More

    ಕಾಲುಬಾಯಿಗೆ ಚಿಕಿತ್ಸೆ ಅ. 2ರಿಂದ

    ಗದಗ: ದನಕರುಗಳ ಜೀವ ಹಿಂಡುವ ಕಾಲುಬಾಯಿ ರೋಗದಿಂದ ಜಿಲ್ಲೆಯನ್ನು ಮುಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಗ್ರಾಮಗಳ ಪ್ರತಿ ಮನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದರು.

    ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಲುಬಾಯಿ ರೋಗ ನಿಯಂತ್ರಣ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಈ ಲಸಿಕಾ ಕಾರ್ಯಕ್ರಮ ಅ. 2ರಿಂದ ನ. 15ರವರೆಗೆ ನಡೆಯಲಿದೆ. 3 ತಿಂಗಳು ಮೇಲ್ಪಟ್ಟ ಎತ್ತು, ಹೋರಿ, ಹಸು, ಎಮ್ಮೆ, ಹಂದಿಗಳಿಗೆ ಪ್ರತಿ 6 ತಿಂಗಳಿಗೊಮ್ಮೆ ಈ ಲಸಿಕೆಯನ್ನು ಉಚಿತವಾಗಿ ಹಾಕಲಾಗುವುದು. ರೈತರಲ್ಲಿ ಲಸಿಕಾ ಕಾರ್ಯಕ್ರಮದ ಕುರಿತು ಗ್ರಾಪಂ ವ್ಯಾಪ್ತಿ, ಆಸ್ಪತ್ರೆಗಳಲ್ಲಿ ಭಿತ್ತಿಚಿತ್ರಗಳು, ಕರಪತ್ರಗಳ ಅಳವಡಿಸಬೇಕು. ಜಾನುವಾರುಗಳಿಗೆ ಸೂಕ್ತ ಲಸಿಕೆಗಳನ್ನು ಹಾಕಿಸಿ ಸಾಂಕ್ರಾಮಿಕ ರೋಗಗಳಿಂದ ಕಾಪಾಡಬೇಕು ಎಂದರು.

    ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಜೆ.ಪಿ. ಮನಗೂಳಿ ಮಾತನಾಡಿ, ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 16 ಸುತ್ತು ಲಸಿಕಾ ಕಾರ್ಯಕ್ರಮ ನಿರ್ವಹಿಸಲಾಗಿದೆ. ಇದು 17ನೇ ರಾಷ್ಟ್ರೀಯ ಕಾರ್ಯಕ್ರಮದ ಮೊದಲನೇ ಸುತ್ತು. 16 ಲಸಿಕಾ ತಂಡಗಳನ್ನು ರಚಿಸಿದ್ದು, ಪ್ರತಿ ತಂಡದಲ್ಲಿ 5 ಲಸಿಕೆದಾರರು, ಒಬ್ಬರು ಮೇಲ್ವಿಚಾರಕರು ಇರುತ್ತಾರೆ. 1,94,000 ಡೋಸ್​ಗಳಷ್ಟು ಲಸಿಕೆ ಪೂರೈಕೆಯಾಗಿದೆ ಎಂದು ತಿಳಿಸಿದರು.

    ನೀಲಿ ನಾಲಿಗೆ/ಬ್ಲೂಟಂಗ್ ರೋಗವು ಕುರಿಗಳಲ್ಲಿ ವೈರಾಣು, ಮಧ್ಯವರ್ತಿ ಕೀಟಗಳಿಂದ ಪ್ರಸಾರವಾಗುವ ರೋಗ. ಜೊಲ್ಲು, ಗೊಣ್ಣೆ, ಕ್ರಮೇಣ ರಕ್ತ ಮಿಶ್ರಿತ ಗೊಣ್ಣೆ ಸುರಿಯುವುದು, ಜ್ವರ, ಒಸಡಿನ ಮೇಲ್ಭಾಗದಲ್ಲಿ ಹುಣ್ಣು, ಬಾಯಿ, ಮೂಗಿನ ಪದರುವೆಲ್ಲ ಕೆಂಪಾಗಿ ತುಟಿ, ಒಸಡು, ನಾಲಿಗೆ, ತಲೆ ಊದಿಕೊಳ್ಳುವುದು, ಕುಂಟುವುದು, ಚರ್ಮ, ಗೊರಸು ಸಂಧಿಸುವ ಜಾಗದಲ್ಲಿ ಕಡುಕೆಂಪು ಅಥವಾ ನೀಲಿ ಪಟ್ಟಿ ಕಾಣಿಸುವುದು ಈ ರೋಗದ ಲಕ್ಷಣಗಳು. ರೋಗಗ್ರಸ್ಥ ಪ್ರಾಣಿಗಳನ್ನು ಬೇರ್ಪಡಿಸುವುದು, ಗಂಜಿ, ನೀರಿನಿಂದ ಆರೈಕೆ, ಒಸಡಿನ ಹುಣ್ಣುಗಳನ್ನು ಆಂಟಿಸೆಪ್ಟಿಕ್ ದ್ರಾವಣದಿಂದ ತೊಳೆಯುವುದು, ಕೀಟಗಳನ್ನು ದೂರವಿಡುವ ದ್ರಾವಣಗಳ ಸಿಂಪಡಣೆ, ಕೊಟ್ಟಿಗೆ ಸುತ್ತ ಬೇವಿನಸೊಪ್ಪಿನ ಹೊಗೆ ಹಾಕಬೇಕು. ಎಲ್ಲ ಕುರಿಗಳಿಗೆ ಮಳೆಗಾಲಕ್ಕಿಂತ ಒಂದು ತಿಂಗಳು ಮುಂಚೆ ಲಸಿಕೆ ಹಾಕಿಸಿದರೆ ರೋಗ ನಿಯಂತ್ರಿಸಬಹುದು ಎಂದರು.

    ಗದಗ, ಮುಂಡರಗಿ, ನರಗುಂದ, ರೋಣ, ಶಿರಹಟ್ಟಿ ತಾಲೂಕಾಸ್ಪತ್ರೆಗಳ ಸಹಾಯಕ ನಿರ್ದೇಶಕರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಲಕ್ಷಣಗಳಿಗೆ ತಕ್ಕಂತೆ ಔಷಧ

    ದನಕರುಗಳಲ್ಲಿ ಕಾಣಿಸುವ ಚರ್ಮಗಂಟು ಅಥವಾ ಚರ್ಮ ಮುದ್ದೆ ರೋಗ ಸಾಂಕ್ರಾಮಿಕ ಕಾಯಿಲೆ. ಕ್ಯಾಪ್ರಿಫಾಕ್ಸ್ ವೈರಾಣುವಿನಿಂದ ಬರುತ್ತದೆ. ಇದು ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವಿಕೆ, ನಿಶ್ಶಕ್ತಿ, ಕಾಲುಗಳಲ್ಲಿ ಬಾವು, ಕುಂಟುವುದು ಇದರ ಲಕ್ಷಣಗಳು. ಇದು ಕಲುಷಿತ ನೀರು, ಆಹಾರ, ದನಕರುಗಳ ನೇರ ಸಂಪರ್ಕ, ಸೊಳ್ಳೆ, ಉಣ್ಣೆ, ನೊಣ ಮತ್ತಿತರ ಕಚ್ಚುವ ಕೀಟಗಳು, ಮಳೆಗಾಲ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಹರಡುತ್ತದೆ. ಇದಕ್ಕೆ ಸೂಕ್ತ ಲಸಿಕೆ ಇಲ್ಲ. ಆದರೆ, ರೋಗ ಲಕ್ಷಣಗಳಿಗೆ ತಕ್ಕಂತೆ ದನಕರುಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts