More

    ಕೂಡ್ಲಿಮಠ ವಿರುದ್ಧದ ಹೋರಾಟದಲ್ಲಿ ಜಾತಿ ಎಳೆ ತಂದಿರುವುದು ಸರಿಯಲ್ಲ; ರೈತ ಸಂಘದ ಮೇಲಿನ ಆರೋಪದಿಂದ ನೋವು

    ಸಾಗರ: ತಾಲೂಕು ರೈತ ಸಂಘ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಕೆಲಸ ಮಾಡುತ್ತಿದೆ. ಯಾವುದೋ ಒಂದು ಮಠ, ಜನಾಂಗವನ್ನು ಗುರಿಯಾಗಿಸಿಕೊಂಡು ಹೋರಾಟ ಮಾಡಿಲ್ಲ. ತಾಳಗುಪ್ಪದ ಕೂಡ್ಲಿಮಠ ಹಿತರಕ್ಷಣಾ ಸಮಿತಿ ಹೆಸರಿನಲ್ಲಿ ಕೆಲವರು ರೈತ ಸಂಘದ ವಿರುದ್ಧ ಮಾಡಿರುವ ಪ್ರತಿಭಟನೆಯಲ್ಲಿ ಜಾತಿ ಎಳೆದು ತಂದಿರುವುದು ನೋವುಂಟು ಮಾಡಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಶಿರವಾಳ ಬೇಸರ ವ್ಯಕ್ತಪಡಿಸಿದರು
    ಕೂಡ್ಲಿಮಠ ಶ್ರೀಗಳು ಮಠದ ಜಮೀನಿನನ್ನು ಲೇಔಟ್ ಆಗಿ ಪರಿವರ್ತನೆ ಮಾಡುವ ತರಾತುರಿಯಲ್ಲಿ ಎಂಟು ದಶಕಗಳಿಂದ ಅದೇ ಜಮೀನಿನಲ್ಲಿ ವಾಸವಿದ್ದ ಒಕ್ಕಲಿಗ ಮತ್ತು ಮಡಿವಾಳ ಸಮಾಜಕ್ಕೆ ಸೇರಿದ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದರು. ಇದರ ವಿರುದ್ಧ ರೈತ ಸಂಘ ಪ್ರತಿಭಟನೆ ನಡೆಸಿ, ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸಿದೆಯೆ ವಿನಾ ವೈಯಕ್ತಿಕ ಉದ್ದೇಶ ಇಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
    ತಾಳಗುಪ್ಪ ಕೂಡ್ಲಿಮಠದ ಸಂಪೂರ್ಣ ಆಸ್ತಿ ಮಠದ್ದೋ ಅಥವಾ ಸ್ವಾಮೀಜಿಯದ್ದೋ? ಶ್ರೀ ಮಠದ ಆಸ್ತಿಯನ್ನು ಲೇಔಟ್ ಮಾಡಿ ಮಾರಾಟ ಮಾಡಲು ಮುಂದಾಗಿರುವುದಕ್ಕೆ ಭಕ್ತಮಂಡಳಿ ಅನುಮತಿ ನೀಡಿದೆಯಾ? ಮಠದ ಆಸ್ತಿಯನ್ನು ಭೂಪರಿವರ್ತನೆ ಮಾಡಿ ಸ್ವಾಮೀಜಿ ಅವರು ತಮ್ಮ ಹೆಸರಿಗೆ ಪರಿವರ್ತನೆ ಮಾಡಿಸಿಕೊಂಡದ್ದು ಎಷ್ಟು ಸರಿ? ಮಠದ ಆಸ್ತಿಯನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರದ ಇನ್ನೊರ್ವ ವ್ಯಕ್ತಿಗೆ ಸ್ವಾಮಿಗಳು ಜಿಪಿಎ ಮಾಡಿ ಕೊಟ್ಟಿರುವುದನ್ನು ಭಕ್ತಾದಿಗಳ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಶ್ನಿಸಿದರು.
    ಮೂರು ತಲೆಮಾರುಗಳಿಂದ ಒಕ್ಕಲಿಗ ಮತ್ತು ಮಡಿವಾಳ ಜನಾಂಗದವರು ಇಲ್ಲಿ ವಾಸವಿದ್ದಾರೆ. ನ್ಯಾಯಾಲಯದ ನಿರ್ದೇಶನವನ್ನು ಪಡೆಯದೆ ಒಕ್ಕಲೆಬ್ಬಿಸಲು ಮುಂದಾಗಿರುವ ಕ್ರಮ ಕಾನೂನು ಬಾಹಿರವಾಗಿದೆ. ನಕಾಶೆ ಕಂಡ ರಸ್ತೆಗಳನ್ನು, ಸ್ಮಶಾನಕ್ಕೆ ಹೋಗುವ ದಾರಿಯನ್ನು ಮುಚ್ಚಿರುವುದು, ಬಾವಿ ಮುಚ್ಚಿದ್ದು ಕಾನೂನು ಬಾಹಿರ ಎಂದು ಪ್ರತಿಭಟನೆ ನಡೆಸಿದವರಿಗೆ ಅರ್ಥವಾಗದೆ ಇರುವುದು ಬೇಸರದ ಸಂಗತಿ. ಹಿಂದಿನ ಸ್ವಾಮಿಗಳು ಗೌರವದಿಂದ ನಡೆಸಿಕೊಂಡಿದ್ದಾಗ್ಯೂ ಈಗಿನ ಸ್ವಾಮಿಗಳು ಸ್ಥಳೀಯ ನಿವಾಸಿಗಳಿಗೆ ಕಿರುಕುಳ ನೀಡುತ್ತಿರುವ ಉದ್ದೇಶವಾದರೂ ಏನು ಪ್ರಶ್ನಿಸಿದರು.
    ಸರ್ಕಾರದಿಂದ ಮಠಕ್ಕೆ 1 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಅದನ್ನು ಯಾವುದಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವುದನ್ನು ಸ್ವಾಮೀಜಿಗಳು ಭಕ್ತರಿಗೆ ಸ್ಪಷ್ಟಪಡಿಸಬೇಕು. ಮಡಿವಾಳ ಸಮುದಾಯದವರು ಮಠಕ್ಕೆ 5 ಎಕರೆ ಜಮೀನು ಕೊಟ್ಟಿದ್ದಾರೆ. ಈಗ ಮಡಿವಾಳ ಜನಾಂಗವನ್ನೇ ಸ್ವಾಮಿಗಳು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಮಠದ ಆಡಳಿತ ಮಂಡಳಿ ಜಮೀನು ಕೊಟ್ಟವರಿಗೆ ಕೊಟ್ಟ ಜಮೀನು ವಾಪಸ್ ಕೊಡುವತ್ತ ಗಮನ ಹರಿಸಲಿ ಎಂದರು.
    ಬೃಹತ್ ಪಾದಯಾತ್ರೆ: ಯಾವುದೇ ಕಾರಣಕ್ಕೂ ಮಡಿವಾಳ ಮತ್ತು ಒಕ್ಕಲಿಗ ಸಮಾಜದ ರೈತರನ್ನು ಅಲ್ಲಿಂದ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅಧಿಕಾರಿಗಳು ಮೂರು ದಿನದಲ್ಲಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದರು. ತಕ್ಷಣ ಕೊಟ್ಟ ಭರವಸೆ ಈಡೇರಿಸದೆ ಹೋದಲ್ಲಿ ತಾಳಗುಪ್ಪದಿಂದ ಸಾಗರದವರೆಗೆ ರೈತಸಂಘ ಬೃಹತ್ ಪಾದಯಾತ್ರೆ ನಡೆಸಿ ನೊಂದ ರೈತರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸುತ್ತದೆ ಎಂದು ದಿನೇಶ್ ಶಿರವಾಳ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts