More

    ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ – ಶಂಕರ ಪಾಟೀಲ ಮುನೇನಕೊಪ್ಪ

    ಬೆಳಗಾವಿ: ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ತಿಂಗಳ ಒಳಗಾಗಿ ಶಾಶ್ವತವಾಗಿ ಪರಿಹರಿಸುವ ಕೆಲಸ ಒಂದು ಹಂತಕ್ಕೆ ಬರಲಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭರವಸೆ ನೀಡಿದರು.

    ನಗರದ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಸಕ್ಕರೆ ಉದ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನ ಪರಿಷ್ಕರಣೆಯ ತ್ರಿಪಕ್ಷೀಯ ವೇತನ ಸಮಿತಿ ಸಭೆ ಹಾಗೂ ಕಾರ್ಮಿಕರ ಸಭೆಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳಲ್ಲಿನ ದುಡಿಯುವ ವರ್ಗಕ್ಕೆ ಅನ್ಯಾಯವಾಗಲು ಅವಕಾಶ ಕೊಡುವುದಿಲ್ಲ. ಕಾರ್ಮಿಕರ ಕನಿಷ್ಠ ವೇತನ, ಸೇವೆ ಕಾಯಂ ಸೇರಿ ಹಲವು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು ಎಂದರು.

    ಅಗತ್ಯ ಬಿದ್ದರೆ ಕಠಿಣ ಕ್ರಮ: ಈಗಾಗಲೇ ಕಾರ್ಮಿಕರಿಗೆ ವೇತನ, ಇತರ ಸಮಸ್ಯೆ ಪರಿಹರಿಸುವ ಕುರಿತು ರಚನೆಯಾಗಿರುವ ತ್ರಿಪಕ್ಷೀಯ ವೇತನ ಸಮಿತಿ ಸಭೆಗೆ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಭಾಗವಹಿಸದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಾರ್ಮಿಕರ ವಿಷಯದಲ್ಲಿ ಸರ್ಕಾರವು ಕಾರ್ಮಿಕ ಇಲಾಖೆಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಅವಶ್ಯ ಬಿದ್ದರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಅನುಷ್ಠಾನಕ್ಕೆ ಬಾರದ ಒಪ್ಪಂದ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಮಾತನಾಡಿ, 2009 ಮತ್ತು 2015ರ ಕಾರ್ಮಿಕರ ವೇತನ ಒಪ್ಪಂದ ಮುಗಿಯುತ್ತಿದ್ದರೂ ಬಹುತೇಕ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಆ ಒಪ್ಪಂದವನ್ನು ಅನುಷ್ಠಾನಕ್ಕೆ ತಂದಿಲ್ಲ. 5 ಬಾರಿ ದ್ವಿಪಕ್ಷೀಯ ಸಭೆ ನಡೆಸಿದರೂ ಸಕ್ಕರೆ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಜರಾಗುತ್ತಿಲ್ಲ. ವೇತನ, ಗ್ರಾೃಚ್ಯುಟಿ ಸೇರಿ ಇನ್ನಿತರ ಸೌಲಭ್ಯ ನೀಡುವಂತೆ ಸಕ್ಕರೆ ಕಾರ್ಖಾನೆಗಳಿಗೆ 3 ವರ್ಷ ಕಾಲಾವಕಾಶ ನೀಡಲಾಗಿತ್ತು. ಆದರೆ, ಇಲ್ಲಿಯವರೆಗೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಕಾರ್ಮಿಕ ಹಳೆಯ ವೇತನ ಒಪ್ಪಂದ ಅವಧಿ ಮುಗಿದಿದ್ದರೂ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಾರ್ಮಿಕರಿಗೆ ಸಿಗುತ್ತಿಲ್ಲ ಸೌಲಭ್ಯ: ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿ, ರಾಜ್ಯದಲ್ಲಿ 83 ಕಾರ್ಖಾನೆಗಳ ಪೈಕಿ 23 ಕಾರ್ಖಾನೆಗಳು ವಿವಿಧ ಕಾರಣಗಳಿಂದ ಬಂದ್ ಆಗಿವೆ. ಬಾಕಿ ಉಳಿದಿರುವ 50 ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ 19 ಕಾರ್ಖಾನೆಗಳು ಮಾತ್ರ ಕಾರ್ಮಿಕರ ವೇತನ ಒಪ್ಪಂದ ಅನುಷ್ಠಾನಕ್ಕೆ ತಂದಿವೆ. ಕಾರ್ಮಿಕರಿಗೆ ಕಾಲ ಕಾಲಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸಿಕೊಡುತ್ತಿವೆ. ಇನ್ನುಳಿದ ಕಾರ್ಖಾನೆಗಳಲ್ಲಿನ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು.

    ಜೀತಕ್ಕಿಂತ ಹೀನಾಯ ಸ್ಥಿತಿ: ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕ ಪ್ರಮಾಣಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಆದರೆ, ಇಲ್ಲಿನ ಆಡಳಿತ ಮಂಡಳಿಗಳು ಕಾರ್ಮಿಕರನ್ನು ಜೀತಕ್ಕಿಂತ ಹೀನಾಯ ಸ್ಥಿತಿಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿವೆ. 20 ವರ್ಷದಿಂದ ಕಲಿಕಾ ಹಂತ ಇಲ್ಲವೇ ದಿನಗೂಲಿ ನೌಕರರು ಎಂದು ದುಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಕಾರ್ಮಿಕರನ್ನು ಕಾಯಂ ಮಾಡಿಲ್ಲ. ಬೆಳಗಾವಿ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನವೂ ಇಲ್ಲ. ವೇತನ ಒಪ್ಪಂದ ಪ್ರಕಾರ ದಿನಕ್ಕೆ ಕನಿಷ್ಠ 612 ರೂ. ವೇತನ ನೀಡಬೇಕು. ಆದರೆ, ವಾಸ್ತವದಲ್ಲಿ 150ರಿಂದ 200 ರೂ. ನೀಡುತ್ತಿವೆ. ಕೆಲವು ಮಾಸಿಕ 4 ರಿಂದ 5 ಸಾವಿರ ರೂ. ವರೆಗೆ ದುಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕ ಸಂಘಟನೆ ರಚಿಸಲೂ ಅವಕಾಶ ಕಲ್ಪಿಸಿಕೊಡುತ್ತಿಲ್ಲ.

    ಅಂತಹ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಬೇಕು. ಹೊಸ ವೇತನ ಒಪ್ಪಂದ ಜಾರಿಗೊಳಿಸಲು ಕ್ರಮ ಜರುಗಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದರು. ಸಕ್ಕರೆ ಆಯುಕ್ತ ಅಕ್ರಮ ಪಾಷಾ, ಬಸವರಾಜ ಬೊಮ್ಮನಹಳ್ಳಿ, ಕಾರ್ಮಿಕ ಸಂಘಟನೆಗಳ ಮುಖಂಡ ಎಂ.ನಾಗರಾಜ, ವಿವಿಧ ಇಲಾಖೆ ಅಧಿಕಾರಿಗಳು, ಕಾರ್ಮಿಕರು ಇದ್ದರು.

    ಮುಧೋಳ ರನ್ನ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ: ಎರಡು ವರ್ಷದಿಂದ ಬಾಗಲಕೋಟೆ ಜಿಲ್ಲೆಯ ಮುಧೋಳದ ರನ್ನ ಸಕ್ಕರೆ ಕಾರ್ಖಾನೆ ಬಂದ್ ಆಗಿದೆ. ಇದರಿಂದ ರೈತರು, ಕಾರ್ಮಿಕರು ಸಮಸ್ಯೆ ಎದುರಿಸಬೇಕಾಗಿದೆ. ಹಾಗಾಗಿ, ಸರ್ಕಾರವು ಕೂಡಲೇ ಕಾರ್ಖಾನೆ ಆರಂಭಿಸುವ ಜತೆಗೆ ಕಾರ್ಮಿಕರ ವೇತನ ಪಾವತಿಗೆ ಕ್ರಮ ವಹಿಸಬೇಕು ಎಂದು ಕಾರ್ಮಿಕ ಮುಖಂಡರು ಸಚಿವ ಮುನೇನಕೊಪ್ಪ ಅವರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಮುನೇನಕೊಪ್ಪ, ಕಾರ್ಖಾನೆ ಪುನಶ್ಚೇತನಗೊಳಿಸಲು ಕ್ರಮ ವಹಿಸಲಾಗುವುದು. ಕಾರ್ಮಿಕರ ವೇತನ, ಸೌಲಭ್ಯ, ಬಾಕಿ ಬಿಲ್ ಸೇರಿ ಎಲ್ಲ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

    ಕನಿಷ್ಠ ವೇತನ ಪದ್ಧತಿಯಡಿ ಸಕ್ಕರೆ ಕಾರ್ಖಾನೆಗಳು ಸೇರ್ಪಡೆ ಆಗಿಲ್ಲ. ಹಾಗಾಗಿಯೇ ವೇತನ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕಾರ್ಮಿಕ ಮುಖಂಡರು, ಸಚಿವರ ಜತೆ ಸಭೆ ನಡೆಸಿ, ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು.
    | ಶಿವರಾಂ ಹೆಬ್ಬಾರ ಕಾರ್ಮಿಕ ಸಚಿವ

    ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ವಸತಿ ವರದಿ ಬಳಿಕವೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸರ್ಕಾರ ಕ್ರಮ ವಹಿಸಲಾಗಿದೆ. ಮುಖ್ಯಮಂತ್ರಿಳು ಅ.3ರಂದು ಸಕ್ಕರೆ ಆಯುಕ್ತರ ಕಚೇರಿ ಸುವರ್ಣ ವಿಧಾನಸೌಧದಕ್ಕೆ ಸ್ಥಳಾಂತರ ಸೂಚಿಸಿದ್ದಾರೆ. ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತರ ಕಚೇರಿ ಸ್ಥಳಾಂತರಕ್ಕೂ ಕ್ರಮ ವಹಿಸಲಾಗುವುದು.
    | ಶಂಕರ ಪಾಟೀಲ ಮುನೇನಕೊಪ್ಪ ಸಕ್ಕರೆ ಸಚಿವ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts