More

    ಕುಸ್ತಿ ಹಬ್ಬ ಯಶಸ್ಸಿಗೆ ಸಹಕರಿಸಿ

    ಧಾರವಾಡ: ಫೆ. 22 ರಿಂದ ನಗರದಲ್ಲಿ ನಡೆಯಲಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಆಗಮಿಸುತ್ತಿರುವುದು ಹೆಮ್ಮೆಯ ವಿಷಯ. ಕ್ರೀಡಾಪಟುಗಳು ಸೇರಿ ಎಲ್ಲರಿಗೂ ಉತ್ತಮ ಸೌಕರ್ಯ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯ. ಅಚ್ಚುಕಟ್ಟಾಗಿ ಕುಸ್ತಿ ಪಂದ್ಯಾವಳಿ ನಡೆಯಲು ವಿದ್ಯಾರ್ಥಿ ಸ್ವಯಂ ಸೇವಕರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

    ಕರ್ನಾಟಕ ಕಾಲೇಜಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕುಸ್ತಿ ಹಬ್ಬದ ಕುರಿತು ಮಾಹಿತಿ ನೀಡಿದರು. ಸ್ವಯಂ ಸೇವಕರು ವಿವಿಧ ಉಪ ಸಮಿತಿಗಳೊಂದಿಗೆ ಕೆಲಸ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದಂತೆ ಕುಸ್ತಿ ಹಬ್ಬದಲ್ಲೂ ಭಾಗವಹಿಸಿ ನಿಯೋಜಿಸುವ ಸಮಿತಿಗಳೊಂದಿಗೆ ಅಚ್ಚುಕಟ್ಟಾಗಿ ಕೆಲಸ ಮಾಡಿ ಯಶಸ್ವಿಗೊಳಿಸಬೇಕು. ಭಾರತೀಯ ಕುಸ್ತಿ ಶೈಲಿಯನ್ನು ಹೊಸ ಪೀಳಿಗೆಯ ಯುವಕರಿಗೆ ಪರಿಚಯಿಸಲು ಈ ಹಬ್ಬ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಬೇಕು ಎಂದರು.

    ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಮಾತನಾಡಿ, ಕುಸ್ತಿ ಪಂದ್ಯಾವಳಿಗೆ ಕೆಸಿಡಿ ಆವರಣದಲ್ಲಿ 3 ಅಖಾಡಗಳನ್ನು ನಿರ್ವಿುಸಲಾಗುತ್ತಿದೆ. ಈಗಾಗಲೇ ಹಲವು ಉಪ ಸಮಿತಿಗಳನ್ನು ರಚಿಸಲಾಗಿದೆ. ಎನ್​ಎಸ್​ಎಸ್ ಘಟಕದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಭಾಗವಹಿಸಿ ನಿಯೋಜಿಸುವ ಸಮಿತಿಯೊಂದಿಗೆ ಕೆಲಸ ಮಾಡಬೇಕು ಎಂದರು.

    ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಫ್. ಚಾಕಲಬ್ಬಿ ಮಾತನಾಡಿ, ಕರ್ನಾಟಕ ಕಾಲೇಜು ಹಲವು ಐತಿಹಾಸಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಇದೀಗ ಕರ್ನಾಟಕ ಕುಸ್ತಿ ಹಬ್ಬ ಇದೇ ಆವರಣದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಕಾಲೇಜು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

    ಕರ್ನಾಟಕ ವಿವಿಯ ಎನ್​ಎಸ್​ಎಸ್ ಸಂಯೋಜನಾಧಿಕಾರಿ ಡಾ.ಎಂ.ಬಿ. ದಳಪತಿ, ಉಪ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಎನ್​ಎಸ್​ಎಸ್ ಅಧಿಕಾರಿಗಳಾದ ಡಾ.ಬಿ.ಎಸ್. ಭಜಂತ್ರಿ, ಡಾ.ಎಸ್.ಎ. ಕೋಳೂರ, ಇತರರು ಇದ್ದರು.

    ಸಿದ್ಧತೆ ಪರಿಶೀಲನೆ

    ಫೆ. 22ರಿಂದ 25ರವರೆಗೆ ನಗರದಲ್ಲಿ ನಡೆಯುವ ಕರ್ನಾಟಕ ಕುಸ್ತಿ ಹಬ್ಬದ ಸಿದ್ಧತೆಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ ಅವರು ಸೋಮವಾರ ಸಂಜೆ ಕೆಸಿಡಿ ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಮೈದಾನದಲ್ಲಿ ನಿರ್ವಿುಸಲಾಗುತ್ತಿರುವ 3 ಕುಸ್ತಿ ಅಖಾಡಗಳು, ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ನಿರ್ವಿುಸಲಾಗುತ್ತಿರುವ ಆಹಾರ ಮಳಿಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ಆವರಣದಲ್ಲಿ ನಿರ್ವಿುಸಲಾಗುತ್ತಿರುವ ಭೋಜನ, ಉಪಾಹಾರ ಪ್ರಾಂಗಣದ ಸ್ಥಳಗಳಿಗೆ ಭೇಟಿ ನೀಡಿ, ಸಿದ್ಧತೆಗಳನ್ನು ವೀಕ್ಷಿಸಿದರು. ಅಚ್ಚುಕಟ್ಟಾಗಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಲು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts