More

    ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ

    ತೀರ್ಥಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೊನಾ ಸೋಂಕು ನಿಯಂತ್ರಣ ಮಾಡಲು ವಿಫಲವಾಗಿವೆ ಎಂದು ಆರೋಪಿಸಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸರ್ಕಾರಗಳ ವೈಫಲ್ಯ ಖಂಡಿಸಿ ತಾಲೂಕು ಕಚೇರಿ ಬಳಿ ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿದರು.

    ಬಿಜೆಪಿ ಆಡಳಿತದಲ್ಲಿ ಮಹಾತ್ಮಗಾಂಧಿ ಚಿಂತನೆಗಳು ಮಣ್ಣು ಪಾಲಾಗುತ್ತಿದ್ದು ಸಂವಿಧಾನದ ಆಶಯಕ್ಕೂ ಧಕ್ಕೆ ಉಂಟಾಗುತ್ತಿದೆ. ದೇಶದಲ್ಲಿ ಕೋಮುಭಾವನೆಯಂತಹ ಕೆಟ್ಟ ಆಲೋಚನೆಗಳು ಕೇಂದ್ರೀಕೃತವಾಗುತ್ತಿರುವುದು ಅತ್ಯಂತ ಆತಂಕದ ಸಂಗತಿ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

    ಕರೊನಾ ಸೋಂಕು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರ ರೂಪಿಸಿದ ಉದ್ಯೋಗಖಾತ್ರಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳೇ ಈ ಸಂಕಷ್ಟ ಕಾಲದಲ್ಲಿ ಜನರಿಗೆ ಆಧಾರ ಸ್ತಂಭವಾಗಿವೆ. ಸರ್ಕಾರದ ಹಣದಲ್ಲಿ ತಾಲೂಕಿನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಬಿಜೆಪಿ ತನ್ನ ಕಾಯಕ್ರಮದಂತೆ ಬಿಂಬಿಸುತ್ತಿದೆ. ರಾಷ್ಟ್ರೀಯ ವಿಪತ್ತಿನ ಈ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರ ಸುಗ್ರಿವಾಜ್ಞೆಯ ಮೂಲಕ ಕಾರ್ವಿುಕ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಕಾರ್ವಿುಕರು ಮತ್ತು ಕೃಷಿಕರ ಬದುಕಿಗೆ ಮಾರಕವಾಗಿದೆ ಎಂದು ಹೇಳಿದರು.

    ಪಿಎಂ ಕೇರ್ಸ್ ಫಂಡಿನ ಪ್ರಾಮಾಣಿಕತೆ ಪ್ರಶ್ನೆ ಮಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ದ ಸಹಸ್ರಾರು ಮೈಲಿ ದೂರದ ಸಾಗರದಲ್ಲಿ ದೂರು ದಾಖಲಿಸಿರುವುದು ಅಧಿಕಾರಿಗಳು ಬಿಜೆಪಿ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿರುವುದನ್ನು ತೋರಿಸುತ್ತದೆ ಎಂದು ವಾಗ್ದಾಳಿ ಮಾಡಿದರು.

    ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವಧಿಯಲ್ಲಿ ಜಾರಿಗೆ ಬಂದಿದ್ದ 10 ಎಚ್​ಪಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ರದ್ದುಗೊಳಿಸುವ ತೀರ್ಮಾನ ರೈತ ವಿರೋಧಿಯಾಗಿದೆ ಎಂದು ಟೀಕಿಸಿದರು.

    ಮರಳು ಗುತ್ತಿಗೆದಾರರಿಗೆ ಕಿರುಕುಳ: ಕರೊನಾ ಸಂಕಟದ ಕಾಲದಲ್ಲಿ ಕ್ಷೇತ್ರದ ಶಾಸಕರು ಎಲ್ಲರನ್ನೂ ಒಗ್ಗೂಡಿಸಿ ಸಂಕಷ್ಟದಲ್ಲಿರುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸದೇ ಈ ಕ್ಷೇತ್ರವನ್ನು ರಾಜರಂತೆ ಕುಟುಂಬದ ಆಸ್ತಿಯಂತೆ ಅಧಿಕಾರಿಗಳನ್ನು ಬೆದರಿಸಿ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ದೂರಿದರು. ಬಿಜೆಪಿಯವರನ್ನು ಹೊರತುಪಡಿಸಿ ಬೇರೆಯವರು ಗುತ್ತಿಗೆ ಹಿಡಿದ ಮರಳು ಕ್ವಾರಿಗೆ ಭೇಟಿ ನೀಡಿ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯಯವನ್ನು ಮಾನವ ಬಾಂಬ್ ಎಂದು ಕರೆಯುವ ಮೂಲಕ ಸಂವಿಧಾನದ ಆಶಯಗಳಿಗೆ ಅಪಚಾರ ಮಾಡಿದ್ದಾರೆ ಎಂದು ಟೀಕಿಸಿದರು.

    ಮುಖಂಡರಾದ ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ, ಬಿ.ಜಿ.ನಾಗರಾಜ್, ಹಸಿರುಮನೆ ಮಹಾಬಲೇಶ್, ಕಲಗೋಡು ರತ್ನಾಕರ್, ಶ್ವೇತಾ ಬಂಡಿ, ಕಲ್ಪನಾ ಪದ್ಮನಾಭ್, ಭಾರತಿ ಪ್ರಭಾಕರ್, ಡಿ.ಲಕ್ಷ್ಮಣ್, ಬಂಡಿ ರಾಮಚಂದ್ರ, ಎಚ್.ಬಿ.ಪದ್ಮನಾಭ್, ಜೈಪ್ರಕಾಶ್ ಶೆಟ್ಟಿ, ಡಿ.ಎಸ್.ವಿಶ್ವನಾಥ ಶೆಟ್ಟಿ, ಅಮ್ರಪಾಲಿ ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts