More

    ಕೃಷಿ ಅಭಿವೃದ್ಧಿಗೆ ಸರ್ಕಾರ ಪಣ

    ಶಿಗ್ಲಿ: ರೈತರ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದ್ದು, ಉದ್ಯೋಗ ಖಾತ್ರಿ ಯೋಜನೆ ಮೂಲಕ ಅನ್ನದಾತರ ಬೇಡಿಕೆ ಈಡೇರಿಸಲು ಮುಂದಾಗಿದೆ. ರೈತರು ತಮ್ಮ ಬೇಡಿಕೆಯನ್ನು ಬರೆದು ಆಯಾ ಗ್ರಾಮ ಪಂಚಾಯಿತಿಯಲ್ಲಿಡಲಾದ ಪೆಟ್ಟಿಗೆಯಲ್ಲಿ ಹಾಕಿ ಸರ್ಕಾರದಿಂದ ಸೌಲಭ್ಯ ಪಡೆಯಬಹುದಾಗಿದೆ.

    ರೈತರು ತಮ್ಮ ಹೊಲಗಳಲ್ಲಿ ಯಾವ ಬೆಳೆಗಳನ್ನು ಬೆಳೆಯಲು ಇಚ್ಛಿಸುತ್ತಾರೆ ಹಾಗೂ ಸರ್ಕಾರದಿಂದ ಯಾವ ಸೌಲಭ್ಯಗಳನ್ನು ಬಯಸುತ್ತಾರೆ ಎನ್ನುವ ಬೇಡಿಕೆಗಳ ಪಟ್ಟಿಯನ್ನು ತಯಾರಿಸಿ ಗ್ರಾಮ ಪಂಚಾಯಿತಿಯಲ್ಲಿಡಲಾದ ಪೆಟ್ಟಿಗೆಯಲ್ಲಿ ಹಾಕಬೇಕು. ಪಟ್ಟಿಯಲ್ಲಿ ತಮ್ಮ ಹೆಸರು, ಹೊಲದ ಸರ್ವೆ ನಂಬರ್ ಸೇರಿದಂತೆ ಅಗತ್ಯ ವಿವರ ಬರೆದು ಅಕ್ಟೋಬರ್ 31ರ ಒಳಗಾಗಿ ಹಾಕಬೇಕು.

    ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿರುವ ಹಾಗೂ ಸಣ್ಣ, ಅತಿ ಸಣ್ಣ ರೈತರು ಇದರ ಪ್ರಯೋಜನ ಪಡೆಯಬಹುದು. ಏಪ್ರಿಲ್ 1, 2021ರಿಂದ ಮಾರ್ಚ್ 31, 2022ರ ಅವಧಿಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರು ತಮ್ಮ ವಿವರ ನೀಡಬೇಕು.

    ಶಿಗ್ಲಿ ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ಬೇಡಿಕೆ ಸಲ್ಲಿಸಲು ಪೆಟ್ಟಿಗೆ ಇಡಲಾಗಿದ್ದು, ರೈತರು ಈಗಾಗಲೇ ತಮಗೆ ಅಗತ್ಯವಿರುವ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸುತ್ತಿದ್ದಾರೆ. ಯೋಜನೆ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಗ್ರಾಪಂ ವತಿಯಿಂದ ಊರಲ್ಲಿ ಡಂಗುರ ಹೊಡೆಸಿ, ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲಾಗಿದೆ.

    ಯಾವ ಕಾಮಗಾರಿಗಳು…: ರೈತರು ತಮ್ಮ ಹೊಲಗಳಲ್ಲಿ ಕೃಷಿಭೂಮಿ ಸಮತೋಲನ ಮಾಡಿಕೊಳ್ಳುವುದು, ಇಂಗು ಗುಂಡಿ ನಿರ್ವಣ, ದನದ ಕೊಟ್ಟಿಗೆ ನಿರ್ವಣ, ಕೊಳವೆ ಬಾವಿ ಮರುಪೂರಣ, ಹಂದಿ, ಆಡು, ಕೋಳಿ ಸಾಕಾಣಿಕೆ, ಎರೆಹುಳು ಗೊಬ್ಬರ ತೊಟ್ಟಿ, ಕುರಿ ಶೆಡ್ ನಿರ್ವಣ, ಬದುವು ನಿರ್ವಣ, ಉಳ್ಳಾಗಡ್ಡಿ ಶೇಖರಣೆ ಘಟಕ, ಕಾಂಪೋಸ್ಟ್ ಗುಂಡಿ, ಹಿಪ್ಪುನೇರಳೆ ಘಟಕ ಸ್ಥಾಪನೆ, ಕೆರೆ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಮಾಡಿಕೊಳ್ಳಲು ಸರ್ಕಾರದ ಸಹಾಯಧನ ಪಡೆಯಬಹುದು. ಅಲ್ಲದೆ, ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗು, ಕೋಕೋ, ಕಾಳು ಮೆಣಸು, ವೀಳ್ಯದೆಲೆ ಬೆಳೆಯಲು ಕೂಡ ಸೌಲಭ್ಯ ಪಡೆಯಬಹುದು. ತರಕಾರಿ ಬೆಳೆಗಳಾದ ಟೊಮ್ಯಾಟೊ, ಬದನೆಕಾಯಿ, ಹೂಕೋಸು ಸೇರಿದಂತೆ ಹಲವಾರು ತರಕಾರಿಗಳನ್ನು ಬೆಳೆಯಲು ಕೂಡ ಅನುದಾನ ಪಡೆಯಬಹುದು. ಶೇಂಗಾ, ಗೋವಿನಜೋಳ, ಮೆಣಸಿನಕಾಯಿ, ಜೋಳ, ಗೋಧಿ ಹೆಸರು ಇನ್ನಿತರ ಬೆಳೆಗಳನ್ನು ಬೆಳೆಯಲೂ ಇದರಿಂದ ರೈತರಿಗೆ ಅನುಕೂಲವಾಗಲಿದೆ.

    ರೈತರಿಗೆ ಅನುಕೂಲವಾಗುವಂತಹ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸರ್ಕಾರ ರೈತರಿಂದಲೇ ಬೇಡಿಕೆ ಹಾಗೂ ಸಲಹೆಗಳನ್ನು ಕೇಳಿದೆ. ಈ ಯೋಜನೆಯಡಿ ಒಬ್ಬ ರೈತ ಗರಿಷ್ಠ 2.5 ಲಕ್ಷ ರೂ.ವರೆಗೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ರೈತರು ತಮ್ಮ ಅಗತ್ಯಗಳನ್ನು ಸ್ವಯಂ ಬರೆದು ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ಇಟ್ಟಿರುವ ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಹಾಕಬೇಕು.
    | ಬಿ.ಟಿ. ಅಮ್ಮನವರ, ಶಿಗ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

    ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದು ಸೂಕ್ತವಾಗಿದೆ. ಇದರಿಂದ ರೈತ ಕುಟುಂಬಗಳಿಗೆ ಹೆಚ್ಚು ಅನುಕೂಲವಾಗಲಿದೆ.
    | ಡಿ.ವೈ. ಹುನಗುಂದ, ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ, ಶಿಗ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts