More

    ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ಸಲ್ಲಿಕೆ

    ಧಾರವಾಡ: ಪಾಕಿಸ್ತಾನ ಪರ ಘೊಷಣೆ ಕೂಗಿದ್ದ ಹುಬ್ಬಳ್ಳಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ಪರ ವಕೀಲರು ಭಾರಿ ಬಂದೋಬಸ್ತ್​ನಲ್ಲಿ ಆಗಮಿಸಿ ಜಿಲ್ಲಾ ನ್ಯಾಯಾಲಯಕ್ಕೆ ಶುಕ್ರವಾರ ಜಾಮೀನು ಅರ್ಜಿ ಸಲ್ಲಿಸಿದರು.

    ದೇಶದ್ರೋಹಿ ಘೊಷಣೆಗಳನ್ನು ಕೂಗಿದ ವಿದ್ಯಾರ್ಥಿಗಳ ಪರವಾಗಿ ಯಾರೂ ವಕಾಲತ್ತು ವಹಿಸಬಾರದು ಎಂದು ಹುಬ್ಬಳ್ಳಿ, ಧಾರವಾಡ ವಕೀಲರು ನಿರ್ಧಾರ ಮಾಡಿದ್ದರು. ಬೆಂಗಳೂರು ಮೂಲದ ವಕೀಲರಿಬ್ಬರು ಫೆ. 24ರಂದು ಧಾರವಾಡಕ್ಕೆ ಆಗಮಿಸಿ ಜಾಮೀನು ಅರ್ಜಿ ದಾಖಲಿಸಲು ಬಂದ ವೇಳೆ ವಕೀಲರು ಪ್ರತಿರೋಧ ಒಡ್ಡಿದ್ದರು. ನಿಯಮಾನುಸಾರ ಅರ್ಜಿ ಸಲ್ಲಿಸಲು ಪಟ್ಟು ಹಿಡಿದು ಘೊಷಣೆ ಕೂಗಿದ್ದರು.

    ಪ್ರತಿರೋಧವನ್ನು ಪ್ರಶ್ನಿಸಿ ವಕೀಲರು ಬೆಂಗಳೂರು ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋಗಿದ್ದರು. ಆರೋಪಿತ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ದಾಖಲು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ವಕೀಲರಿಗೆ ಜಾಮೀನು ಅರ್ಜಿ ದಾಖಲಿಸಲು ಪೊಲೀಸರು ರಕ್ಷಣೆ ಒದಗಿಸಬೇಕು ಹಾಗೂ ವಕಾಲತು ವಹಿಸುವುದನ್ನು ವಿರೋಧ ಮಾಡಕೂಡದು ಎಂದು ಹೈಕೋರ್ಟ್ ಗುರುವಾರ ಆದೇಶಿಸಿತ್ತು.

    ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಮೂವರು ವಿದ್ಯಾರ್ಥಿಗಳಿಂದ ದಾಖಲೆಗಳಿಗೆ ಸಹಿ ಪಡೆದ ವಕೀಲರು, ಅಲ್ಲಿಂದ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿ ಜಾಮೀನು ಅರ್ಜಿ ದಾಖಲಿಸಿ ಮರಳಿದರು.

    ಪೊಲೀಸರ ಬಿ ಪ್ಲಾನ್ ಯಶಸ್ವಿ: ಭದ್ರತಾ ದೃಷ್ಟಿಯಿಂದ ಪೊಲೀಸರು ವಕೀಲರನ್ನು ಹಿಂಬಾಲಿನಿಂದ ನ್ಯಾಯಾಲಯದ ಒಳಗೆ ಕರೆದೊಯ್ದರು. ವಕೀಲರು ಬೆಳಗ್ಗೆ 11ರ ಸುಮಾರಿಗೆ ಆಗಮಿಸುತ್ತಾರೆ ಎಂಬುದು ಗೊತ್ತಾಗಿ ಸಾರ್ವಜನಿರು ಜಮಾಯಿಸಿದ್ದರು. ಅಲ್ಲದೆ, ವಕೀಲರಿಂದ ಮತ್ತೆ ಪ್ರತಿರೋಧ ವ್ಯಕ್ತವಾಗುವ ಸಂಶಯವಿತ್ತು. ಪೊಲೀಸರು 3 ವಾಹನಗಳನ್ನು ಕೋರ್ಟ್ ಮುಂಬಾಗಿಲ ಬಳಿ ನಿಲ್ಲಿಸಿ ಸಾರ್ವಜನಿಕರು ಹಾಗೂ ವಕೀಲರ ಗಮನವನ್ನು ಬೇರೆಡೆ ಸೆಳೆದರು. ಭಾರಿ ಬಂದೋಬಸ್ತ್​ನಲ್ಲಿ ಮುಂಬಾಗಿಲಿನಿಂದಲೇ ವಕೀಲರು ಒಳಗೆ ಹೋಗುತ್ತಾರೆ ಎಂದು ಬಿಂಬಿಸಿದರು. ಆದರೆ, ಹಿಂಬಾಗಿಲಿನಿಂದ ಒಳಕ್ಕೆ ಕರೆದೊಯ್ಯಲ್ಪಟ್ಟ ವಕೀಲರು ನ್ಯಾಯಾಲಯದ ಸಿಇಒ ಮೂಲಕ ಜಾಮೀನು ಅರ್ಜಿ ಸಲ್ಲಿಸಿ ಕೆಲವೇ ಕ್ಷಣಗಳಲ್ಲಿ ಪೊಲೀಸ್ ಭದ್ರತೆಯಲ್ಲಿ ಹಿಂಬಾಗಿಲಿನಿಂದಲೇ ವಾಪಸಾದರು.

    ಭಾರತ ಮಾತಾಕಿ ಜೈ: ಮಾಧ್ಯಮದವರು ಹಾಗೂ ಸಾರ್ವಜನಿಕರ ಕಣ್ತಪ್ಪಿಸಿದ ಪೊಲೀಸರು ವಕೀಲರನ್ನು ವಾಹನದಲ್ಲಿ ವಾಪಸ್ ಕರೆದೊಯ್ಯುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಭಾರತ ಮಾತಾಕಿ ಜೈ ಘೊಷಣೆಗಳನ್ನು ಕೂಗಿದರು.

    ನಿಷೇಧಾಜ್ಞೆ ಜಾರಿ: ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ನ್ಯಾಯಾಲಯದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೈಕೋರ್ಟ್ ನಿರ್ದೇಶನದ ಮೇರೆಗೆ ಹು-ಧಾ ಪೊಲೀಸರು ಭಾರಿ ಬಂದೋಬಸ್ತ್ ಏರ್ಪಡಿಸಿದ್ದರು. ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಾಮೀನು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುವವರೆಗೆ ಉಪಸ್ಥತರಿದ್ದರು. ಎಸ್​ಪಿ, ಇಬ್ಬರು ಡಿಸಿಪಿ, ಮೂವರು ಡಿವೈಎಸ್ಪಿ, 10 ಜನ ಇನ್​ಸ್ಪೆಕ್ಟರ್ ಸೇರಿ ಅಂದಾಜು 500 ಪೊಲೀಸರನ್ನು ನಿಯೋಜಿಸಲಾಗಿತ್ತು. 5 ಕೆಎಸ್​ಆರ್​ಪಿ, 2 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

    ದೇಶವಿರೋಧಿಗಳಿಗೆ ಬೆಂಬಲ ಇಲ್ಲ: ದೇಶ ವಿರೋಧಿ ಘೊಷಣೆಗಳನ್ನು ಕೂಗಿದ ವಿದ್ಯಾರ್ಥಿಗಳಿಗೆ ನಮ್ಮ ವಕಾಲತ್ ಬೆಂಬಲ ಇಲ್ಲ. ಬೆಂಗಳೂರು ನ್ಯಾಯಾಲಯ ವಕೀಲರಿಗೆ ಜಾಮೀನು ಅರ್ಜಿ ದಾಖಲಿಸಲು ಅವಕಾಶ ನೀಡಬೇಕು ಎಂದು ಆದೇಶಿಸಿದ್ದರಿಂದ ಅರ್ಜಿ ದಾಖಲಿಸಲು ಅನುವು ಮಾಡಿಕೊಟ್ಟಿದ್ದೇವೆ. ಹಾಗಂತ ನಾವು ದೇಶ ವಿರೋಧಿಗಳಿಗೆ ಬೆಂಬಲ ಸೂಚಿಸಿಲ್ಲ ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಗೋಡ್ಸೆ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ಬಂದಾಗ ಕ್ರಮಬದ್ಧವಾಗಿ ಅರ್ಜಿ ದಾಖಲಿಸಿ ಎಂದು ನ್ಯಾಯಾಧೀಶರು ಸೂಚಿಸಿದ್ದರು. ಇಂದು ಅವರು ಮತ್ತೆ ಬಂದು ಜಾಮೀನು ಅರ್ಜಿ ದಾಖಲಿಸಿ ಹೋಗಿದ್ದಾರೆ. ಅವರಿಗೆ ಧಾರವಾಡ ವಕೀಲರು ಪ್ರತಿರೋಧ ಒಡ್ಡಬಾರದು ಎಂದು ನ್ಯಾಯಾಲಯ ಆದೇಶ ಮಾಡಿದ್ದರಿಂದ ಸುಮ್ಮನಾಗಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts