More

    ಕುರಿಗಳ ಸಂತೆಯಲ್ಲಿ ಭರ್ಜರಿ ವಹಿವಾಟು

    ಕೋಲಾರ: ಲಾಕ್‌ಡೌನ್ ಅನ್‌ಲಾಕ್ 4.0 ನಂತರ ಜಿಲ್ಲೆಯ ಕೋಲಾರ-ಶ್ರೀನಿವಾಸಪುರ ರಸ್ತೆಯ ರೋಜರಪಲ್ಲಿಯಲ್ಲಿ ಬುಧವಾರ 5 ತಿಂಗಳ ನಂತರ ನಡೆದ ಕುರಿಗಳ ಸಂತೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ.

    ಕರೊನಾ ಹಿನ್ನೆಲೆಯಲ್ಲಿ ಮಾ. 24ರಿಂದ ಲಾಕ್‌ಡೌನ್ ಘೋಷಣೆಯಾದ ನಂತರ ಜಿಲ್ಲಾದ್ಯಂತ ವಾರದ ಸಂತೆ, ಜಾತ್ರೆ ನಿಷೇಧಿಸಲಾಗಿತ್ತು. ಕೇಂದ್ರ ಸರ್ಕಾರ ಲಾಕ್‌ಡೌನ್ ಬಹುತೇಕ ಹಿಂಪಡೆದಿದ್ದು, ಪರಿಷ್ಕೃತ ಮಾರ್ಗಸೂಚಿ ಸೆಪ್ಟೆಂಬರ್ 1ರಿಂದ ಅನ್ವಯಿಸುವಂತೆ ಅನುಷ್ಠಾನಕ್ಕೆ ಬಂದಿದೆ.

    5 ತಿಂಗಳು ನಿಂತು ಹೋಗಿದ್ದ ಸಂತೆಗೂ ಅಲ್‌ಲಾಕ್ ನಂತರ ಚಾಲನೆ ಸಿಕ್ಕಿದ್ದು, ಜಿಲ್ಲೆಯಲ್ಲಿ ಮೊದಲಿಗೆ ಶ್ರೀನಿವಾಸಪುರ ತಾಲೂಕಿನ ರೋಜರಪಲ್ಲಿಯಲ್ಲಿ ನಡೆದ ವಾರದ ಸಂತೆಯಲ್ಲಿ ಕುರಿಗಳು ಭರ್ಜರಿ ವ್ಯಾಪಾರ ಕಂಡಿವೆ. ಕೋಲಾರ, ಚಿಕ್ಕಬಳ್ಳಾಪುರ, ಮುಳಬಾಗಿಲು, ಬಂಗಾರಪೇಟೆ ಇನ್ನಿತರ ಕಡೆಗಳಿಂದ ಕುರಿ ಸಾಕಾಣಿಕೆದಾರರು ಸಂತೆಗೆ ಸುಮಾರು 15,000ಕ್ಕೂ ಅಧಿಕ ಕುರಿಗಳನ್ನು ತಂದಿದ್ದರು.

    ಜಿಲ್ಲೆಯ ವಿವಿಧ ಕಡೆಯಿಂದ, ನೆರೆಯ ವಿಜಯಪುರ, ಚಿಂತಾಮಣಿ, ಬಾಗೇಪಲ್ಲಿ, ಚೇಳೂರು, ಚಿಕ್ಕಬಳ್ಳಾಪುರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೃಷ್ಣಗಿರಿಯಿಂದ ಖರೀದಿದಾರರು ಬಂದಿದ್ದರು. ರಸ್ತೆಯುದ್ದಕ್ಕೂ ವಾಹನ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
    ಎರಡೂವರೆ ತಿಂಗಳ ಕುರಿಮರಿ ಗರಿಷ್ಠ 6500 ರೂ.ಗೆ ಮಾರಾಟ ಕಂಡರೆ ಮಾಂಸದ ಕುರಿಗಳು 5000 ರೂ.ನಿಂದ 35,000 ರೂ.ವರೆಗೆ ಮಾರಾಟ ಆಗಿವೆ. ಕುರಿಗಳ ಸಂತೆಯಲ್ಲಿ ಮಧ್ಯವರ್ತಿಗಳು ಮಾರಾಟಗಾರ ಮತ್ತು ಖರೀದಿದಾರರಿಂದ ಭರ್ಜರಿ ಕೊಯ್ಲು ಮಾಡಿಕೊಂಡಿದ್ದಾರೆ. ಕುರಿ ವ್ಯಾಪಾರದ ನಡುವೆ ಕರೊನಾ ಮಾರ್ಗಸೂಚಿ ಪಾಲನೆ ಗಾಳಿಗೆ ತೂರಿತ್ತು, ಅನೇಕರು ಮಾಸ್ಕ್ ಧರಿಸದೆಯೇ ಬಂದಿದ್ದರು.

    ನವಿಲುಗಳ ಓಡಾಟ: ಕುರಿಗಳ ಸಂತೆಯ ಜನಜಂಗುಳಿ ನಡುವೆಯೇ ಅನತಿ ದೂರದಲ್ಲಿ ಬಯಲಿನಲ್ಲಿ ನವಿಲುಗಳೆರಡು ಸ್ವಚ್ಛಂದವಾಗಿ ವಿಹರಿಸುತ್ತಾ ಹುಳು ಹುಪ್ಪಡಿಗಳನ್ನು ತಿನ್ನುತ್ತಿದ್ದದ್ದು ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts