More

    ಕಾಲುವೆಗಳಿಗೆ 6 ದಿನ ನೀರು ಹರಿಸಲು ತೀರ್ಮಾನ

    ಮುದ್ದೇಬಿಹಾಳ: ಕೃಷ್ಣಾ ಮೇಲ್ದಂಡೆ ಯೋಜನೆಯಡಿಯ ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸಿ ಮತ್ತು ನಾರಾಯಣಪುರದ ಬಸವಸಾಗರ ಜಲಾಶಯಗಳ ಎಲ್ಲ ಕಾಲುವೆಗಳ ಮುಖಾಂತರ ಸೋಮವಾರ ಬೆಳಿಗ್ಗೆಯಿಂದಲೇ ಆರು ದಿನ ನೀರು ಹರಿಸಿ ಹಾನಿಯ ಆತಂಕದಲ್ಲಿದ್ದ ರೈತರ ಮೆಣಸಿನಕಾಯಿ, ಬೇಸಿಗೆ ಶೇಂಗಾ ಬೆಳೆ ರಕ್ಷಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು.

    ಪಟ್ಟಣದ ಹುಡ್ಕೋದಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಲಸಂಪನ್ಮೂಲ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ತಮ್ಮ ಅನಾರೋಗ್ಯದ ನಡುವೆಯೂ ಎರಡೂ ಜಲಾಶಯ ವ್ಯಾಪ್ತಿಯಲ್ಲಿ ಬರುವ ಸಚಿವರು, ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಈ ವಿಷಯ ತಿಳಿಸಿದ್ದಾರೆ. ಇದರಿಂದ ಜಲಾಶಯ ವ್ಯಾಪ್ತಿಯ ಶಾಸಕರ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ. ಬೆಳೆ ಹಾನಿಯ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಆತಂಕ ದೂರವಾದಂತಾಗಿದೆ ಎಂದರು.

    ಉಪಮುಖ್ಯಮಂತ್ರಿ ಅವರ ಆಶಯದಂತೆ ಕಾಲುವೆಯಲ್ಲಿ ಹರಿಯುವ ಹನಿ ನೀರು ಸಹಿತ ಪೋಲಾಗದಂತೆ ಸಮರ್ಪಕ ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ರೈತರ ಮೇಲಿದೆ. ಆಲಮಟ್ಟಿ ಜಲಾಶಯದ ಎಡದಂಡೆ, ಬಲದಂತೆ ಕಾಲುವೆಗಳು, ಚಿಮ್ಮಲಗಿ ಏತ ನೀರಾವರಿಯ ಪೂರ್ವ ಮತ್ತು ಪಶ್ಚಿಮ ಕಾಲುವೆಗಳು, ನಾರಾಯಣಪುರ ಜಲಾಶಯದ ಎಡ ಮತ್ತು ಬಲದಂಡೆ ಸೇರಿ ಎಲ್ಲ ಏತ ನಿರಾವರಿಗಳ ಮೂಲಕ ಈ ನೀರು ಹರಿಯಲಿದೆ ಎಂದರು.

    ಆಲಮಟ್ಟಿ ಜಲಾಶಯ ವ್ಯಾಪ್ತಿಯ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಅಂದಾಜು 4000 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ, ಶೇಂಗಾ ಮತ್ತಿತರ ಬೆಳೆ ಬೆಳೆಯಲಾಗಿದೆ. ಸಕಾಲಕ್ಕೆ ನೀರು ದೊರಕದೆ ರೈತರು ಭಾರೀ ಹಾನಿ ಎದುರಿಸುವ ಆತಂಕ ಉಂಟಾಗಿತ್ತು. ಈ ಕುರಿತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ- ಸಚಿವ ಆರ್.ಬಿ.ತಿಮ್ಮಾಪುರ ಅವರ ಮೂಲಕ ಜಲಸಂಪನ್ಮೂಲ ಸಚಿವರು ಹಾಗೂ ಮುಖ್ಯಮಂತ್ರಿಗೆ ಜಲಾಶಯಗಳ ವ್ಯಾಪ್ತಿಯ ಎಲ್ಲ ಶಾಸಕರು ಒತ್ತಡ ಹೇರಿದ್ದರಿಂದ ಈ ತೀರ್ಮಾನ ಹೊರಬಿದ್ದಿದೆ ಎಂದರು.

    ಉಪಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಮಾಹಿತಿ ಪಡೆದುಕೊಂಡು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ ಆರು ದಿನಗಳವರೆಗೆ ಮಾತ್ರ ಜಲಾಶಯಗಳಿಂದ ನೀರು ಹರಿಸುವ ತೀರ್ಮಾನ ಕೈಕೊಂಡಿದ್ದಾರೆ. ಇದನ್ನು ವಿಸ್ತರಿಸುವ ಸಾಧ್ಯತೆಗಳು ಇಲ್ಲ. ರೈತರು ಇರುವ ಅತ್ಯಲ್ಪ ಅವಧಿಯಲ್ಲೇ ಸಮರ್ಪಕವಾಗಿ ನೀರು ಹರಿಸಿಕೊಳ್ಳಬೇಕಿದೆ ಎಂದರು.

    ಬೇಸಿಗೆ ಗಂಭೀರವಾಗಿರುವ ಈ ಹಂತದಲ್ಲಿ ಜಲಾಶಯಗಳಲ್ಲಿ ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಕಾಯ್ದಿಡಲೇಬೇಕೆನ್ನುವ ಅನಿವಾರ್ಯತೆ ಸರ್ಕಾರಕ್ಕಿದೆ. ಮಹಾರಾಷ್ಟ್ರದಿಂದ ಇದುವರೆಗೂ ಹೆಚ್ಚುವರಿ ನೀರು ನಮ್ಮ ಜಲಾಶಯಗಳಿಗೆ ಹರಿದು ಬಂದಿಲ್ಲ. ಜಲಾಶಯದಲ್ಲಿ ಸಂಗ್ರಹಿಸಲಾಗಿರುವ ನೀರು ಬಿಸಿಲಿಗೆ ಆವಿಯಾಗುವುದು ಮತ್ತು ಇನ್ನಿತರ ಕಾರಣಗಳಿಂದಾಗಿ ಕುಂಠಿತವಾಗುವುದು ಸಹಜ. ಇದರ ನಡುವೆ ಕುಡಿಯುವ ಉದ್ದೇಶಕ್ಕಾಗಿ ಕಾಯ್ದಿರಿಸುವುದು ಅತಿ ಅವಶ್ಯ. ಇದನ್ನು ಗಮನದಲ್ಲಿಟ್ಟುಕೊಂಡೇ ಹೆಚ್ಚುವರಿಯಾಗಿ ಆರು ದಿನಗಳವರೆಗೆ ನೀರು ಬಿಡಲು ತೀರ್ಮಾನಿಸಿರುವುದು ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಸರ್ಕಾರ ರೈತರ ಪರ ಇದೆ ಅನ್ನೋದನ್ನು ತೋರಿಸಿಕೊಡುತ್ತದೆ ಎಂದರು.

    ರಾಯನಗೌಡ ತಾತರಡ್ಡಿ, ಗುರು ದೇಶಮುಖ, ಮಹಾಂತೇಶ ಗಂಗನಗೌಡರ (ಎಂಎಜಿ) ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts