More

    ಕಿತ್ತೂರು ಉತ್ಸವಕ್ಕೆ ಅದ್ದೂರಿ ಚಾಲನೆ

    ಬೆಳಗಾವಿ: ಬೆಂಗಳೂರಿನಿಂದ ಆರಂಭಗೊಂಡು ಇಡೀ ರಾಜ್ಯ ಸಂಚರಿಸಿ ಬಂದ ರಾಣಿ ಚನ್ನಮ್ಮ ವೀರಜ್ಯೋತಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳುವ ಮೂಲಕ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಸೋಮವಾರ ಚಾಲನೆ ದೊರಕಿತು.

    ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಶಾಸಕ ಆನಂದ ಮಾಮನಿ ಅವರ ನಿಧನದಿಂದಾಗಿ ಉತ್ಸವವನ್ನು ಮುಂದೂಡಲಾಗಿತ್ತು, ಅದರಂತೆ ಅ.24ರಂದು ಉತ್ಸವ ಆರಂಭವಾಗಿದೆ. ಈ ಬಾರಿ ವೀರಜ್ಯೋತಿ ರಾಜ್ಯಾದ್ಯಂತ ಸಂಚಾರ ಮಾಡಿ ಕಿತ್ತೂರಿಗೆ ಬಂದಿದೆ. ಈ ಎಲ್ಲ ಯಶಸ್ಸು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಲ್ಲಲಿದೆ. ತಾಯಿ ಚನ್ನಮ್ಮಾಜಿಯ ಕ್ಷೇತ್ರದ ಮೇಲೆ ಅಪಾರ ಅಭಿಮಾನ ಹೊಂದಿರುವ ಮುಖ್ಯಮಂತ್ರಿಗಳು ಮುತುವರ್ಜಿವಹಿಸಿ ಈ ಕಾರ್ಯಕ್ಕೆ ಚಾಲನೆ ನೀಡಿದ್ದು, ಕಿತ್ತೂರು ಕ್ಷೇತ್ರದ ಎಲ್ಲ ಜನತೆಗೆ ಖುಷಿ ತಂದಿದೆ ಎಂದರು.

    ಜಾನಪದ ಕಲಾವಾಹಿನಿ ಹಾಗೂ ರೂಪಕಗಳ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಜಾನಪದ ಗೀತೆ ಹಾಗೂ ಐತಿಹಾಸಿಕ ಘಟನೆಗಳ ಸ್ತಬ್ಧ ಚಿತ್ರಗಳಿಂದ ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮನ ಧೈರ್ಯ ಶೌರ್ಯ, ಸಾಹಸದ ಗೀತೆಗಳ ಗುಣಗಾನ ಮಾಡುವ ಮೂಲಕ ಕಿತ್ತೂರಿನ ಗತವೈಭವ ಮೆಲುಕು ಹಾಕಲಾಯಿತು. ಆನೆ ಮೇಲೆ ಚನ್ನಮ್ಮಾಜಿ ಭಾವಚಿತ್ರ ಹಾಗೂ ವೀರಜ್ಯೋತಿ ಮೆರವಣಿಗೆ ನಿಚ್ಚಣಕಿಯ ಮಡಿವಾಳೇಶ್ವರ ಮಠದ ವರೆಗೆ ಸಂಚರಿಸಿತು.

    ಜಿಲ್ಲೆಯ ಬಹುತೇಕ ತಾಲೂಕು ಪಂಚಾಯಿತಿಗಳ ವಿವಿಧ ಇಲಾಖೆಯ ಜನಪರ ಯೋಜನೆಗಳ ಅರಿವು ಮೂಡಿಸುವ ಸ್ತಬ್ಧಚಿತ್ರಗಳ ಜತೆಗೆ ನೂರಾರು ಮಹಾತ್ಮರ ವೇಷಭೂಷಣ ತೊಟ್ಟ ಮಕ್ಕಳು ಹಾಗೂ ಪೂರ್ಣಕುಂಭ ಹೊತ್ತ ಸುಮಂಗಲೆಯರು ಮೆರವಣಿಗೆಗೆ ಮೆರುಗು ತಂದರು. ಮೆರವಣಿಗೆಯುದ್ದಕ್ಕೂ ರಸ್ತೆಯ ಎರಡೂ ಬದಿ ಹಾಗೂ ಮೆರವಣಿಗೆ ಮಾರ್ಗದ ಮನೆ ಮಹಡಿ ಮೇಲಿಂದ ಸಾವಿರಾರು ಜನರು ಚನ್ನಮ್ಮನ ನೆನಪಿನಲ್ಲಿ ಮಿಂದೆದ್ದರು.

    ಮೆರವಣಿಗೆಯಲ್ಲಿ ವಿವಿಧ ತಾಲೂಕುಗಳ ಆಡಳಿತದಿಂದ ಕಿತ್ತೂರು ಚನ್ನಮ್ಮ, ಕಿತ್ತೂರು ಕೋಟೆ, ಗೋಮ್ಮಟೇಶ್ವರ, ಪಾರ್ವತಿ ಕಂದ, ಹಿಡಕಲ್ ಜಲಾಶಯ ಸೇರಿ ವಿವಿಧ ಸಾಂಸ್ಕೃತಿಕ ರೂಪಕಗಳು ಸೇರಿ ಹೊರ ಜಿಲ್ಲೆಯ 35ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಂಡು ಕಿತ್ತೂರು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆ ಮನಸೂರೆಗೊಂಡಿತು.
    ಗೊಂಬೆ ಕುಣಿತ, ಹೆಜ್ಜಿ ಮಹಲು, ಮಹಿಷಾಸುರ ಸಂಹಾರ, ಹನುಮಂತ, ಕೋಲಾಟ, ವೀರಗಾಸೆ, ನವಿಲು ನೃತ್ಯ, ಚಂಡಮದ್ದಳೆ, ಪೂಜಾ ಕುಣಿತ, ನಂದಿಧ್ವಜ, ಪಟಾಕುಣಿತ, ಚಿಟ್ಟೆಮೇಳ, ಝಾಂಜ್ ಪಥಕ ಸೇರಿ ವಿವಿಧ ಕಲಾತಂಡಗಳ ನೂರಾರು ಕಲಾವಿದರು ಕಲಾವಾಹಿನಿಯಲ್ಲಿ ಪಾಲ್ಗೊಂಡಿದ್ದರು. ಜನಪದ ಗೀತೆ ಹಾಗೂ ಡಿಜೆ ಹಾಡುಗಳಿಗೆ ಯುವಕರು ಹುಚ್ಚೆದ್ದು ಕುಣಿದರು.

    ಇದಕ್ಕೂ ಮುನ್ನ ಚನ್ನಮ್ಮ ವೃತ್ತದಲ್ಲಿನ ಚನ್ನಮ್ಮಾಜಿ ಮೂರ್ತಿ, ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಉತ್ಸವದ ಧ್ವಜಾರೋಹಣ ನೆರವೇರಿಸಿ, ಪ್ರತಿ ವರ್ಷದಂತೆ ಬೈಲಹೊಂಗಲದ ಚನ್ನಮ್ಮಾಜಿ ಸಮಾಧಿಯಿಂದ ಆಗಮಿಸಿದ ವೀರಜ್ಯೋತಿಯನ್ನು ಕಿತ್ತೂರು ಕಲ್ಮಠದ ರಾಜಯೋಗಿಂದ್ರ ಸ್ವಾಮೀಜಿ ಸಮ್ಮುಖದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ವಾಗತಿಸಿದರು.

    ಆನೆ ಮೇಲೆ ವೀರಮಾತೆ ಚನ್ನಮ್ಮಾಜಿ ಭವ್ಯ ಮೆರವಣಿಗೆ, ಜಾನಪದ ಕಲಾವಾಹಿನಿಗೆ ರಾಜಯೋಗಿಂದ್ರ ಸ್ವಾಮೀಜಿ ಚಾಲನೆ ನೀಡಿದರು. ಶಾಸಕ ಮಹಾಂತೇಶ ದೊಡಗೌಡರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ದರ್ಶನ ಎಚ್.ವಿ. ಅವರು ಡೊಳ್ಳು ಬಾರಿಸುವ ಕಲಾವಿದರನ್ನು ಹುರಿದುಂಬಿಸಿದರು. ಕಿತ್ತೂರು ಮಹಾದ್ವಾರದ ಬಳಿಯ ಶೂರ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಪ್ರತಿಮೆಗಳಿಗೆ ಉತ್ಸವ ಸಮಿತಿಯಿಂದ ಮಾಲಾರ್ಪಣೆ ಮಾಡಲಾಯಿತು.

    ಕಿತ್ತೂರಿನ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ಎಸ್ಪಿ ಡಾ.ಸಂಜೀವ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ವಾರ್ತಾ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts