ; ಅನ್ನದಾತರಿಗೆ ಆತ್ಮಬಲ, ಹತ್ತು ನಿರ್ಣಯಗಳ ಬೆಂಬಲ

    ಮೈಸೂರು:  ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವತಿಯಿಂದ ಆಯೋಜಿಸಲಾಗಿದ್ದ ಕೃಷಿ ಮೇಳ ಪ್ರಗತಿಪರ ರೈತರ ವಿಚಾರ ಮಂಡನೆ, ಸಲಹೆ, ತಜ್ಞರ ಅಭಿಪ್ರಾಯಗಳ ಜತೆಗೆ ಮೂರು ದಿನಗಳಲ್ಲಿ ಹೊಮ್ಮಿದ ವಿಚಾರಗಳಿಗೆ ನಿರ್ಣಯಗಳ ಸ್ಪಷ್ಟ ರೂಪ ಪಡೆಯುವಲ್ಲಿ ಯಶಸ್ವಿಯಾಯಿತು.

    ಕೃಷಿ ಕಲ್ಯಾಣಕ್ಕೆ ದಶಸೂತ್ರ; ಅನ್ನದಾತರಿಗೆ ಆತ್ಮಬಲ, ಹತ್ತು ನಿರ್ಣಯಗಳ ಬೆಂಬಲಈ 10 ಹಕ್ಕೊತ್ತಾಯಗಳ ಕೋರಿಕೆಯನ್ನು ಭಾನುವಾರ ಸಮಾರೋಪ ಸಮಾರಂಭದ ವೇದಿಕೆಯಲ್ಲೇ ಸ್ವೀಕರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರೈತರನ್ನು ಸಂಕಷ್ಟದಿಂದ ಪಾರುಮಾಡುವ ಪ್ರಯತ್ನ ನಡೆದಿದೆಯೆಂದು ಸಕಾರಾತ್ಮಕ ಭರವಸೆ ತುಂಬಿದರು.

    ಒಟ್ಟು ಮೂರು ದಿನಗಳ ಮೇಳದಲ್ಲಿ ಒಟ್ಟು 1.50 ಲಕ್ಷ ರೈತರು ಮಾಹಿತಿ, ಸಲಹೆ ಪಡೆದು ರ್ಚಚಿಸಿದ್ದು ವಿಶೇಷ. ಕೃಷಿ ಶಿಕ್ಷಣದ ಭಾಗವಾಗಿ ಔದ್ಯೋಗಿಕ ಆಯಾಮದ ಸ್ಪರ್ಶ ಪಡೆಯಬೇಕು. ಜ್ಞಾನ, ತಿಳಿವಳಿಕೆ, ಮಾರುಕಟ್ಟೆ ಕೌಶಲಗಳು, ಮೌಲ್ಯವರ್ಧನೆ ನೈಪುಣ್ಯವನ್ನು ಅನ್ನದಾತರು ರೂಢಿಸಿಕೊಂಡರೆ ಕೊಡುವ ಕೈ ಎಂದಿಗೂ ಬೇಡುವ ಕೈಯಾಗದು ಎಂಬ ಸಂದೇಶವನ್ನು ಮೇಳ ಸಾರಿತು. ನೀರು, ವಿದ್ಯುತ್, ಬೆಲೆ ಖಾತ್ರಿ, ಯುವ ಸಮೂಹ ಆಕರ್ಷಿಸಲು ಸೂಕ್ತ ಕಾರ್ಯಕ್ರಮ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಹಾಗೂ ಕೃಷಿಕರಿಗಾಗಿ ರೂಪಿಸಿದ ಯೋಜನೆಗಳ ಸಮರ್ಪಕ ಅನುಷ್ಠಾನದಂತಹ ಕಾರ್ಯಸಾಧು ಮಾರ್ಗಸೂಚಿಯನ್ನು ಹಾಕಿಕೊಟ್ಟಿತು.

    ಮೇಳಕ್ಕೆ ಆಗಮಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ ಆದಿಯಾಗಿ ಸಚಿವರು, ವಿಜ್ಞಾನಿಗಳು, ತಜ್ಞರು, ರೈತ ನಾಯಕರು, ಸಂಪನ್ಮೂಲ ವ್ಯಕ್ತಿಗಳು, ರೈತರು, ಮಹಿಳೆಯರು ಸೇರಿ ವಿವಿಧ ಕ್ಷೇತ್ರಗಳ ಮುಖಂಡರು ಮೇಳ ಆಯೋಜಿಸಿದ್ದಕ್ಕೆ ಮೆಚ್ಚುಗೆ ಸೂಚಿಸಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ರೈತಪರ ಕಾಳಜಿಯನ್ನು ಪ್ರಶಂಸಿಸಿ, ಅಭಿನಂದನೆ ಸಲ್ಲಿಸಿದರು.

    ಒತ್ತಾಸೆಗೆ ಸ್ಪಂದನೆ: ನೆರೆದ ಜನಸ್ತೋಮದ ಚಪ್ಪಾಳೆಯ ಒಪ್ಪಿಗೆ ಪಡೆದ 10 ಅಂಶಗಳ ಹಕ್ಕೊತ್ತಾಯಗಳನ್ನು ಸಮಾರೋಪ ಸಮಾರಂಭದಲ್ಲಿ ಸ್ವೀಕರಿಸಿದ ಮುಖ್ಯ ಅತಿಥಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಯಶಸ್ವೀ ಮೇಳವು ಡಾ. ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ ಸಾಧನೆಗೆ ಮತ್ತೊಂದು ಗರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಇದರಲ್ಲಿ ಆಡಳಿತಾತ್ಮಕ, ಮೂಲಭೂತ ವಿಚಾರಗಳನ್ನು ಒಳಗೊಂಡ ಸುಸ್ಥಿರ ಅಭಿವೃದ್ಧಿಗೆ ಪೂರಕ 10 ಹಕ್ಕೊತ್ತಾಯಗಳಿವೆ ಎಂದ ಅವರು ಸವಾಲುಗಳು, ಬಿಕ್ಕಟ್ಟುಗಳನ್ನು ಪ್ರಸ್ತಾಪಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಪ್ರಯತ್ನಗಳು ನಡೆದಿವೆ ಎಂದರು. ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀರು ಸಂರಕ್ಷಣೆ, ರೈತರ ಸ್ವಾವಲಂಬಿ ಬದುಕಿನ ಬಗ್ಗೆ ಕಿವಿಮಾತು ಹೇಳಿದರು.

    10 ಹಕ್ಕೊತ್ತಾಯಗಳು 

    1.  ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ತೊಂದರೆಯಿಂದ ಪಾರುಮಾಡಬೇಕು. ಕೂಡಲೇ ಬಗರ್​ಹುಕುಂ ಸಾಗುವಳಿ ಸಮಿತಿಗಳನ್ನು ಎಲ್ಲ ತಾಲೂಕುಗಳಲ್ಲಿ ರಚನೆ ಮಾಡಿ ರೈತರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು

    2 ಎಲ್ಲ ಬೆಳೆಗಳನ್ನೂ ಉಚಿತ ಬೆಳೆ ವಿಮೆ ವ್ಯಾಪ್ತಿಗೆ ತರಬೇಕು. ವಿಮಾ ಯೋಜನೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಅದನ್ನು ಪರಿಹರಿಸಬೇಕು. ಪೋಡಿ ಸಮಸ್ಯೆ ಬಗೆಹರಿಸಬೇಕು

    3 ಪ್ರತಿ ಎಪಿಎಂಸಿಗಳಲ್ಲೂ ಶೀತಲೀಕರಣ ವ್ಯವಸ್ಥೆ ಮಾಡಿ, ರೈತರ ಬೆಳೆಗಳನ್ನು ದೀರ್ಘಕಾಲ ಸಂರಕ್ಷಿಸುವ ವ್ಯವಸ್ಥೆ ಆಗಬೇಕು. ಎಪಿಎಂಸಿಗಳನ್ನು ಬಲಪಡಿಸಿ ಬೆಳೆ ಸಾಗಾಟಕ್ಕೆ ಅನುಕೂಲ ಕಲ್ಪಿಸಬೇಕು

    4 ಆಧುನಿಕ ತಂತ್ರಜ್ಞಾನ ಬಳಸಿ ಗ್ರಾಮೀಣ, ನಗರ, ಅರಣ್ಯ ಪ್ರದೇಶದ ಕೆರೆ-ಕಟ್ಟೆಗಳನ್ನು ನಿಖರವಾಗಿ ಗುರುತಿಸಿ ಪುನಃಶ್ಚೇತನಗೊಳಿಸಬೇಕು. ಕೆರೆಯಿಂದ ಕೆರೆಗೆ ಸಂಪರ್ಕ ಮರುರೂಪಿಸಬೇಕು. ಆ ಮೂಲಕ ಕೆರೆ ತುಂಬಿಸಬೇಕು. ಅದೇ ರೀತಿ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೆರೆಗಳನ್ನು ತುಂಬಿಸುವ ಯತ್ನ ಆಗಬೇಕು

    5 ಹಸಿರು ಕ್ರಾಂತಿಯಿಂದ ನಿತ್ಯ ಹಸಿರು ಕ್ರಾಂತಿಯೆಡೆಗೆ ಅಂದರೆ ಅರಣ್ಯಕೃಷಿಗೆ ಸರ್ಕಾರ ಒತ್ತು ನೀಡಬೇಕು. ಇದರಿಂದ ನೀರಿನ ಮಿತವ್ಯಯ, ಅಂತರ್ಜಲ ಹೆಚ್ಚಳ, ಸುಸ್ಥಿರ ಆದಾಯ ಸಾಧ್ಯ.

    6 ಸಹಜ ಮತ್ತು ಸಾವಯವ ಕೃಷಿ ಉತ್ಪನ್ನಗಳನ್ನು ಪ್ರಮಾಣೀಕರಿಸುವ ವ್ಯವಸ್ಥೆಯನ್ನು ಖಾಸಗಿ ಹಿಡಿತದಿಂದ ತಪ್ಪಿಸಿ ಸರ್ಕಾರದಿಂದಲೇ ಪಾರದರ್ಶಕವಾಗಿ ಮಾಡಬೇಕು.

    7 ಸಾಂಪ್ರದಾಯಿಕ ರೀತಿಯಲ್ಲಿ ದೇಸಿ ಬೀಜ ಉತ್ಪಾದನೆಗೆ ರೈತರಿಗೆ ಪೋ›ತ್ಸಾಹ ನೀಡಬೇಕು ಹಾಗೂ ಪೂರಕ ವಾತಾವರಣ ರೂಪಿಸಬೇಕು. ಉದ್ದೇಶಿತ ಬೀಜ ಮಸೂದೆ ಸಾಧಕ-ಬಾಧಕ ಬಗ್ಗೆ ಚರ್ಚೆ ನಡೆದು, ಇದರಿಂದ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು.

    8 ಕಬ್ಬಿನ ಬಾಕಿ ನೀಡದಿರುವುದು ಪ್ರಮುಖ ಸಮಸ್ಯೆ. ಕಬ್ಬು ಸರಬರಾಜು ಮಾಡಿದ ರೈತರಿಗೆ ನಿಗದಿತ ಸಮಯದಲ್ಲಿ ಬಾಕಿ ಪಾವತಿಸದಿದ್ದರೆ ಕಾರ್ಖಾನೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ರೀತಿ ಕಬ್ಬು ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಬೇಕು.

    9 ಬರ, ನೆರೆಯ ಪ್ರತಿಕೂಲ ಪ್ರಭಾವ ತಟ್ಟದಂತೆ ರೈತರಿಗೆ ವರ್ಷಪೂರ್ತಿ ಆದಾಯ ಕಲ್ಪಿಸಲು ಸಗಣಿ ಬೆರಣಿಯಿಂದ ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಹಸಿರು ಗೊಬ್ಬರ ಉತ್ಪಾದಿಸುವ, ಸಂಗ್ರಹಿಸುವ ಹಾಗೂ ರಫ್ತು ಮಾಡುವ ವಿಶೇಷ ಆರ್ಥಿಕ ವಲಯಗಳನ್ನು ಸರ್ಕಾರ ರೂಪಿಸಬೇಕು. ಹಸಿರು ಮೂಲಸೌಕರ್ಯಕ್ಕೆ ಒತ್ತು ನೀಡಬೇಕು.

    10 ಹವಾಮಾನ ವೈಪರೀತ್ಯಗಳಿಂದ ಅಕಾಲಿಕ ಮಳೆಯಾಗುತ್ತಿದ್ದು ಇದರಿಂದ ಬಾಧಿತವಾಗದಂತಹ, ಅಲ್ಪಕಾಲೀನ ಬೆಳೆಗಳ ಸಂಶೋಧನೆಗೆ ಆದ್ಯತೆ ನೀಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts