More

    ಕಾವೇರಿ ನದಿ ಉತ್ಸವ ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿ

    ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮದಿಂದ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜೀವನದಿ ಕಾವೇರಿಯ ಸ್ವಚ್ಛತೆ ಹಾಗೂ ಪಾವಿತ್ರ್ಯತೆ ದೃಷ್ಟಿಯಿಂದ ಅ. 21ರಂದು ಆಯೋಜಿಸಿರುವ ಕಾವೇರಿ ನದಿ ಉತ್ಸವವನ್ನು ಅರ್ಥಪೂರ್ಣವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮನವಿ ಮಾಡಿದರು.


    ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಘಟನೆಯಿಂದ ವಾಸವಿ ಮಹಲ್ ಸಭಾಂಗಣದಲ್ಲಿ ಶನಿವಾರ ವಿವಿಧ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಕಾವೇರಿ ನದಿ ಉತ್ಸವದ ಕುರಿತು ಚರ್ಚಿಸಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


    ಭವಿಷ್ಯದ ದೃಷ್ಟಿಯಿಂದ ನದಿ ನೀರನ್ನು ಕಲುಷಿತಗೊಳಿಸದೆ, ಮುಂದಿನ ಪೀಳಿಗೆಗೆ ಶುದ್ಧ ನೀರನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.


    ಕಾವೇರಿ ನದಿ ಮಹತ್ವದ ಬಗ್ಗೆ ಜಾಗೃತಿ: ಕಾವೇರಿ ನದಿ ಉತ್ಸವ ಆಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ಕಾವೇರಿ ನದಿ ಸ್ವಚ್ಛತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅ.21ರಂದು ನಡೆಯುವ ಕಾವೇರಿ ನದಿ ಉತ್ಸವಕ್ಕೆ ಕರ್ನಾಟಕ ಮತ್ತು ತಮಿಳುನಾಡಿನ ಸಾಧು-ಸಂತರು, ಸ್ವಾಮೀಜಿಗಳು ಆಗಮಿಸಲಿದ್ದು, ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸುವಂತೆ ಕೋರಿದರು.


    ಕಾವೇರಿ ನದಿ ಉತ್ಸವವನ್ನು ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಅವರನ್ನು ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಕಾವೇರಿ ನದಿಗೆ ಆರತಿ: 12 ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ನದಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕಾವೇರಿ ನದಿಯ ಮಹತ್ವ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ನದಿ ಉತ್ಸವ ಸಂದರ್ಭದಲ್ಲಿ ಭಾಗಮಂಡಲ ಹಾಗೂ ಕುಶಾಲನಗರದಲ್ಲಿ ಕಾವೇರಿ ನದಿ ದಂಡೆಯಲ್ಲಿ ಆರತಿ ಹಮ್ಮಿಕೊಳ್ಳಲಾಗಿದೆ. ಆ ದಿನವಿಡೀ ಉತ್ಸವದ ಅಂಗವಾಗಿ ಕುಶಾಲನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಗರದ ಅಲಂಕಾರ ಸೇರಿದಂತೆ ಕಲಾ ತಂಡಗಳ ಮೂಲಕ ಸಾಂಸ್ಕೃತಿಕ ಮೆರವಣಿಗೆ, ಸಂಜೆ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ನದಿಯಲ್ಲಿ ಮಹಾ ಆರತಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.


    ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ನದಿಯ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದರು.


    ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಮಾತನಾಡಿ, ಎಲ್ಲ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ನದಿ ಉತ್ಸವಕ್ಕೆ ಸಹಕರಿಸುವಂತೆ ಮನವಿ ಮಾಡಿದರು.ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.


    ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುರೈಯಾಬಾನು, ಕಾವೇರಿ ಆರತಿ ಸಮಿತಿ ಸಂಚಾಲಕಿ ವನಿತಾ ಚಂದ್ರಮೋಹನ್, ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ರಮೇಶ್, ಕರವೇ ಅಧ್ಯಕ್ಷ ವೆಂಕಟೇಶ್ ಪೂಜಾರಿ, ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಆರೋಗ್ಯ ನಿರೀಕ್ಷಕ ಉದಯ್ ಕುಮಾರ್, ಪ್ರಮುಖರಾದ ಎಚ್.ವಿ.ಶಿವಪ್ಪ, ಪ್ರಕಾಶ್, ಕೆ.ಜಿ.ಮನು, ಎನ್.ಟಿ.ಸಿ.ಯ ಅಬ್ದುಲ್ ಸಲಾಂ, ಕೆ.ವರದ, ಟಿ.ಸಿ.ಮಂಜುನಾಥ್, ಫಿಲಿಪ್ ವಾಸ್, ರಾಧಾ, ವೇದಾವತಿ, ಅನಿತಾ, ಎನ್.ಟಿ.ಜೋಸೆಫ್, ಜಗದೀಶ್, ಕೆ.ಬಿ.ರಾಜು, ಎಸ್.ಕೆ.ಮಂಜುನಾಥ್, ರಾಧಾ, ಫಿಲೋಮಿನಾ, ಕೂಡಿಗೆ ಚಂದ್ರು, ವಿ.ಆರ್.ಮಂಜುನಾಥ್, ಸಿ.ಎಂ.ಗಣಿಪ್ರಸಾದ್, ಸೋಮಶೇಖರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts