More

    ಕುಡಿಯುವ ನೀರಿಗೆ ಕನ್ನ ಹಾಕಿದ ಭೂಪರು!

    ಶ್ರೀಧರ ಅಡಿ ಗೋಕರ್ಣ

    ಮನೆಗೆ ಕನ್ನ ಹಾಕಿ ಕಳವು ಮಾಡುವುದನ್ನು ಕೇಳಿದ್ದೇವೆ. ಆದರೆ, ಗೋಕರ್ಣದಲ್ಲಿ ಕುಡಿಯುವ ನೀರಿನ ಟ್ಯಾಂಕ್​ನ ಮುಖ್ಯ ಕೊಳವೆಗೆ ಕನ್ನ ಹಾಕಿ ನೀರು ಕಳವು ಮಾಡುತ್ತಿರುವ ಅಚ್ಚರಿ ವಿದ್ಯಮಾನ ಬೆಳಕಿಗೆ ಬಂದಿದೆ. ಇದನ್ನು ಸ್ವತಃ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಕೆಲ ಸದಸ್ಯರು ಪತ್ತೆ ಹಚ್ಚಿದ್ದಾರೆ. ಈ ದುಷ್ಕೃತ್ಯದಿಂದ ನಿತ್ಯ 30 ಸಾವಿರ ಲೀ. ನಿಂದ 50 ಸಾವಿರ ಲೀ. ತನಕ ನೀರು ಸಾರ್ವಜನಿಕರಿಗೆ ಸಿಗದೆ ಅನಧಿಕೃತವಾಗಿ ಖಾಸಗಿಯವರ ಪಾಲಾಗುತ್ತಿತ್ತು ಎಂದು ಅಂದಾಜಿಸಲಾಗಿದೆ.

    ಕೃತಕ ಅಭಾವ: ಗೋಕರ್ಣ ಪಂಚಾಯಿತಿಯಲ್ಲಿ ನೀರು ಸಂಗ್ರಹಕ್ಕಾಗಿ ಬಂಗ್ಲೆ ಗುಡ್ಡದಲ್ಲಿ ಎರಡು ಟ್ಯಾಂಕ್​ಗಳಿವೆ. ಈ ಪೈಕಿ 80ರ ದಶಕದಲ್ಲಿ ಅಂದಿನ ನಗರ ಪಂಚಾಯಿತಿ ನಿರ್ವಿುಸಿದ್ದ 1 ಲಕ್ಷ ಲೀ. ಸಾಮರ್ಥ್ಯದ ಸಣ್ಣ ಟ್ಯಾಂಕ್.ಇನ್ನೊಂದು ಅದರ ಪಕ್ಕದಲ್ಲೇ ಗೋಕರ್ಣ ಬೃಹತ್ ಕುಡಿಯುವ ನೀರಿನ ಯೋಜನೆಯಲ್ಲಿ ಜಿಲ್ಲಾ ಪಂಚಾಯಿತಿ ನಿರ್ವಿುಸಿರುವ 5 ಲಕ್ಷ ಲೀ. ನೀರು ಸಂಗ್ರಹಿಸುವ ದೊಡ್ಡ ಟ್ಯಾಂಕ್ ಇದೆ. ಯೋಜನೆಯಡಿ ಗುಂಡಬಾಳ ಬಳಿ ಇರುವ ಮುಖ್ಯ ಜಲಸಂಗ್ರಹ ಕೇಂದ್ರದಿಂದ ವಾರಕ್ಕೆ 10ರಿಂದ 12 ಲಕ್ಷ ಲೀ. ನೀರು ದೊಡ್ಡ ಟ್ಯಾಂಕರ್​ಗೆ ಬಂದು ತರುವಾಯ ಸಣ್ಣ ಟ್ಯಾಂಕ್​ಗೆ ವರ್ಗಾಯಿಸಲ್ಪಡುತ್ತದೆ. ಸಣ್ಣ ಟ್ಯಾಂಕ್​ನಿಂದ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್​ಗಳಲ್ಲಿರುವ ತಲಾ 2 ಸಾವಿರ ಲೀ.ನ 48 ಉಪ ಟ್ಯಾಂಕ್​ಗೆ

    ಪೂರೈಕೆಯಾಗುತ್ತದೆ. 2016ರಿಂದ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಒದಗಿಸಲಾಗುತ್ತಿದೆ. ಆರಂಭದ ವರ್ಷ ಎಲ್ಲ ಟ್ಯಾಂಕ್​ಗೆ ನಿಯಮಿತವಾಗಿ ನೀರು ತಲಪುತ್ತಿತ್ತು. ಆದರೆ, ಕಳೆದ ಎರಡ್ಮೂರು ವರ್ಷದಿಂದ ಅರ್ಧ ಮತ್ತು ಮುಕ್ಕಾಲು ಟ್ಯಾಂಕ್ ನೀರು ಕಳಿಸುವುದು. ಮತ್ತು ಸರಬರಾಜಿನಲ್ಲಿ ಅನಿಯಮತೆ ಹೆಚ್ಚಾಯಿತು. ಈ ವರ್ಷವೂ ಇಲ್ಲಿನ ಬಂಗ್ಲೆ ಗುಡ್ಡದ ನವನಗರ ನಿವಾಸಿಗಳು ಅಧ್ಯಕ್ಷ ಮಂಜುನಾಥ ಜನ್ನು ಅವರ ಬಳಿ ತಮಗೆ ಸರಿಯಾಗಿ ನೀರು ಬಾರದಿರುವ ಬಗ್ಗೆ ದೂರಿಕೊಂಡರು. ಜಿಲ್ಲಾ ಪಂಚಾಯಿತಿ ವತಿಯಿಂದ ನಿತ್ಯ ಕೊಡಲ್ಪಡುವ ಒಂದೂವರೆ ಲಕ್ಷ ಲೀ.ಗೂ ಹೆಚ್ಚಿನ ನೀರಿನಿಂದ ಎಲ್ಲ ಟ್ಯಾಂಕ್​ಗಳನ್ನು ಭರ್ತಿ ಮಾಡಿಯೂ 40ರಿಂದ 50 ಸಾವಿರ ಲೀ. ನೀರು ಉಳಿಯಬೇಕು. ಆದರೆ, ಹಾಗಾಗದೆ ನಿತ್ಯ ಉಳಿಕೆಯ ಪ್ರಮಾಣದಷ್ಟೆ ನೀರು ಕೊರತೆ ಆಗುತ್ತಿರುವುದು ಅಚ್ಚರಿ ಹುಟ್ಟುಹಾಕಿತು. ಇದರ ಮೂಲ ಶೋಧಿಸಲು ಜಲ ಸಂಗ್ರಹಾಲಯದಿಂದ ಇಲ್ಲಿಗೆ ಬರುವ ನೀರಿನ ಪ್ರಮಾಣ ಸರಿಯಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಪ್ರತ್ಯೇಕ ರಜಿಸ್ಟರ್ ಮತ್ತು ನಿತ್ಯ ಭರ್ತಿಯಾದ ಟ್ಯಾಂಕ್​ನ ಫೋಟೋ ತೆಗೆಯುವ ಕ್ರಮ ಜಾರಿಗೆ ತರಲಾಯಿತು. ಇದರಿಂದ ಮುಖ್ಯ ಕೇಂದ್ರದಿಂದ 10 ಲಕ್ಷ ಲೀ. ಗೂ ಹೆಚ್ಚಿನ ನೀರು ಪ್ರತಿ ವಾರ ಹರಿದು ಬರುತ್ತಿರುವುದು ದೃಢವಾಯಿತು. ನೀರು ಇಲ್ಲಿಗೆ ಬಂದ ನಂತರ ಅದು ಸಾರ್ವಜನಿಕರನ್ನು ತಲುಪದೆ ಬೇರೆಯವರ ಪಾಲಾಗಿ ಅಭಾವ ಸೃಷ್ಟಿಯಾಗಿರುವುದು ಬೆಳಕಿಗೆ ಬಂತು.

    ಸಾರ್ವಜನಿಕರಿಗೆ ಸೇರಬೇಕಾದ ಸಾವಿರಾರು ಲೀ. ನೀರು ನಿತ್ಯ ಅನಧಿಕೃತವಾಗಿ ಅಪಹರಿಸಲ್ಪಡುತ್ತಿರುವುದು ದೃಢಪಟ್ಟಿದೆ. ಇದು ಕಳೆದ ಕೆಲ ವರ್ಷಗಳಿಂದ ಸಾಗಿ ಬಂದಿರುವ ಸಂಶಯವಿದೆ. ಈ ಹಿನ್ನೆಲೆಯಲ್ಲಿ ಇದನ್ನು ನಿರ್ವಹಿಸುತ್ತಿರುವವರನ್ನು ಮತ್ತು ಸಂಬಂಧಿಸಿದ ಇತರರ ಹೇಳಿಕೆ ಪಡೆದು, ವಿಷಯವನ್ನು ಸಾಮಾನ್ಯ ಸಭೆ ಮೂಲಕ ಸರ್ವ ಸದಸ್ಯರ ಮುಂದಿಟ್ಟು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
    | ಮಂಜುನಾಥ ಜನ್ನು ಗೋಕರ್ಣ ಪಂಚಾಯಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts