More

    ಕುಣಿಗಲ್‌ಮತಕ್ಷೇತ್ರದಲ್ಲಿ ಭಿನ್ನಮತ ಸ್ಫೋಟ

    ವಿಜಯವಾಣಿ ಸುದ್ದಿಜಾಲ ಕುಣಿಗಲ್
    ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ತಾಲೂಕು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಬಿಜೆಪಿ ಮುಖಂಡ ಎಚ್.ಡಿ.ರಾಜೇಶ್‌ಗೌಡ ಅವರವರ ತೋಟದ ಮನೆಗಳಲ್ಲಿ ಬೆಂಬಲಿಗರ ಪ್ರತ್ಯೇಕ ಸಭೆ ನಡೆಸಿ, ಬಂಡಾಯದ ಕಹಳೆ ಮೊಳಗಿಸಿದ್ದಾರೆ.
    ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌ಗೆ ಟಿಕೆಟ್ ಘೋಷಣೆಯಾಗುತ್ತಿದಂತೆ ಆಕಾಂಕ್ಷಿಗಳಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಮಾಜಿ ಸಂಸದ ಎಸ್‌ಪಿಎಂ ಹೆಬ್ಬೂರು ತೋಟದ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು. ಬೆಂಬಲಿಗರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯಪಡಿಸಿದರು. ಇದಕ್ಕೆ ಎಸ್‌ಪಿಎಂ ಸಹಮತ ವ್ಯಕ್ತಪಡಿಸಿದರು.
    ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ನನಗೆ ಐದು ಬಾರಿ ಚುನಾವಣೆ ಟಿಕೆಟ್ ಕೈ ತಪ್ಪಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ, ಇದಕ್ಕೆ ನಾನು ವಿಚಲಿತನಾಗುವುದಿಲ್ಲ, 2023ರ ವಿಧಾನಸಭಾ ಚುನಾವಣೆಗೆ ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುವ ನಿಟ್ಟಿನಲ್ಲಿ ನಾನು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಒಪ್ಪಿ ಆ ಪಕ್ಷ ಸೇರಿದೆ. ಟಿಕೆಟ್ ಸಿಗಲಿದೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ನಿರೀಕ್ಷೆ ಹುಸಿಗೊಳಿಸಿದೆ, ಯಾವ ಕಾರಣಕ್ಕಾಗಿ ಟಿಕೆಟ್ ಕೈ ತಪ್ಪಿದೆ ಎಂದು ವರಿಷ್ಠರು ಹೇಳಬೇಕಾಗಿದೆ ಎಂದು ಎಸ್.ಪಿ.ಮುದ್ದಹನುಮೇಗೌಡ ಹೇಳಿದರು. ಜನತಾ ನ್ಯಾಯಾಲಯದ ಮುಂದೆ ಹೋಗಿ, ನನಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುವೆ. ಜನರ ತೀರ್ಪಿಗೆ ಬದ್ಧನಾಗುತ್ತೇನೆ ಎಂದರು.
    ವರಿಷ್ಠರ ನಡೆಗೆ ಆಕ್ರೋಶ: ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಎಚ್. ಡಿ.ರಾಜೇಶ್‌ಗೌಡ ಅವರು ಅರಕೆರೆಯ ತೋಟದ ಮನೆಯಲ್ಲಿ ಬೆಂಬಲಿಗರ ಸಭೆ ನಡೆಸಿದರು. ಡಿ.ಕೃಷ್ಣಕುಮಾರ್‌ಗೆ ಟಿಕೆಟ್ ನೀಡಿರುವ ವರಿಷ್ಠರ ನಡೆಯನ್ನು ಖಂಡಿಸಿದರು, ಪಕ್ಷದ ಕಾರ್ಯಕ್ರಮಕ್ಕೆ ಹಾಕಿದ ಬ್ಯಾನರ್‌ಗಳನ್ನು ಡಿ.ಕೃಷ್ಣಕುಮಾರ್ ಅವರ ಬೆಂಬಲಿಗರು ಹಾಳು ಮಾಡಿ ದೌರ್ಜನ್ಯ ಎಸಗಿದ್ದಾರೆ, ಅಂತವರಿಗೆ ಟಿಕೆಟ್ ನೀಡಲಾಗಿದೆ. ನಾವು ಅವರ ಪರವಾಗಿ ಹೇಗೆ ಚುನಾವಣೆ ಮಾಡುವುದು ಎಂದು ಪ್ರಶ್ನಿಸಿದರು,
    ರಾಜೇಶ್‌ಗೌಡ ಬೆಂಬಲಿಗರ ಪ್ರತಿಭಟನೆ: ಟಿಕೆಟ್ ವಂಚಿತ ರಾಜೇಶ್‌ಗೌಡ ಬೆಂಬಲಿಗರು ಬಿಜೆಪಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ದ ಧಿಕ್ಕಾರ ಕೂಗಿದರು. ಸಂಘ ಪರಿವಾರದ ಪರವಾಗಿ ಹಿಂದು ಹೋರಾಟ ಮಾಡಿಕೊಂಡು ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ವಿಶ್ವಾಸ ಇಟ್ಟು ನ್ಯಾಯುತವಾಗಿ ನಡೆಯುತ್ತಾ ಬಂದ ರಾಜೇಶ್‌ಗೌಡರಿಗೆ ಟಿಕೆಟ್ ನೀಡದೇ ಇರುವುದು ಎಷ್ಟು ನ್ಯಾಯ ? ಇದು ಬಿಜೆಪಿಯ ತತ್ವ ಸಿದ್ಧಾಂತವೇ ಎಂದು ಪ್ರಶ್ನಿಸಿದ ಬೆಂಬಲಿಗರು, ರಾಜೇಶ್‌ಗೌಡ ಅವರನ್ನು ಪಕ್ಷೇತರವಾಗಿ ಸ್ಪರ್ಧೆ ಮಾಡಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
    2 ದಿನದಲ್ಲಿ ತೀರ್ಮಾನ: ನಾನು ಕ್ಷೇತ್ರದಾದ್ಯಂತ ಪ್ರವಾಸಿ ಮಾಡಿ ಪ್ರಚಾರ ಮಾಡಿದ ವೇಳೆ ಜನರ ಅಭಿಪ್ರಾಯ ನನ್ನ ಕಡೆಯಿತ್ತು. ನಾನು ಗೆಲ್ಲುತ್ತಿದ್ದೆ. ಆದರೆ ನನಗೆ ಟಿಕೆಟ್ ಕೈ ತಪ್ಪಿಸಿ ಅನ್ಯಾಯ ಮಾಡಿದ್ದಾರೆ ಎಂದು ವರಿಷ್ಠರ ವಿರುದ್ಧ ಎಚ್.ಡಿ.ರಾಜೇಶ್‌ಗೌಡ ಹರಿಹಾಯ್ದರು. ಬೆಂಬಲಿಗರ ಅಭಿಪ್ರಾಯ ಪಡೆದು ಚುನಾವಣೆ ಸ್ಪರ್ಧೆ ಸಂಬಂಧ ಶುಕ್ರವಾರ ಹೇಳುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts