More

    ಕೃಷಿಯೇತರ ಚಟುವಟಿಕೆಗೂ ಆದ್ಯತೆ ನೀಡಿ, ಪಶು ಸಂಗೋಪನೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ನಾಗರಾಜ ಸಲಹೆ

    ನೆಲಮಂಗಲ: ರೈತರು ಕೃಷಿ ಜತೆಗೆ ಕೃಷಿಯೇತರ ಚಟುವಟಿಕೆಗೂ ಆದ್ಯತೆ ನೀಡಿದರೆ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಪಶು ಸಂಗೋಪನೆ ಇಲಾಖೆಯ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಡಾ. ನಾಗರಾಜ ತಿಳಿಸಿದರು.

    ನಗರಸಭೆ ವ್ಯಾಪ್ತಿಯ ಬ್ಯಾಡರಹಳ್ಳಿ ಬಳಿಯ ಬಮುಲ್ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಕೃಷಿ ಇಲಾಖೆ ಹಾಗೂ ಪಶುಸಂಗೋಪನೆ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಹಸು, ಕೋಳಿ, ಮೇಕೆ-ಕುರಿ ಸಾಕಣೆ ಕುರಿತು ರೈತರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹೈನುಗಾರಿಕೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ರೈತರು ಪರಿಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಪಶುಪಾಲನೆ ಹಾಗೂ ಕೋಳಿ, ಮೇಕೆ-ಕುರಿ ಸಾಕಣೆ ಮೂಲಕ ಅರ್ಥಿಕವಾಗಿ ಸಬಲರಾಗಬಹುದು. ಕಿಸಾನ್ ಕ್ರೆಡಿಟ್ ಕ್ರಾರ್ಡ್ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿದರಲ್ಲಿ 1.5 ಲಕ್ಷ ರೂ.ವರೆಗೂ ಸಾಲ ನೀಡಲಾಗುತ್ತಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಳಿ, ಮೇಕೆ-ಕುರಿ ಮಾಂಸವನ್ನು ಮೌಲ್ಯವರ್ಧಿತವನ್ನಾಗಿ ಪರಿವರ್ತಿಸಿ ರೈತರು ಸ್ವಂತ ಉದ್ಯಮ ಆರಂಭಿಸಲು ಶೇ. 50 ಸಹಾಯ ಧನದಲ್ಲಿ ಸುಮಾರು 1 ಕೋಟಿ ರೂ. ವರೆಗೂ ಸಾಲ ನೀಡಲಾಗುವುದು ಎಂದರು.

    ತಾಲೂಕು ಸಹಾಯಕ ನಿರ್ದೇಶಕ ಡಾ. ಎಚ್. ಸಿದ್ದಪ್ಪ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಬೇಸಾಯದ ಜತೆ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ಕೋಳಿ, ಮೇಕೆ, ಕುರಿ ಸಾಕಣೆಗೂ ಒತ್ತು ನೀಡಬೇಕು. ತಾಲೂಕಿನಲ್ಲಿ ಹೆಚ್ಚಿನವರು ಹೈನುಗಾರಿಕೆ ಮಾತ್ರ ಆಶ್ರಯಿಸಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು ಎಂದರು. ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಅಧಿಕಾರಿಗಳು ರೈತರಿಗೆ ತಲುಪಿಸಲು ಮುಂದಾಗಬೇಕು. ರೈತರಿಗೆ ಅನುಕೂಲವಾಗಲು ಸರ್ಕಾರ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸಿದೆ. ಮಾಂಸ ಸಂಸ್ಕರಣ ಉತ್ಪನ್ನಗಳಿಗೆ ಸರ್ಕಾರ ಸಾಕಷ್ಟು ಒತ್ತು ನೀಡುತ್ತಿದ್ದು, ರೈತರು ಅನುಕೂಲಪಡೆದುಕೊಳ್ಳಬೇಕು. ಹೈನುಗಾರಿಕೆ, ಕೋಳಿ, ಮೇಕೆ ಕುರಿ ಸಾಕಣೆ ಕುರಿತಂತೆ ತಾಲೂಕಿನ 100ಕ್ಕೂ ಹೆಚ್ಚು ರೈತರಿಗೆ 2 ದಿನಗಳ ಕಾಲ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
    ಗೋಶಾಲೆ ನಿರ್ಮಾಣ: ತಾಲೂಕಿನ ಕೊಡಿಗೇಹಳ್ಳಿಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಗೋ ರಕ್ಷಣೆ ಹಾಗೂ ಗೋವುಗಳ ಆರೈಕೆಗೆ ಗೋಶಾಲೆ ನಿರ್ಮಾಣ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಜೂ.15ರಂದು ಪಶುಸಂಗೋಲನ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿ ವಿವಿಧ ಗಣ್ಯರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈಗಾಗಲೇ ತಾಪಂ ವಿಶೇಷ ಯೋಜನೆಯಡಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮಾಡಲಾಗುತ್ತಿದೆ ಎಂದು ತಾಲೂಕು ಸಹಾಯಕ ನಿರ್ದೇಶಕ ಡಾ.ಎಚ್. ಸಿದ್ದಪ್ಪ ಮಾಹಿತಿ ನೀಡಿದರು.
    ಮುಖ್ಯ ಪಶುವೈದ್ಯಾಧಿಕಾರಿ ಡಾ. ಹೊರಕೇರಪ್ಪ, ಎಸ್. ವೈದ್ಯರಾದ ರಾಜಣ್ಣ, ಸುಪ್ರಿಯಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts