More

    ಕೀರ್ತಿ ಪತಾಕೆ ಹಾರಿಸಿದ ಕಲಬುರಗಿ ಕಲಿ

    ವಾದಿರಾಜ ವ್ಯಾಸಮುದ್ರ ಕಲಬುರಗಿ
    ಕಣ್ಣಿದ್ದವರು ಸಹ ಮಾಡಲಾರದಂಥ ಸಾಧನೆಯನ್ನು ಜಿಲ್ಲೆ ಮೂಲದ ಅಂಧ ವಿದ್ಯಾರ್ಥಿಯೊಬ್ಬ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಟಾಪರ್ ಆಗಿ ಹೊರಹೊಮ್ಮುವ ಮೂಲಕ ಮಾಡಿ ತೋರಿಸಿದ್ದಾನೆ.
    ಹೌದು, ಬೆಂಗಳೂರಿನ ಪ್ರತಿಷ್ಠಿತ ಬಿಷಪ್ ಕಾಟನ್ ಕಾಲೇಜಿನಲ್ಲಿ ಅಭ್ಯಸಿಸಿದ ಕಲಬುರಗಿ ಜಿಲ್ಲೆ ಮೂಲದ ಸುಬೋಧ್ ಹುಲಿಕಂಠರಾಯ ದ್ವಿತೀಯ ಪಿಯುಸಿ (ಐಎಸ್ಸಿಇ) ಪರೀಕ್ಷೆಯಲ್ಲಿ ಸಹಪಾಠಿಗಳಿಗಿಂತ ಹೆಚ್ಚಿನ ಅಂಕ ಗಳಿಸುವುದರ ಜತೆಗೆ ಎಲ್ಲರ ಹುಬ್ಬೆರಿಸುವಂತೆ ಮಾಡಿದ ಅಂಧ ಪ್ರತಿಭೆ.
    ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದ ಸುಬೋಧ್, ಬೆಂಗಳೂರಿನ ವಿದ್ಯಾರ್ಥಿಗಳಿಗೆ ಸೆಡ್ಡು ಹೊಡೆದು ಟಾಪರ್ ಆಗಿರುವುದು ಇಡೀ ಜಿಲ್ಲೆಗೆ ಹೆಮ್ಮೆ ತಂದುಕೊಟ್ಟಿದ್ದಾನೆ. ಈತನ ಮಹತ್ಸಾಧನೆಗೆ ಅಭಿನಂದನೆ, ಶುಭ ಹಾರೈಕೆಗಳ ಸುರಿಮಳೆಯೇ ಆಗುತ್ತಿದೆ. ಜನ್ಮತಃ ಅಂಧನಾಗಿರುವ ಈತ ಮುಂದೆ ಐಎಎಸ್ ಮಾಡಬೇಕೆಂಬ ಮಹೋನ್ನತ ಆಶಯ ಇಟ್ಟುಕೊಂಡಿದ್ದಾನೆ.
    ಬೆಂಗಳೂರಿನ ಬಿಶಪ್ ಕಾಟನ್ ಕಾಲೇಜಿನಲ್ಲಿ ಕಣ್ಣಿರುವ ವಿದ್ಯಾರ್ಥಿಗಳ ಜತೆ ಪಿಯುಸಿ (ಕಲಾ) ಅಭ್ಯಸಿಸಿರುವ ಸುಬೋಧ್, ಇಂಗ್ಲಿಷ್ನಲ್ಲಿ 91 ಅಂಕ ಗಳಿಸಿದರೆ, ಸಮಾಜ ವಿಜ್ಞಾನ, ಮನೋವಿಜ್ಞಾನ, ಸಮಾಜ ಶಾಸ್ತ್ರ ಮತ್ತು ಇತಿಹಾಸ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾನೆ. ಈ ಮೂಲಕ ಶೈಕ್ಷಣಿಕವಾಗಿ ಹಿಂದುಳಿದ ಕಲಬುರಗಿ ಜಿಲ್ಲೆ ಕೀರ್ತಿ ಪತಾಕೆಯನ್ನು ರಾಜಧಾನಿಯಲ್ಲಿ ಹಾರಿಸಿದ್ದಾನೆ.
    ಪ್ರಥಮ ದರ್ಜೆ ಗುತ್ತಿಗೆದಾರ ಹುಲಿಕಂಠರಾಯ ಮತ್ತು ಬಿಎಚ್ಎಂಎಸ್ ಓದಿದರೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವೃತ್ತಿಯನ್ನು ಬಿಟ್ಟು ಸಂಸಾರದ ನೌಕೆ ಸಾಗಿಸುತ್ತಿರುವ ಡಾ.ಮಹಾಲಕ್ಷ್ಮಿ ಅವರ ಇಬ್ಬರು ಪುತ್ರರಲ್ಲಿ ಸುಬೋಧ್ ಹಿರಿಯವ. ಎರಡನೆಯವ ಸುಜಯ್.
    ಒಂದರಿಂದ 7ನೇ ತರಗತಿವರೆಗೆ ಕಲಬುರಗಿ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ಶಾಲೆಯಲ್ಲಿ ಅಭ್ಯಸಿಸಿದ ಈತ, ಎಂಟನೇ ತರಗತಿಯಿಂದ ಬೆಂಗಳೂರಿನ ಕನ್ಬ್ರಿಡ್ಜ್ ಶಾಲೆಯಲ್ಲಿ ಓದಿದ್ದಾನೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.88 ಅಂಕ ಗಳಿಸಿ ಅಲ್ಲೂ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ. ಪಿಯುಸಿಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡ ಸುಬೋಧ್, ಅಂದುಕೊಂಡಿದ್ದನ್ನು ಸಾಧಿಸಿ ಅಂಗವೈಕಲ್ಯ ಸಾಧನೆಗೆ ಅಡ್ಡಿ ಬರುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾನೆ.
    ಬೆಂಗಳೂರಿನಲ್ಲಿ ಸುಬೋಧ್ ಓದುತ್ತಿದ್ದಾಗ ಬೆನ್ನೆಲುಬಾಗಿ ನಿಂತವರು ತಾಯಿ ಡಾ.ಮಹಾಲಕ್ಷ್ಮಿ. ಎಲ್ಲ ನೆರವು ನೀಡಿದವರು ತಂದೆ ಹುಲಿಕಂಠರಾಯ. ಬಿಎ ಆರ್ಟ್ಸನಲ್ಲಿ ರಾಜಕೀಯ ವಿಜ್ಞಾನ ಮಾಡುವ ಆಸೆ ಹೊಂದಿರುವ ಸುಬೋಧ್, ಇದಕ್ಕಾಗಿ ದೆಹಲಿಯ ದಿ ಹಿಂದೂ ಕಾಲೇಜಿನಲ್ಲಿ ಪ್ರವೇಶಬಯಸಿ ಅರ್ಜಿ ಸಲ್ಲಿಸಿದ್ದಾನೆ.

    ಕಾಲೇಜಿಗೆ ಟಾಪರ್ ಆಗಿದ್ದು ಹರ್ಷ ತಂದಿದೆ. ಇದಕ್ಕೆ ನನ್ನ ಹಾರ್ಡ್​ವರ್ಕ ಅಷ್ಟೇ ಕಾರಣವಲ್ಲ, ಸದಾ ನನ್ನ ಬೆನ್ನಿಗೆ ನಿಂತ ತಂದೆ-ತಾಯಿ ಮತ್ತು ಶಿಕ್ಷಕರು ಸಹ ಈ ಸಾಧನೆಗೆ ಕಾರಣರು. ಅವರ ಪ್ರಯತ್ನ, ಮಾರ್ಗದರ್ಶನ, ಪ್ರೋತ್ಸಾಹದಿಂದ ಈ ಫಲ ಸಿಕ್ಕಿದೆ. ಮುಂದೆ ಐಎಎಸ್ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದೇನೆ.
    | ಸುಬೋಧ್ ಎಚ್.ಎಂ.
    ಪ್ರತಿಭೆ ಮೆರೆದ ಅಂಧ ವಿದ್ಯಾರ್ಥಿ

    ==
    ಮಗನ ಎಲ್ಲ ಪ್ರಯತ್ನಕ್ಕೆ ನಮ್ಮ ಬೆಂಬಲ ಇದ್ದೇ ಇದೆ. ಹೆಚ್ಚೆಚ್ಚು ಅಂಕ ಗಳಿಸಿ ಮುಂದಡಿ ಇಡುತ್ತಿದ್ದಾನೆ. ಹೀಗಾಗಿ ನಾನು ಮತ್ತು ಆತನ ತಾಯಿ ಬೆಂಬಲವಾಗಿ ನಿಲ್ಲುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ.
    | ಹುಲಿಕಂಠರಾಯ, ಸುಬೋಧ್ ತಂದೆ

    ===========

    ನನ್ನ ಇಬ್ಬರೂ ಪುತ್ರರ ಬಗ್ಗೆ ಹೆಮ್ಮೆ ಇದೆ. ಸುಬೋಧ್ ಟಾಪರ್ ಆಗಿರುವುದು ಹೆಚ್ಚು ಖುಷಿ ತಂದಿದೆ. ಪ್ರಯತ್ನ ನಮ್ಮದಿದ್ದರೂ ಓದು ಆತನದ್ದು. ಅದರಲ್ಲಿ ಆತ ಯಶಸ್ವಿಯಾಗಿದ್ದಾನೆ. ಮುಂದೆ ಐಎಎಸ್ ಆಗುವ ಆಸೆ ಇಟ್ಟುಕೊಂಡಿದ್ದಾನೆ. ಅದರಲ್ಲಿಯೂ ಸಾಧನೆ ಮಾಡುವ ವಿಶ್ವಾಸವಿದೆ.
    | ಡಾ.ಮಹಾಲಕ್ಷ್ಮಿ
    ಸುಬೋಧ್ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts