More

    ಕುಂಬ್ರಾಳದಲ್ಲಿ ಭೂಕುಸಿತ ಭೀತಿ!


    ಯಲ್ಲಾಪುರ: ತಾಲೂಕಿನ ದೇಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಟ್ಟಿಗೆಯ ಕುಂಬ್ರಾಳದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ರಸ್ತೆ ನಿರ್ವಿುಸಿದ ಸ್ಥಳದಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟಿದೆ.
    ಎರಡು ದಿವಸಗಳ ಹಿಂದೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದ್ದ ಡಿಸಿಎಫ್ ಗೋಪಾಲಕೃಷ್ಣ ಹೆಗಡೆ ಗಿಡ ನೆಡುವುದಾಗಿ ತಿಳಿಸಿದ್ದು, ಅದರಂತೆ ಹೊಸ ರಸ್ತೆಯನ್ನು ಬಂದ್ ಮಾಡಿ, ಗಿಡಗಳನ್ನು ನೆಡಲಾಗಿದೆ.
    ಸುಮಾರು 200-250 ಮೀಟರ್​ವರೆಗೆ 50-60 ಗಿಡಗಳನ್ನು ಈಗಾಗಲೇ ನೆಡಲಾಗಿದ್ದು, ರಸ್ತೆಯ ಕೊನೆಯವರೆಗೂ ನೆಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
    ಎ. ರವೀಂದ್ರ ನಾಯ್ಕ ಭೇಟಿ: ಮರಗಳನ್ನು ಕಡಿದು ರಸ್ತೆ ಮಾಡಿದ ಪ್ರದೇಶಕ್ಕೆ ಸೋಮವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಭೇಟಿ ನೀಡಿದರು.
    ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕಿನ ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶವಾದ ದೇಹಳ್ಳಿ ಮತ್ತು ಅನಗೋಡ ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯಾಪಕವಾದ ಅರಣ್ಯನಾಶ ಮತ್ತು ಖನಿಜಾಂಶಯುಕ್ತ ಮಣ್ಣು ಕಳ್ಳಸಾಗಣಿಕೆಯಿಂದ ಸುಮಾರು 1 ಕೋಟಿ ರೂಪಾಯಿಯಷ್ಟು ಅರಣ್ಯ ಪರಿಸರ ನಾಶವಾಗಿದೆ. ಅಧಿಕಾರಿಗಳೇ ನಿಯಮ ಉಲ್ಲಂಘಿಸಿ ಪರಿಸರ ನಾಶಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
    ಕುಂಬ್ರಾಳದಲ್ಲಿ 10 ರಿಂದ 50 ವರ್ಷದ ಸಿಸಂ, ನಂದಿ, ಮತ್ತಿ, ಸಾಗುವಾನಿ ಮುಂತಾದ ಬೆಲೆಬಾಳುವ ಮರ ಕಡಿದು, ಮಣ್ಣಿನಲ್ಲಿ ಹುಗಿದು ಸಾಕ್ಷ್ಯ ನಾಶಮಾಡಿ ಸುಮಾರು 250 ರಿಂದ 300ಕ್ಕಿಂತ ಹೆಚ್ಚಿನ ಗಿಡ-ಮರ ನಾಶಕ್ಕೆ ಕಾರಣವಾಗುವ ಮೂಲಕ ಅರಣ್ಯ ಅಧಿಕಾರಿಗಳು ಕರ್ತವ್ಯ ಚ್ಯುತಿ ಎಸಗಿದಂತಾಗಿದೆ ಎಂದು ಆರೋಪಿಸಿದರು.
    ಆನಗೋಡ ಗ್ರಾ.ಪಂ ವ್ಯಾಪ್ತಿಯಲ್ಲಿನ ಬೀಸಗೋಡ ಗ್ರಾಮದ ಸುತ್ತಮುತ್ತ ದಿನದಿಂದ ದಿನಕ್ಕೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ವ್ಯಾಪಕವಾಗಿ ಬೆಲೆಬಾಳುವ ಖನಿಜಯುಕ್ತ ಮಣ್ಣು ಕಳ್ಳತನವಾದರೂ ಅರಣ್ಯ ಇಲಾಖೆ ಗಮನಿಸಿಲ್ಲ. ಖನಿಜಯುಕ್ತ ಮಣ್ಣು ಕಳ್ಳಸಾಗಣಿ ಕುರಿತು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಕಾನೂನು ಬಾಹಿರ ಕೃತ್ಯಕ್ಕೆ ಕಾರಣವಾದ ಅರಣ್ಯ ಅಧಿಕಾರಿಯ ಮೇಲೆ ತಕ್ಷಣ ಕಾನೂನು ಕ್ರಮ ಅವಶ್ಯ ಎಂದು ರವೀಂದ್ರ ನಾಯ್ಕ ಅಗ್ರಹಿಸಿದರು.

    ಕುಸಿಯಲಾರಂಭಿಸಿದ ಮಣ್ಣು
    ಹೊಸದಾಗಿ ನಿರ್ವಿುಸಿದ ರಸ್ತೆ ಕಾಮಗಾರಿಯ ವೇಳೆ ಪಕ್ಕದ ಧರೆಯ ಮಣ್ಣು ಸಡಿಲಗೊಂಡಿದ್ದು, ಎರಡೇ ದಿವಸಗಳ ಮಳೆಗೆ ಮಣ್ಣು ಕುಸಿಯಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಮಳೆ-ಗಾಳಿ ಜೋರಾದರೆ ಗುಡ್ಡ, ಮರಗಳು ಕುಸಿಯುವ ಸಾಧ್ಯತೆಯಿದೆ. ಹೊಸದಾಗಿ ಮಾಡಿದ ರಸ್ತೆಯೂ 2-3 ಕಡೆಗಳಲ್ಲಿ ಬಿರುಕು ಬಿಟ್ಟಿದ್ದು, ಕಾಳಿ ಹಿನ್ನೀರಿನತ್ತ ಕುಸಿಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.







    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts