More

    ಕುಮಟಾದಿಂದ ಕಣ್ಮರೆಯಾಗಲಿದೆ ಕೃಷಿ ಡಿಪ್ಲೊಮಾ ಕಾಲೇಜ್

    ಶಂಕರ ಶರ್ಮಾ ಕುಮಟಾ

    ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದ ಆವಾರದಲ್ಲಿರುವ ಕೃಷಿ ಡಿಪ್ಲೊಮಾ ಕಾಲೇಜ್ ಅನ್ನು ಬೇರೆಡೆ ವಿಲೀನಗೊಳಿಸುವ ವಿಷಯ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಗೊಂಡಿದ್ದು, ಆಡಳಿತಾತ್ಮಕ ಒಪ್ಪಿಗೆಗೆ ಹೆಜ್ಜೆಯಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

    2010ರಲ್ಲಿ ಇಲ್ಲಿನ ನೆಲ್ಲಿಕೇರಿ ಪ್ರದೇಶದಲ್ಲಿ ಸುಮಾರು 62 ಎಕರೆ ಜಾಗವನ್ನು ರಾಜ್ಯ ಸರ್ಕಾರವು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ 10 ವರ್ಷಗಳ ಗುತ್ತಿಗೆಯಡಿ ಹಸ್ತಾಂತರಿಸಿತ್ತು. ದಿನಕರ ಶೆಟ್ಟಿ ಶಾಸಕರಾಗಿದ್ದ ಈ ಅವಧಿಯಲ್ಲಿ ಈ ಜಾಗದಲ್ಲಿ ಕೃಷಿ ಸಂಶೋಧನಾ ಕೇಂದ್ರ ಉದ್ಘಾಟನೆಗೊಂಡಿತ್ತು. ನಂತರ, ಇಲ್ಲಿ ಕೃಷಿ ಡಿಪ್ಲೊಮಾ ಕಾಲೇಜಿಗಾಗಿ ಪ್ರಸ್ತಾವನೆಯೂ ಸಲ್ಲಿಕೆಯಾಗಿದ್ದರೂ ಆಗ ಮಂಜೂರಾತಿ ಸಿಕ್ಕಿರಲಿಲ್ಲ.

    ಇದಾದ ನಂತರ, ಶಾರದಾ ಶೆಟ್ಟಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಪ್ರಯತ್ನದಿಂದ 2014ರಲ್ಲಿ ಕೃಷಿ ಡಿಪ್ಲೊಮಾ ಕಾಲೇಜು ಆರಂಭಗೊಂಡಿತು. ಕಳೆದ 2-3 ವರ್ಷದಿಂದ ಜಿಲ್ಲೆಯ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಇಲ್ಲಿ ಕಲಿತಿದ್ದಾರೆ. ಆದರೆ, ಈಗ ಮುಂದಿಟ್ಟಿರುವ ಪ್ರಸ್ತಾಪದ ಪ್ರಕಾರ ಕಾಲೇಜು ಬೇರೆಡೆ ವಿಲೀನಗೊಂಡರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.

    ಕೊರತೆಗಳ ಗೂಡು: ಕೃಷಿ ಡಿಪ್ಲೊಮಾ ಕಾಲೇಜಿಗೆ ಸಿಬ್ಬಂದಿ ಹಾಗೂ ಇತರ ಮೂಲಕ ಸೌಕರ್ಯಗಳ ದೊಡ್ಡ ಕೊರತೆ ಇದೆ. ಕಾಲೇಜಿಗೆ ಕನಿಷ್ಠ 6 ಮಂದಿ ವಿಷಯವಾರು ಅಧ್ಯಾಪಕರು ಇರಬೇಕು. ಒಬ್ಬರೂ ಇಲ್ಲ. ವಸತಿ ಗೃಹಕ್ಕೆ ವಾಚ್​ವುನ್ ಕೂಡ ಇಲ್ಲ. ಕಾಲೇಜು ಹೇಗೆ ನಡೆಯುತ್ತಿದೆ ಎನ್ನ್ನುವುದು ಸೋಜಿಗದ ವಿಷಯವಾಗಿದೆ. ಧಾರವಾಡ ಕೃಷಿ ವಿವಿಗೆ ನೀಡಲಾದ ಜಾಗದ ಲೀಸ್ ಅವಧಿ ಈ ವರ್ಷವೇ ಮುಗಿದಿದ್ದು ನವೀಕರಣ ಆಗಬೇಕಿದೆ.

    ರಾಜ್ಯ ಇತರ ಕೃಷಿ ವಿವಿಗಳಡಿ ಒಂದೆರಡು ಕೃಷಿ ಡಿಪ್ಲೊಮಾ ಕಾಲೇಜುಗಳು ಮಾತ್ರ ಇದ್ದರೆ ಧಾರವಾಡ ಕೃಷಿ ವಿವಿ ಅಡಿಯಲ್ಲಿ 8 ಕೃಷಿ ಡಿಪ್ಲೊಮಾ ಕಾಲೇಜುಗಳಿವೆ. ಸರ್ಕಾರ ಒಂದು ವಿವಿಗೆ ಎರಡು ಕಾಲೇಜಿಗೆ ಸಾಲುವಷ್ಟು ಮಾತ್ರ ಪೂರ್ಣ ಅನುದಾನ ಕೊಡುತ್ತದೆ. ಈ ವರ್ಷದಿಂದ ನೌಕರರ ಸಂಬಳ ಹೊರತುಪಡಿಸಿ ಬೇರೇನೂ ಕೊಡುವುದಿಲ್ಲ ಎಂದು ಸುತ್ತೋಲೆಯನ್ನೇ ಹೊರಡಿಸಿದೆ. ಉಳಿದುದೆಲ್ಲವನ್ನೂ ವಿಶ್ವವಿದ್ಯಾಲಯವೇ ತನ್ನ ಆಂತರಿಕ ಸಂಪನ್ಮೂಲಗಳಿಂದ ನಿಭಾಯಿಸಬೇಕಾಗಿದೆ. ಕುಮಟಾ ಕೃಷಿ ಡಿಪ್ಲೊಮಾ ಕಾಲೇಜಿಗೆ ಪ್ರತಿವರ್ಷ ಕನಿಷ್ಠ 18 ಲಕ್ಷ ರೂ. ಬಜೆಟ್ ಇರುತ್ತಿ್ತ್ತು. ಈ ಬಾರಿ ಕೇವಲ 3 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಪ್ರೋತ್ಸಾಹಧನಕ್ಕೂ ಕತ್ತರಿ ಬಿದ್ದಿದ್ದು, ಬಡ ಹಾಗೂ ವಿಶೇಷ ಅರ್ಹತೆಯ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಸಿಗದಂತಾಗಿದೆ.

    ನಾಮ್ ಕೇ ವಾಸ್ತೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ
    ಧಾರವಾಡ ಕೃಷಿ ವಿವಿಯಲ್ಲಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಜಿಲ್ಲಾ ಕಾರ್ಯಾಲಯವೂ ಇಲ್ಲಿದೆ. ಇಲ್ಲಿ ಮಂಜೂರಾತಿ ಇರುವ ಪ್ರಕಾರ 6 ಮಂದಿ ಕೃಷಿ ವಿಜ್ಞಾ ನಿಗಳು ಇರಬೇಕು. ಒಬ್ಬರೂ ಇಲ್ಲ. ಇತರ ಸಿಬ್ಬಂದಿಯೂ ಇಲ್ಲ. ಓಡಾಡಲು ವಾಹನ ಸಹಿತ ಯಾವ ಸೌಲಭ್ಯವೂ ಇಲ್ಲ. ವಿಶ್ವವಿದ್ಯಾಲಯದ ಸಂಶೋಧನೆಗಳು ಹಾಗೂ ಹೊಸ ವಿಷಯಗಳ ಬಗ್ಗೆ ಜಿಲ್ಲಾದ್ಯಂತ ಕ್ಷೇತ್ರ ಪ್ರಾತ್ಯಕ್ಷಿಕೆ, ತರಬೇತಿ, ಮಾಹಿತಿ ನೀಡಬೇಕಾದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ನಾಮ್ ಕೇ ವಾಸ್ತೆ ಎಂಬಂತಿದೆ. ಒಂದೊಮ್ಮೆ ಇಲ್ಲಿ ಸರ್ಕಾರಿಂದ ಮಂಜೂರಾತಿ ಇರುವ ವಿಜ್ಞಾ ನಿಗಳನ್ನು ಒದಗಿಸಿದ್ದರೆ ಕೃಷಿ ಡಿಪ್ಲೊಮಾ ಕಾಲೇಜಿನ ತರಗತಿ ನಡೆಸಲಾದರೂ ಅನುಕೂಲವಾಗಿರುತ್ತಿತ್ತು.

    ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ, ಕೃಷಿ ಡಿಪ್ಲೊಮಾ ಕಾಲೇಜ್ ಪ್ರಾಚಾರ್ಯ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಜಿ.ವಿ.ನಾಯಕ ಅವರು ವಿಜಯವಾಣಿಗೆ ಪ್ರತಿಕ್ರಿಯಿಸಿ, ‘ಬೋಧಕರು, ಸಿಬ್ಬಂದಿ ಹಾಗೂ ಇತರ ಅತ್ಯವಶ್ಯಕ ಸೌಲಭ್ಯಗಳನ್ನು ಪೂರೈಸಲಾಗದ ಅನಿವಾರ್ಯತೆಯಿಂದ ಕೊಣ್ಣೂರು, ಜಮಖಂಡಿ ಹಾಗೂ ಕುಮಟಾದ ಕೃಷಿ ಡಿಪ್ಲೊಮಾ ಕಾಲೇಜುಗಳನ್ನು ಬೇರೆಡೆ ಸಂಯೋಜಿಸುವ ಬಗ್ಗೆ ಕಳೆದ ಮಾರ್ಚ್​ನಲ್ಲೇ ಪ್ರಸ್ತಾಪವಾಗಿದೆ. ನಮ್ಮ ಅವಶ್ಯಕತೆಗಳನ್ನು ಪೂರೈಸಲು ವಿಶ್ವವಿದ್ಯಾಲಯಕ್ಕೆ ಕಷ್ಟವಾಗುತ್ತಿದೆ. ಒಂದೊಮ್ಮೆ ಇಲ್ಲಿನ ಕೃಷಿ ಡಿಪ್ಲೊಮಾ ಕಾಲೇಜ್ ಬೇರೆಡೆ ಹೋದರೆ ಉತ್ತರ ಕನ್ನಡ ಜಿಲ್ಲೆಯ ಏಕೈಕ ಕೃಷಿ ಡಿಪ್ಲೊಮಾ ಕಾಲೇಜ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ.
    ಡಾ. ಜಿ.ವಿ.ನಾಯಕ, ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ, ಕೃಷಿ ಡಿಪ್ಲೊಮಾ ಕಾಲೇಜ್ ಪ್ರಾಚಾರ್ಯ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ

    ಪದವಿ ಕಾಲೇಜ್ ಕನಸಿಗೆ ಕೊಳ್ಳಿ
    ಕೃಷಿ ಡಿಪ್ಲೊಮಾ ಕಾಲೇಜು ಬಂದ ಬೆನ್ನಲ್ಲೇ ಉತ್ಸಾಹಗೊಂಡು ಕೃಷಿ ಪದವಿ ಕಾಲೇಜ್ ಅನ್ನೂ ತೆರೆಯುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಸಂಘಟಿತವಾಗಿದ್ದ ಕರಾವಳಿ ಕೃಷಿ ಅಭಿವೃದ್ಧಿ ಮತ್ತು ಚಿಂತನಾ ಸಮಿತಿ ಈಗ ತಣ್ಣಗಾಗಿದೆ. ಕೃಷಿಕ ಸಮಾಜ ಹಾಗೂ ಇತರ ರೈತ ಸಂಘಟನೆಗಳಿಗೆ ಇದ್ಯಾವುದೂ ಬೇಕಾಗಿಲ್ಲ ಎಂಬಂತೆ ಸುಮ್ಮನಿವೆ. ಇದರಿಂದಾಗಿ ಕೃಷಿ ಡಿಪ್ಲೊಮಾ ಕಾಲೇಜು ಕಳೆದುಕೊಳ್ಳುವ ಜೊತೆಗೆ ಕೃಷಿ ಪದವಿ ಕಾಲೇಜಿನ ಕನಸನ್ನೂ ಕೈಬಿಡಬೇಕಾಗುತ್ತದೆ. ಹಾಗೆಯೇ ಕೃಷಿ ವಿವಿಗೆ ಹಸ್ತಾಂತರಗೊಂಡಿರುವ ಜಾಗದ ಲೀಸ್ ನವೀಕರಣ ಸಮಸ್ಯೆಯೂ ಉಲ್ಬಣಿಸಬಹುದಾಗಿದೆ.

    ಕುಮಟಾಕ್ಕೆ ಕೃಷಿ ಡಿಪ್ಲೊಮಾ ಕಾಲೇಜ್ ಅನ್ನು ಮಂಜೂರಿ ತರುವಾಗ ಪಟ್ಟ ಕಷ್ಟ ನಮ್ಮ ಅನುಭವದಲ್ಲಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಸರ್ಕಾರ ಇರುವ ವ್ಯವಸ್ಥೆಗಳನ್ನು ಹೆಚ್ಚಿಸಬೇಕೆ ಹೊರತು ಬೇರೆಡೆ ಒಯ್ಯುವುದಲ್ಲ. ಯಾವುದೇ ಕಾರಣಕ್ಕೂ ಕೃಷಿ ಡಿಪ್ಲೊಮಾ ಕಾಲೇಜ್ ಸ್ಥಳಾಂತರಕ್ಕೆ ಬಿಡುವುದಿಲ್ಲ. ಕೃಷಿ ವಿವಿ ಹಾಗೂ ಇತರ ಸಂಬಂಧಪಟ್ಟವರೊಂದಿಗೆ ಮಾತನಾಡುತ್ತೇನೆ.
    | ಶಾರದಾ ಎಂ. ಶೆಟ್ಟಿ, ಮಾಜಿ ಶಾಸಕಿ ಕುಮಟಾ

    ಕೃಷಿ ಡಿಪ್ಲೊಮಾ ಕಾಲೇಜ್ ಬೇರೆಡೆ ವಿಲೀನವಾಗದಂತೆ ನೋಡಿಕೊಳ್ಳುತ್ತೇವೆ. ಕಾಲೇಜ್ ಇಲ್ಲಿಯೇ ಮುಂದುವರಿಯಲಿದೆ.
    | ದಿನಕರ ಶೆಟ್ಟಿ ಶಾಸಕ, ಕುಮಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts