More

    ಕುರಿಗೆ ಆಹಾರವಾಯ್ತು ಮೆಕ್ಕೆಜೋಳ

    ರಾಣೆಬೆನ್ನೂರ: ಕೆಲ ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಕೆಲವಡೆ ಮೆಕ್ಕೆಜೋಳ ಬೆಳೆ ಸಂಪೂರ್ಣ ಕೊಳೆತು ಹೋಗಿದ್ದು, ಅಳಿದುಳಿದ ಬೆಳೆಯನ್ನು ರೈತರು ಕುರಿ, ಮೇಕೆಗಳಿಗೆ ಮೇಯಲು ಬಿಟ್ಟಿದ್ದಾರೆ.

    ತಾಲೂಕಿನ ಕುಪ್ಪೇಲೂರ, ಕೋಟಿಹಾಳ, ಲಿಂಗದಹಳ್ಳಿ, ನಿಟ್ಟೂರ, ಅಂತರವಳ್ಳಿ, ಹಿರೇಮಾಗನೂರ, ಬಡಾಸಂಗಾಪುರ ಸೇರಿ ಸುತ್ತಲಿನ ಗ್ರಾಮಸ್ಥರು ಸಾವಿರಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಬೆಳೆ ಕೂಡ ಆರಂಭದಲ್ಲಿ ಚೆನ್ನಾಗಿಯೆ ಬಂದಿತ್ತು. ಆದರೆ, 15 ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ತೇವಾಂಶ ಹೆಚ್ಚಳವಾಗಿ ಮೆಕ್ಕೆಜೋಳ ಬೆಳೆ ಕಂದು ಬಣ್ಣಕ್ಕೆ ತಿರುಗಿದೆ.

    ರೈತರು ಮಳೆ ನಿಂತ ಬಳಿಕ ಯೂರಿಯಾ ಗೊಬ್ಬರ ಹಾಕಿದ್ದಾರೆ. ಆದರೂ ಮೆಕ್ಕೆಜೋಳ ಬೆಳೆ ಬೆಳೆಯುವ ಬದಲು ಸಂಪೂರ್ಣ ಕೊಳೆಯಲು ಆರಂಭಿಸಿದೆ. ಆದ್ದರಿಂದ ರೈತರು ತಮ್ಮ ಅಕ್ಕಪಕ್ಕದ ಗ್ರಾಮಗಳಲ್ಲಿರುವ ಕುರಿಗಾರನ್ನು ಕರೆಯಿಸಿ ಕುರಿಗಳನ್ನು ಜಮೀನಿನಲ್ಲಿ ತಂದು ಬಿಟ್ಟು ಮೇಯಿಸಲು ಮುಂದಾಗಿದ್ದಾರೆ.

    ಕುರಿಗಳು ಜಮೀನಿನಲ್ಲಿ ಮೇಯಲು ಬಂದಾಗ ಮೂತ್ರ ವಿಸರ್ಜನೆ ಹಾಗೂ ಹಿಕ್ಕಿ ಹಾಕಿದರೆ, ಜಮೀನುಗಳು ಮರಳಿ ಫಲವತ್ತತೆ ಹೊಂದಲಿದೆ. ಇಲ್ಲವಾದರೆ ಮತ್ತೆ ಜಮೀನನ್ನು ಹಸನು ಮಾಡಿ ಗೊಬ್ಬರ ಹಾಕಿ ಬಿತ್ತನೆ ಮಾಡಬೇಕಾದರೆ, ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ರೈತರು ಕುರಿ ಮೇಯಿಸಲು ಬಿಟ್ಟಿದ್ದಾರೆ.

    ಈ ಭಾಗದಲ್ಲಿ ಮೆಕ್ಕೆಜೋಳ ಇಳುವರಿ ಉತ್ತಮವಾಗಿ ಬರುವ ಕಾರಣ ಹೆಚ್ಚಿನ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಎಕರೆಗೆ 15ರಿಂದ 20 ಸಾವಿರ ರೂ. ಖರ್ಚು ಮಾಡಿದ್ದಾರೆ. ಆದರೀಗ ನಿರಂತರ ಮಳೆಯಿಂದ ಬೆಳೆ ಹಾನಿಯಾಗಿದೆ. ಆದ್ದರಿಂದ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ರೈತರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೀಗ ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಬೆಳವಣಿಗೆ ನಿಲ್ಲಿಸಿದ ಕಾರಣ ಕುಪ್ಪೇಲೂರ ಸೇರಿ ಸುತ್ತಲಿನ ಗ್ರಾಮಗಳ ರೈತರು ಕುರಿ ಮೇಯಿಸಲು ಬಿಟ್ಟಿದ್ದಾರೆ. ಸರ್ಕಾರ ರೈತರ ಸ್ಥಿತಿ ಕುರಿತು ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕು.
    | ರಮೇಶ ಸಣ್ಣಯಲ್ಲಪ್ಪನವರ, ಕುಪ್ಪೇಲೂರ ಗ್ರಾಮದ ರೈತ

    ರೈತರ ಬೆಳೆ ಹಾನಿ ಕುರಿತು ಸರ್ವೆ ಮಾಡಲಾಗಿದೆ. ಅವರಿಗೆ ಪರಿಹಾರ ನೀಡುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

    | ಶಂಕರ ಜಿ.ಎಸ್., ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts