More

    ಕುಂದರಗಿ, ಆನಗೋಡ ಗ್ರಾಪಂ ವ್ಯಾಪ್ತಿ ಸೀಲ್​ಡೌನ್

    ಯಲ್ಲಾಪುರ: ತಾಲೂಕಿನಲ್ಲಿ ಕರೊನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಬಹುತೇಕ ಗ್ರಾಮ ಪಂಚಾಯಿತಿಗಳು ಸೀಲ್​ಡೌನ್ ಮಾಡಿಕೊಂಡಿವೆ. ಇದೀಗ ಕುಂದರಗಿ ಹಾಗೂ ಆನಗೋಡ ಗ್ರಾಮ ಪಂಚಾಯಿತಿಗಳ ಸರದಿ.

    ಆನಗೋಡ ಗ್ರಾಪಂ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಗ್ರಾಪಂ ಹಾಗೂ ಟಾಸ್ಕ್​ಫೋರ್ಸ್ ಸಮಿತಿಯವರು ಬಂದ್ ಮಾಡಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಚೆಕ್​ಪೋಸ್ಟ್ ಆರಂಭಿಸಲಾಗಿದ್ದು, ಜನತೆ ಅನವಶ್ಯಕವಾಗಿ ಹೊರಗೆ ಓಡಾಡದಂತೆ, ಹೊರ ಊರಿನವರು ಗ್ರಾಮಕ್ಕೆ ಬಾರದಂತೆ ತಡೆಯಲಾಗುತ್ತಿದೆ. ಕುಂದರಗಿ ಗ್ರಾಮ ಪಂಚಾಯಿತಿಯನ್ನು ಕಂಟೇನ್ಮೆಂಟ್ ವಲಯವೆಂದು ತಾಲೂಕಾಡಳಿತ ಘೊಷಿಸಿದ್ದು, 14 ದಿನಗಳವರೆಗೆ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಜನರಿಗೆ ಏನಾದರೂ ಸಮಸ್ಯೆ ಉಂಟಾದಲ್ಲಿ ಗ್ರಾಪಂ ಕಾರ್ಯಾಲಯವನ್ನು ಸಂರ್ಪಸುವಂತೆ ತಿಳಿಸಲಾಗಿದೆ.

    ಕಂಟೇನ್ಮೆಂಟ್ ಪ್ರದೇಶಗಳಿಗೆ ತಾಪಂ ಇಒ ಕಮ್ಮಾರ ಭೇಟಿ

    ಯಲ್ಲಾಪುರ: ಕಂಟೇನ್ಮೆಂಟ್ ವಲಯವಾಗಿರುವ ತಾಲೂಕಿನ ಇಡಗುಂದಿ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ತಾಲೂಕು ಪಂಚಾಯಿತಿ ಇಒ ಜಗದೀಶ ಕಮ್ಮಾರ ಭೇಟಿ ನೀಡಿದರು. ಗ್ರಾಪಂ ವ್ಯಾಪ್ತಿಯ ಚೆಕ್​ಪೋಸ್ಟ್​ಗಳಿಗೆ ಭೇಟಿ ನೀಡಿದ ಅವರು, ಸಿಬ್ಬಂದಿಗೆ ಸಲಹೆ-ಸೂಚನೆಗಳನ್ನು ನೀಡಿದರು. ನಂತರ ಕೆಲ ಸೋಂಕಿತರ ಮನೆಗಳಿಗೆ ತೆರಳಿ ಧೈರ್ಯ ತುಂಬಿದರು. ಅರಬೈಲ್, ಫಣಸಗುಳಿ, ಇಡಗುಂದಿ ಭಾಗದ 15 ಸೋಂಕಿತರನ್ನು ಈ ಸಂದರ್ಭದಲ್ಲಿ ಯಲ್ಲಾಪುರದ ಕೋವಿಡ್ ಕೇರ್ ಸೆಂಟರ್​ಗೆ ಸ್ಥಳಾಂತರಿಸಲಾಯಿತು. ಪಿಡಿಒ ಚೆನ್ನವೀರ ಕುಂಬಾರ, ಸ್ಥಳೀಯ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

    ಕರೊನಾ ನಿಯಂತ್ರಣಕ್ಕೆ ಸರ್ವ ಪ್ರಯತ್ನ

    ಮುಂಡಗೋಡ: ತಾಲೂಕಿನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದೆ ಆಕ್ಸಿಜನ್ ಅಥವಾ ವೈದ್ಯಕೀಯ ಸೌಕರ್ಯಗಳ ಯಾವುದೇ ರೀತಿಯ ಕೊರತೆ ನಮಗಿಲ್ಲ ಎಂದು ಶಿರಸಿ ಉಪ ವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಹೇಳಿದರು.

    ಪಟ್ಟಣದ ತಾಲೂಕಾಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್​ಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕುಟುಂಬದ ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟಲ್ಲಿ ಅವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್​ಗೆ ಕರೆ ತರಲಾಗುವುದು. ತಾಲೂಕಾಡಳಿತ ಸುಸಜ್ಜಿತ 90 ಬೆಡ್​ಗಳ ಕೋವಿಡ್ ಕೇರ್ ಸೆಂಟರ್ ತೆರೆದಿದೆ. ಕೋವಿಡ್ ನಿಯಂತ್ರಿಸಲು ತಹಸೀಲ್ದಾರ್ ನೇತೃತ್ವದ ತಂಡ ಈಗಾಗಲೆ ಸರ್ವ ಪ್ರಯತ್ನವನ್ನು ಮಾಡುತ್ತಿದೆ ಎಂದರು. ಇದೇ ವೇಳೆ ಕೋವಿಡ್ ಕೇರ್ ಸೆಂಟರ್​ನ ಸೋಂಕಿತರ ಜತೆ ಅವರು ಮಾತನಾಡಿ ಅವರ ಆರೋಗ್ಯ ವಿಚಾರಿಸಿದರು. ಪ್ರತಿ ವಾರ್ಡ್​ಗೂ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ವೇಳೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಆಡಳಿತ ವೈದ್ಯಾಧಿಕಾರಿ ಎಚ್.ಎಫ್. ಇಂಗಳೆ, ಪಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಗ್ರೇಡ್-2 ತಹಸೀಲ್ದಾರ್ ಜಿ.ಬಿ. ಭಟ್ಟ ಇತರರಿದ್ದರು.

    ಪಾಸಿಟಿವಿಟಿ ಶೇ. 42 ರಿಂದ 31ಕ್ಕೆ ಇಳಿಕೆ

    ಕಾರವಾರ: ಜಿಲ್ಲೆಯ ಕೋವಿಡ್ ಸೋಂಕಿತರ ಸಂಖ್ಯೆ ಕಳೆದ ಎರಡು ದಿನದಿಂದ ಇಳಿಕೆ ಕಂಡಿದೆ. ಮಂಗಳವಾರದ ಹೆಲ್ತ್ ಬುಲೆಟಿನ್​ನಂತೆ ಜಿಲ್ಲೆಯ 726 ಜನರಿಗೆ ಸೋಂಕು ಖಚಿತವಾಗಿತ್ತು 12 ಜನ ಮೃತಪಟ್ಟಿದ್ದರು. ಬುಧವಾರದ ಮಾಹಿತಿಯಂತೆ 573 ಜನರಿಗೆ ಸೋಂಕು ಖಚಿತವಾಗಿದೆ. ಕಳೆದ ಎರಡು ವಾರಗಳ ಹಿಂದೆ ಜಿಲ್ಲೆಯ ಒಟ್ಟಾರೆ 100 ಜನರ ಕೋವಿಡ್ ಪರೀಕ್ಷೆ ಮಾಡಿದರೆ ಅದರಲ್ಲಿ 46 ಜನರಿಗೆ ಸೋಂಕು ಕಾಣಿಸಿಕೊಂಡಿತ್ತು. ಎಂದರೆ ಪಾಸಿಟಿವಿಟಿ ಪ್ರಮಾಣ ಶೇ. 46 ರಷ್ಟಿತ್ತು. ಕಳೆದ ವಾರ ಅದು ಶೇ. 42 ಕ್ಕೆ ಇಳಿದಿದೆ. ಈ ಎರಡು ದಿನದಿಂದ ಪಾಸಿಟಿವಿಟಿ ಪ್ರಮಾಣ ಶೇ. 31 ಕ್ಕೆ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 5 ಲಕ್ಷ 33 ಸಾವಿರ 353 ಜನರ ಕೋವಿಡ್ ಪರೀಕ್ಷೆ ಮಾಡಿದ್ದು, ಇದುವರೆಗೆ 44,796 ಜನರಿಗೆ ಪಾಸಿಟಿವ್ ಬಂದಿದೆ. 35,582 ಜನ ಗುಣವಾಗಿದ್ದು, 541 ಜನ ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ. ಬುಧವಾರದ ಹೆಲ್ತ್ ಬುಲೆಟಿನ್​ನಂತೆ ಕಾರವಾರದಲ್ಲಿ 37, ಅಂಕೋಲಾ-12, ಕುಮಟಾ-89, ಹೊನ್ನಾವರ-148, ಭಟ್ಕಳ-61, ಶಿರಸಿ-35, ಸಿದ್ದಾಪುರ-111,ಯಲ್ಲಾಪುರ-15, ಮುಂಡಗೋಡ-7, ಜೊಯಿಡಾ-28, ಹಳಿಯಾಳ ಹಾಗೂ ದಾಂಡೇಲಿ ಸೇರಿ 30 ಜನರಲ್ಲಿ ಸೋಂಕು ಖಚಿತವಾಗಿದೆ. ಹೊನ್ನಾವರ ಹಾಗೂ ಹಳಿಯಾಳದಲ್ಲಿ ತಲಾ ಒಬ್ಬ, ಶಿರಸಿ ಮತ್ತು ಯಲ್ಲಾಪುರದಲ್ಲಿ ತಲಾ ಮೂವರು, ಮುಂಡಗೋಡಿನಲ್ಲಿ ಇಬ್ಬರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 773 ಜನ ಗುಣವಾಗಿದ್ದಾರೆ. ಜಿಲ್ಲೆಯ ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 5916 ಕ್ಕೆ ಇಳಿಕೆಯಾಗಿದೆ. 503 ಜನ ಆಸ್ಪತ್ರೆಗಳಲ್ಲಿದ್ದಾರೆ.

    351 ಬೆಡ್ ಲಭ್ಯ

    ಕಾರವಾರ: ಬುಧವಾರ ಸಾಯಂಕಾಲದ ಜಿಲ್ಲಾ ಹೆಲ್ತ್ ಬುಲೆಟಿನ್ ಮಾಹಿತಿಯಂತೆ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 351 ಸಾಮಾನ್ಯ, 432 ಆಕ್ಸಿಜನ್ ಇರುವ ಎಚ್​ಡಿಯು, 57 ಐಸಿಯು ಬೆಡ್​ಗಳು ಲಭ್ಯವಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts